ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಎರಡು ಗಂಟೆಗಳ ಕಾಲ ನಿಲ್ಲಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮಂಗಳವಾರ ಹೇಳಿದ್ದಾರೆ.
“ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿ ಯುದ್ಧವನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ, ಆದರೆ ಪ್ರಧಾನಿ ಮೋದಿ ಅವರು ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಎರಡು ಗಂಟೆಗಳ ಕಾಲ ನಿಲ್ಲಿಸಿದರು” ಎಂದು ಶಿಂದೆ ವಿಧಾನಸಭೆಯಲ್ಲಿ ಹೇಳಿದರು.
“ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದಾಗ, ಅನೇಕ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡರು. ಆ ವೇಳೆ ಇಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಹೊರತರುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದರು. ಅದರ ನಂತರ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ಮೋದಿ ಎರಡು ಗಂಟೆಗಳ ಕಾಲ ಯುದ್ಧವನ್ನು ಯಶಸ್ವಿಯಾಗಿ ನಿಲ್ಲಿಸಿದರು” ಎಂದಿದ್ದಾರೆ.
ಇದನ್ನು ಓದಿದ್ದೀರಾ? ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದ್ದೆ ಎಂದಿದ್ದ ಮೋದಿಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲಾಗುತ್ತಿಲ್ಲ: ರಾಹುಲ್ ಗಾಂಧಿ
ಇನ್ನು ಇದೇ ಸಂದರ್ಭದಲ್ಲಿ ತಮ್ಮ ಸರ್ಕಾರವು ಛತ್ರಪತಿ ಶಿವಾಜಿ ಮಹಾರಾಜರ ‘ಹುಲಿ ಪಂಜ’ ಅಸ್ತ್ರವನ್ನು ಲಂಡನ್‌ನಿಂದ ವಿಧಾನಸಭಾ ಚುನಾವಣೆಗೂ ಮುನ್ನ ತರಲಿದೆ ಎಂದು ಶಿಂದೆ ತಿಳಿಸಿದರು. 1659ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ಅವರನ್ನು ಸೋಲಿಸಲು ಶಿವಾಜಿ ಅಸ್ತ್ರವನ್ನು ಬಳಸಿದ್ದರು.
ಇನ್ನು ಈ ಸಂದರ್ಭದಲ್ಲೇ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಅವರು, “ಕಾಂಗ್ರೆಸ್ ಬಡತನ ನಿರ್ಮೂಲನೆಯ ಬಗ್ಗೆ ಮಾತನಾಡುತ್ತದೆ. ಆದರೆ ಅವರು ಅದನ್ನು ಮಾಡಿದ್ದಾರೆಯೇ? ಪ್ರಧಾನಿ ಮೋದಿಯವರು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದಾರೆ” ಎಂದು ಹೇಳಿಕೊಂಡರು.
ಉಕ್ರೇನ್ ಯುದ್ಧವನ್ನು ಪ್ರಧಾನಿ 2 ಗಂಟೆಗಳ ಕಾಲ ನಿಲ್ಲಿಸಿದ್ದರು ಎಂಬ ಬಿಜೆಪಿ ನಾಯಕರ ಹೇಳಿಕೆಯು ಈಗಾಗಲೇ ಭಾರೀ ಟ್ರೋಲ್‌ಗೆ ಒಳಗಾಗಿದೆ. ಉಕ್ರೇನ್ ಯುದ್ಧವನ್ನು ನಿಲ್ಲಿಸಿದ ಪ್ರಧಾನಿಗೆ ಮಣಿಪುರದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಯುದ್ಧ ನಿಲ್ಲಿಸುವಂತಹ ಸಾಮರ್ಥ್ಯ ಇದೆ ಎಂದಾದರೆ ಉಕ್ರೇನ್ ರಷ್ಯಾ ಯುದ್ಧವು ಕೊನೆಯಾಗುವಂತೆ ಮಾಡಲಿ ಎಂದು ನೆಟ್ಟಿಗರು ಹೇಳಿದ್ದಾರೆ.





