ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಒಂದೇ ಕುಟುಂಬ ರಾಜಕೀಯ ಜಿದ್ದಾಜಿದ್ದನ ಕಣವಾಗಿ ಮಾರ್ಪಟ್ಟಿದೆ. ಶರದ್ ಪವಾರ್ ಕುಟುಂಬದ ಇಬ್ಬರು ಮಹಿಳಾ ಅಭ್ಯರ್ಥಿಗಳು ಪರಸ್ಪರ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದಾರೆ. ಬಾರಾಮತಿಯಲ್ಲಿ ಶರದ್ ಪವಾರ್ ಮಗಳು, ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಮಹಾ ಮುಖ್ಯಮಂತ್ರಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಸ್ಪರ್ಧಿಸಿದ್ದಾರೆ. ಸದ್ಯ ಕ್ಷೇತ್ರವು ಅತ್ತಿಗೆ-ನಾದಿನಿಯರ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಮಹಾರಾಷ್ಟ್ರದಲ್ಲಿ ರಾಜಕೀಯ ವೈರುದ್ಯಗಳಲ್ಲಿ ಶಿವಸೇನೆಯಂತೆ ಎನ್‌ಸಿಪಿ ಕೂಡ ಇಬ್ಬಾಗವಾಗಿದೆ. ಅಜಿತ್ ಪವಾರ್ (ಶರದ್ ಪವಾರ್ ಅಣ್ಣನ ಮಗ) ಬಣ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದೆ. ಶರದ್ ಪವಾರ್ ಅವರ ಬಣವು ಕಾಂಗ್ರೆಸ್ ಜೊತೆಗೆ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದೆ.
ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿರುವ ಸುನೇತ್ರಾ ಪವಾರ್, “ಇದು ನನಗೆ ಅದೃಷ್ಟದ ದಿನವಾಗಿದೆ. ನಾನು ಚುನಾವಣೆಯಲ್ಲಿ ಹೋರಾಡಲು ಸಮರ್ಥಳೆಂದು ಪರಿಗಣಿಸಿದ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಮಹಾಯುತಿಯ (ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿ) ಎಲ್ಲ ನಾಯಕರಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.
ಬಾರಾಮತಿಯಲ್ಲಿನ ಚುನಾವಣಾ ಹೋರಾಟವು ಸಿದ್ಧಾಂತ ಮತ್ತು ತತ್ವಗಳದ್ದಾಗಿದೆಯೇ ಹೊರತು ಕುಟುಂಬವಲ್ಲ ಎಂದು ಎನ್‌ಸಿಪಿ (ಶರದ್ ಬಣ) ರಾಜ್ಯಾಧ್ಯಕ್ಷ ಸುನಿಲ್ ತಟ್ಕರೆ ಹೇಳಿದ್ದಾರೆ.
ಬಾರಾಮತಿಯು ಶರದ್ ಪವಾರ್ ಅವರ ಎನ್‌ಸಿಪಿಯ ಭದ್ರಕೋಟೆಯಾಗಿದೆ. 1999ರಲ್ಲಿ ಆರಂಭವಾಗಿದ್ದ ಎನ್‌ಸಿಪಿ, 2023ರ ಜುಲೈನಲ್ಲಿ ಇಬ್ಬಾಗವಾಗಿಯಿತು. ಶಿವಸೇನೆ (ಏಕನಾಥ್ ಶಿಂಧೆ ಬಣ) ನೇತೃತ್ವದ ಸರ್ಕಾರದೊಂದಿಗೆ ಅಜಿತ್ ಪವಾರ್ ಅವರ ಎನ್‌ಸಿಪಿ ಬಣ ಕೈಜೋಡಿಸಿದೆ. ಎನ್‌ಸಿಪಿ ವಿಭಜನೆಯ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಬಾರಾಮತಿ ಕ್ಷೇತ್ರವು ಜಿದ್ದಿನ ಚುನಾವಣಾ ಕದನಕ್ಕೆ ಸಾಕ್ಷಿಯಾಗಲಿದೆ.
2019ರ ಚುನಾವಣೆಯಲ್ಲಿ, ಸುಪ್ರಿಯಾ ಸುಳೆ ಅವರು ಎನ್‌ಸಿಪಿ ಅಭ್ಯರ್ಥಿಯಾಗಿ ಬಾರಾಮತಿ ಕ್ಷೇತ್ರದಲ್ಲಿ ಗೆದ್ದು, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.




