ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಯಪಡುವುದು ಮಾತ್ರವಲ್ಲ. ಶತಕೋಟ್ಯಾಧಿಪತಿಗಳಾದ ಅಂಬಾನಿ ಮತ್ತು ಅದಾನಿ ಅವರ ರಿಮೋಟ್ ಕಂಟ್ರೋಲ್‌ನಲ್ಲಿದ್ದಾರೆ (ನಿಯಂತ್ರಣದಲ್ಲಿದ್ದಾರೆ) ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಬಿಹಾರದಲ್ಲಿ ಬೇಗುಸರಾಯ್ ಮತ್ತು ಖಗಾರಿಯಾ ಜಿಲ್ಲೆಗಳಲ್ಲಿ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, “ಅಗಲವಾದ ಎದೆಯಿರುವುದರಿಂದ ಯಾವುದೇ ವ್ಯಕ್ತಿ ಬಲಶಾಲಿಯಾಗುವುದಿಲ್ಲ. ದುರ್ಬಲ ಮೈಕಟ್ಟು ಹೊಂದಿದ್ದ ಆದರೆ ಆ ಕಾಲದ ಮಹಾಶಕ್ತಿಗಳಾಗಿದ್ದ ಬ್ರಿಟಿಷರನ್ನು ಎದುರಿಸಿದ್ದ ಮಹಾತ್ಮ ಗಾಂಧಿಯನ್ನು ಒಮ್ಮೆ ನೋಡಿ” ಎಂದರು.
ಇದನ್ನು ಓದಿದ್ದೀರಾ? ಮೋದಿಗೆ ಧೈರ್ಯ ಇದ್ದರೆ ಟ್ರಂಪ್ ಸುಳ್ಳುಗಾರ ಎಂದು ಹೇಳಲಿ: ರಾಹುಲ್ ಗಾಂಧಿ ಸವಾಲು
“ಆಪರೇಷನ್ ಸಿಂಧೂರ್ ಸಮಯದಲ್ಲಿ ಟ್ರಂಪ್ ಕರೆ ಮಾಡಿದಾಗ ಭಯಪಟ್ಟ ನರೇಂದ್ರ ಮೋದಿ 56 ಇಂಚಿನ ಎದೆಯನ್ನು ಹೊಂದಿದ್ದಾರೆ. ಇದಾದ ಬಳಿಕ ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷ ಎರಡು ದಿನಗಳಲ್ಲಿ ಕೊನೆಗೊಂಡಿತು. ಮೋದಿ ಟ್ರಂಪ್‌ಗೆ ಹೆದರುವುದು ಮಾತ್ರವಲ್ಲ, ಅಂಬಾನಿ ಮತ್ತು ಅದಾನಿಯ ರಿಮೋಟ್ ಕಂಟ್ರೋಲ್‌ನಲ್ಲಿದ್ದಾರೆ” ಎಂದು ಆರೋಪಿಸಿದರು.
“1971ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅಮೆರಿಕ ಬೆದರಿಕೆ ಹಾಕಿತ್ತು. ಆದರೆ ಅವರು ಹೆದರಲಿಲ್ಲ. ಏನು ಮಾಡಬೇಕೋ ಅದನ್ನು ಮಾಡಿದರು. ಆದರೆ ಟ್ರಂಪ್ ಮೋದಿಗೆ ಆಪರೇಷನ್ ಸಿಂಧೂರವನ್ನು ನಿಲ್ಲಿಸುವಂತೆ ಹೇಳಿದಾಗ ಮೋದಿ ಕೂಡಲೇ ಕಾರ್ಯಾಚರಣೆ ನಿಲ್ಲಿಸಿದರು” ಎಂದು ದೂರಿದರು.
“ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದಂತಹ ಮೋದಿ ಸರ್ಕಾರದ ಎಲ್ಲಾ ಪ್ರಮುಖ ನಿರ್ಧಾರಗಳು ಸಣ್ಣ ವ್ಯವಹಾರಗಳನ್ನು ನಾಶಮಾಡುವ ಮತ್ತು ದೊಡ್ಡ ವ್ಯವಹಾರಗಳಿಗೆ ಲಾಭ ತರುವ ಗುರಿಯನ್ನು ಹೊಂದಿವೆ. ಆದರೆ ನಮ್ಮ ವಿಧಾನವು ವಿಭಿನ್ನವಾಗಿದೆ. ನಾವು ಸಣ್ಣ ವ್ಯವಹಾರಗಳನ್ನು ಉತ್ತೇಜಿಸಲು ಬಯಸುತ್ತೇವೆ. ನಿಮ್ಮ ಫೋನ್‌ಗಳು ಮತ್ತು ಟಿ-ಶರ್ಟ್‌ಗಳಲ್ಲಿ ಚೀನಾದಲ್ಲಿ ತಯಾರಿಸಿದ ಲೇಬಲ್‌ಗಳು ಇನ್ನು ಮುಂದೆ ಬಿಹಾರದಲ್ಲಿ ತಯಾರಿಸಿದ ಟ್ಯಾಗ್‌ಗಳಾಗಿ ಬದಲಾಗುತ್ತದೆ” ಎಂದು ಹೇಳಿದರು.
LIVE: Public Meeting | Begusarai, Bihar https://t.co/Lawk5rQjPw
— Rahul Gandhi (@RahulGandhi) November 2, 2025
ಪ್ರಧಾನಿ ಮತಗಳಿಗಾಗಿ ಏನು ಬೇಕಾದರೂ ಮಾಡಬಹುದು ಹೇಳಿದ ರಾಹುಲ್ ಗಾಂಧಿ, “ಅವರಿಗೆ ಯೋಗ ಮಾಡಲು ಹೇಳಿ, ಅವರು ಕೆಲವು ಆಸನಗಳನ್ನು ಮಾಡುತ್ತಾರೆ. ಅವರು ಮತಗಳಿಗಾಗಿ ವೇದಿಕೆಯ ಮೇಲೆ ನೃತ್ಯ ಮಾಡಬಲ್ಲರು” ಎಂದು ಟೀಕಿಸಿದರು.
“ಯುವಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಧಾನಿ ರೀಲ್‌ಗಳನ್ನು ನೋಡುವಂತೆ ಹೇಳುತ್ತಿದ್ದಾರೆ. ಯುವಜನರು ನಿರುದ್ಯೋಗದಂತಹ ನೈಜ ಸಮಸ್ಯೆಗಳ ಬಗ್ಗೆ ಪ್ರಶ್ನಿಸಬಾರದು ಎಂದು ಈ ರೀತಿ ಗಮನ ಬೇರೆಡೆ ಸೆಳೆಯಲಾಗುತ್ತಿದೆ. ಬಿಜೆಪಿ ನಿಮಗೆ ಅಗ್ಗದ ಇಂಟರ್ನೆಟ್ ನೀಡಿದೆ. ಇದರಿಂದ ನೀವು ರೀಲ್‌ಗಳನ್ನು ವೀಕ್ಷಿಸಬಹುದು ಮತ್ತು ರೀಲ್‌ಗಳನ್ನು ಮಾಡಬಹುದು ಎಂದು ಮೋದಿ ಹೇಳುತ್ತಾರೆ. ಆದರೆ ನೀವು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ರೀಲ್‌ಗಳನ್ನು ವೀಕ್ಷಿಸಿದಾಗ, ಹಣ ಅಂಬಾನಿಗೆ ಹೋಗುತ್ತದೆ” ಎಂದು ರಾಹುಲ್ ಗಾಂಧಿ ದೂರಿದರು.
ಇನ್ನು “ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ಮಧ್ಯಪ್ರದೇಶದ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಪೂರ್ಣವಾಗಿ ಮತಗಳ್ಳತನ ಮಾಡಿದೆ. ಚುನಾವಣಾ ಆಯೋಗವು ಬಿಹಾರದಲ್ಲಿ ಮಹಾಘಟಬಂಧನ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ. ಇದಕ್ಕೆ ನಾವು ಈ ಹಿಂದೆಯೇ ಪುರಾವೆಗಳನ್ನು ಒದಗಿಸಿದ್ದೇವೆ. ಮತ್ತೆ ಒದಗಿಸಬಲ್ಲೆವು” ಎಂದರು.





