ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರ ಪಕ್ಷ ಟಿವಿಕೆ ಜತೆ ಯಾವುದೇ ಮೈತ್ರಿಯಿಲ್ಲ. ಅಂತಹ ನಟರು ರಾಜಕೀಯಕ್ಕೆ ಬರ್ತಾರೆ, ಹೋಗ್ತಾರೆ. ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರಲ್ಲ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿಯ ತಮಿಳುನಾಡು ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್ ಶನಿವಾರ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೋಯಲ್ ಅವರು, “ವಿಜಯ್ ಚುನಾವಣೆಗಳ ಮೇಲೆ ಯಾವ ಪರಿಣಾಮ ಬೀರುತ್ತಾರೆಂದು ನನಗೆ ತಿಳಿದಿಲ್ಲ. ಆದರೆ ನಾನು ಅನೇಕ ಚಲನಚಿತ್ರ ತಾರೆಯರು ರಾಜಕೀಯಕ್ಕೆ ಬಂದು ಹೋಗಿರುವುದನ್ನು ನೋಡಿದ್ದೇನೆ. ಕಮಲ್ ಹಾಸನ್ ಯಾವುದೇ ಪ್ರಭಾವವಿಲ್ಲದೆ ಬಂದಿರುವುದನ್ನು ನಾವು ನೋಡಿದ್ದೇವೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು | ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 10 ಮಂದಿ ಸಾವು
“ಅಭಿಮಾನಿಗಳನ್ನು ಹೊಂದಿರುವುದು ಬೇರೆಯೇ ವಿಚಾರ, ಅವರನ್ನು ತಮ್ಮ ಮತದಾರರನ್ನಾಗಿ ಪರಿವರ್ತಿಸುವುದು ಸಂಪೂರ್ಣವಾಗಿ ಬೇರೆಯೇ ವಿಚಾರ. ಬಿಜೆಪಿ ವಿಜಯ್ ಅವರನ್ನು ಓಲೈಸುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ತಮಿಳುನಾಡಿನಲ್ಲಿ ಗೆಲ್ಲುವ ವಿಶ್ವಾಸವನ್ನು ಈ ಸಂದರ್ಭದಲ್ಲೇ ಗೋಯಲ್ ವ್ಯಕ್ತಪಡಿಸಿದ್ದಾರೆ. “ಡಿಎಂಕೆ ಸರ್ಕಾರದ ವಿರುದ್ಧ ತೀವ್ರವಾದ ಆಡಳಿತ ವಿರೋಧಿ ಅಲೆ ಇದೆ. ಅದು ಅಸಮರ್ಥ ಮತ್ತು ಅತಿ ಭ್ರಷ್ಟ ಸರ್ಕಾರ” ಎಂದು ದೂರಿದ್ದಾರೆ.
“ಉದಯನಿಧಿ ಸ್ಟಾಲಿನ್ (ತಮಿಳುನಾಡು ಉಪಮುಖ್ಯಮಂತ್ರಿ) ಸಂಪೂರ್ಣವಾಗಿ ತಮಿಳು ವಿರೋಧಿ ಸಂಸ್ಕೃತಿ ಮತ್ತು ಭಾರತ ವಿರೋಧಿ ನಿಲುವನ್ನು ಹೊಂದಿರುವವರು. ಅವರು ಬಳಸುವ ಭಾಷೆ ತಮಿಳು ಸಂಸ್ಕೃತಿಯಲ್ಲ. ತಮಿಳು ಸಂಸ್ಕೃತಿ ನಮಗೆ ಸಹಿಷ್ಣುತೆಯನ್ನು ಕಲಿಸುತ್ತದೆ. ವಿಭಿನ್ನ ಚಿಂತನೆ, ಸಿದ್ಧಾಂತಗಳು ಮತ್ತು ಧರ್ಮಗಳನ್ನು ಆಚರಿಸಲು ನಮಗೆ ಕಲಿಸುತ್ತದೆ” ಎಂದೂ ಹೇಳಿದ್ದಾರೆ.





