ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳ್ಳತನದ ಅಭ್ಯಾಸವಿದೆ. ಮತ ಕಳ್ಳತನ, ಹಣ ಕಳ್ಳತನ, ಬ್ಯಾಂಕ್‌ಗಳನ್ನು ಲೂಟಿ ಮಾಡುವವರನ್ನು ರಕ್ಷಿಸುವುದು ಅವರ ಅಭ್ಯಾಸವಾಗಿದೆ. ಪ್ರಧಾನಿ ಮೋದಿ ಮತ ಕಳ್ಳತನ ಮಾಡುವ ಮೂಲಕ ಬಿಹಾರ ಚುನಾವಣೆಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದರು.
ಬಿಹಾರ ಚುನಾವಣೆಗೂ ಮುಂಚಿತವಾಗಿ ರಾಹುಲ್ ಗಾಂಧಿ ಮತ್ತು ಇತರ ಮಹಾಘಟಬಂಧನ ನಾಯಕರ ನೇತೃತ್ವದಲ್ಲಿ ಮತ ಕಳ್ಳತನದ ವಿರುದ್ಧವಾಗಿ ಮತ ಅಧಿಕಾರ ಯಾತ್ರೆ ನಡೆಸಲಾಗುತ್ತಿದ್ದು ಕೊನೆಯ ದಿನ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. “ಈ ಮತದಾರರ ಅಧಿಕಾರ ಯಾತ್ರೆಯ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯಿತು. ಅದನ್ನು ಅಡ್ಡಿಪಡಿಸುವ ಪ್ರಯತ್ನಗಳು ನಡೆದವು ಆದರೆ ಬಿಹಾರದ ಜನರು ಮತ್ತು ಮಹಾಘಟಬಂಧನ ಜನರು ಹಿಂದೆ ಸರಿಯಲಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? SIR ಮೂಲಕ ಬಿಹಾರ ಚುನಾವಣೆಯಲ್ಲಿ ಮತ ಕಳವು ನಡೆಸುವ ಪಿತೂರಿ ಯಶಸ್ಸಾಗಲು ಬಿಡಲ್ಲ: ರಾಹುಲ್ ಗಾಂಧಿ
“ಪ್ರಧಾನಿ ಮೋದಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನದ ಮೂಲಕ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ, ಜಾಗರೂಕರಾಗಿರಿ. ನೀವು ಎಚ್ಚರವಾಗಿಲ್ಲದಿದ್ದರೆ, ಮೋದಿ ಮತ್ತು ಶಾ ನಿಮ್ಮನ್ನು ನಿಗ್ರಹಿಸುತ್ತಾರೆ. ಬಡವರು, ಹಿಂದುಳಿದವರು ಮತ್ತು ದಲಿತರ ಹೊಸ ಸರ್ಕಾರ ರಚನೆಯಾಗುವುದರೊಂದಿಗೆ ಎನ್‌ಡಿಎಯ ಡಬಲ್ ಎಂಜಿನ್ ಸರ್ಕಾರ ಶೀಘ್ರದಲ್ಲೇ ಅಧಿಕಾರದಿಂದ ಕೆಳಗಿಳಿಯಲಿದೆ” ಎಂದು ಪ್ರತಿಪಾದಿಸಿದರು.
ಹಾಗೆಯೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡ ಅವರು, “ಒಂದು ಕಾಲದಲ್ಲಿ ಸಮಾಜವಾದದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ಅವರು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆರ್‌ಎಸ್‌ಎಸ್-ಬಿಜೆಪಿ ಕುಮಾರ್ ಅವರನ್ನು ಕೈಬಿಡುತ್ತದೆ” ಎಂದು ಅಭಿಪ್ರಾಯಿಸಿದರು.
“ಈ ಡಬಲ್ ಎಂಜಿನ್ ಸರ್ಕಾರ ಕೆಲವು ತಿಂಗಳುಗಳ ನಂತರ ಇರುವುದಿಲ್ಲ. ರಚನೆಯಾಗುವ ಹೊಸ ಸರ್ಕಾರ ಬಡವರು, ಮಹಿಳೆಯರು, ದಲಿತರು ಮತ್ತು ಹಿಂದುಳಿದವರದ್ದಾಗಿರುತ್ತದೆ” ಎಂದೂ ಹೇಳಿದರು.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ವಿಕಾಸಶೀಲ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ, ಸಿಪಿಐ (ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ, ಸಿಪಿಐನ ಆನಿ ರಾಜ, ಟಿಎಂಸಿ ಸಂಸದ ಯೂಸುಫ್ ಪಠಾಣ್, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಮತ್ತು ಇತರ ಇಂಡಿಯಾ ಒಕ್ಕೂಟದ ನಾಯಕರು ಉಪಸ್ಥಿತರಿದ್ದರು.





