ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಎಂಟು ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಪ್ರಮಾಣದ ಉದ್ಯೋಗ ಸೃಷ್ಟಿಯು ನಿರುದ್ಯೋಗದ ಬಗ್ಗೆ ನಕಲಿ ನಿರೂಪಣೆಗಳನ್ನು ಹರಡುವವರನ್ನು ಮೌನಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ರಸ್ತೆ, ರೈಲ್ವೆ ಮತ್ತು ಬಂದರು ವಲಯಗಳ 29,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಆರ್‌ಬಿಐ ಇತ್ತೀಚೆಗೆ ಪ್ರಕಟಿಸಿದ ವಿಸ್ತೃತ ವರದಿಯ ಪ್ರಕಾರ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ 8 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ. ಈ ಅಂಕಿ ಅಂಶಗಳು ಉದ್ಯೋಗಗಳ ಬಗ್ಗೆ ಸುಳ್ಳು ಮಾಹಿತಿ ಹರಡುವವರ ಬಾಯಿ ಮುಚ್ಚಿಸಿದೆ. ಎನ್‌ಡಿಎ ಸರ್ಕಾರವು ಸ್ಥಿರತೆ ಮತ್ತು ಬೆಳವಣಿಗೆಗೆ ಆದ್ಯತೆ ನೀಡುವುದನ್ನು ಮುಂದುವರೆಸಿದೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯ | ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ? ಸುಳ್ಳಿನ ಸುಳಿಗೆ ನಿರುದ್ಯೋಗಿ ಯುವಜನರು ಬಲಿ!
“ಸಣ್ಣ ಮತ್ತು ದೊಡ್ಡ ಹೂಡಿಕೆದಾರರು ಮೂರನೇ ಅವಧಿಯ ಎನ್‌ಡಿಎ ಸರ್ಕಾರವನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ. ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ಹರಡುವವರು ಹೂಡಿಕೆ, ಮೂಲಸೌಕರ್ಯ ಮತ್ತು ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಾರೆ. ಆರ್‌ಬಿಐ ಅಂಕಿಅಂಶಗಳು ಅವರ ಸುಳ್ಳನ್ನು ಬಯಲಾಗಿಸಿದೆ. ದೇಶದ ನಾಗರಿಕರು ಅವರ ಪಿತೂರಿಗಳನ್ನು ತಿರಸ್ಕರಿಸುತ್ತಿದ್ದಾರೆ” ಎಂದು ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.




