ಲೋಕಸಭೆಯಲ್ಲಿ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗೆಲುವು ಸಾಧಿಸಿದೆ.
ಧ್ವನಿಮತದ ಮೂಲಕ ನಡೆದ ಅವಿಶ್ವಾಸ ಮತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸಿದೆ.
ಅವಿಶ್ವಾಸ ನಿರ್ಣಯ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ಲೋಕಸಭೆಯಿಂದ ಸಭಾತ್ಯಾಗ ಮಾಡಿದವು.
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2 ಗಂಟೆ 13 ನಿಮಿಷಗಳ ಕಾಲ ಮಾತನಾಡಿದರು.
ಚರ್ಚೆ ಶುರುವಾದ ಒಂದೂವರೆ ಗಂಟೆ ನಂತರ ವಿಪಕ್ಷಗಳು ಸಭಾತ್ಯಾಗ ಮಾಡಿದ ಸಂದರ್ಭದಲ್ಲಿ ಮಣಿಪುರದ ಹಿಂಸಾಚಾರದ ಬಗ್ಗೆ ಕೆಲ ನಿಮಿಷ ಮಾತನಾಡಿದ ನರೇಂದ್ರ ಮೋದಿ, “ಮಣಿಪುರದಲ್ಲಿ ಹಿಂಸೆಯಾಗಿದೆ. ಮಹಿಳೆಯರ ಮೇಲೆ ಗಂಭೀರ ಅಪರಾಧವಾಗಿದೆ. ಅಪರಾಧಿಗಳಿಗೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ದೊಡ್ಡ ಪ್ರಯತ್ನ ಮಾಡುತ್ತಿದೆ. ದೇಶದ ನಾಗರೀಕರಿಗೆ ನಾನು ವಿಶ್ವಾಸದಿಂದ ಹೇಳುತ್ತಿದ್ದೇನೆ. ನಮ್ಮ ಪ್ರಯತ್ನ ಯಾವ ರೀತಿ ಸಾಗುತ್ತಿದೆ ಎಂದರೆ ಮಣಿಪುರದಲ್ಲಿ ಖಂಡಿತವಾಗಿ ಶಾಂತಿ ಮರಳುತ್ತದೆ. ಮಣಿಪುರದ ಜನರಿಗೂ ನಾನು ಇಲ್ಲಿಂದಲೇ ಮನವಿ ಮಾಡಲು ಹೇಳುತ್ತಿದ್ದೇನೆ. ಮಣಿಪುರದ ಜನರೊಂದಿಗೆ ಈ ದೇಶವಿದೆ. ಈ ಸದನ ಅವರೊಂದಿಗೆ ಇದೆ. ನಾವೆಲ್ಲರೂ ಸೇರಿಕೊಂಡು ಅಲ್ಲಿ ಪರಿಹಾರ ಹುಡುಕಬೇಕಿದೆ. ಮಣಿಪುರದ ಮತ್ತೆ ವಿಕಾಸದ ಗತಿಗೆ ಮರಳುತ್ತದೆ. ಅದರಲ್ಲಿ ಯಾವುದೇ ಅನುಮಾನ ಯಾರಿಗೂ ಬೇಡ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ ಸುಡದಿರಲಿ ಬಿಲ್ ಬಾಕಿ ಬೆಂಕಿ ಕಿಡಿ
ಇದನ್ನು ಹೊರತುಪಡಿಸಿದರೆ ವಿಪಕ್ಷವನ್ನು ಟೀಕಿಸಲು ಮಣಿಪುರ ಹಾಗೂ ಈಶಾನ್ಯ ರಾಜ್ಯದ ವಿಷಯವನ್ನು ಆಗಾಗ ಪ್ರಸ್ತಾಪಿಸಿದರು. ಮಣಿಪುರ ವಿಚಾರದಲ್ಲಿ ಪ್ರಧಾನಿ ಮಾತನಾಡಬೇಕೆಂದು ಒತ್ತಾಯಿಸಿ ವಿಪಕ್ಷಗಳ ಒಕ್ಕೂಟ ಅವಿಶ್ವಾಸ ನಿರ್ಣಯ ಮಂಡಿಸಿತ್ತು.
ಪ್ರಶ್ನೆಗಳು ಹಾಗೆಯೇ ಉಳಿದಿವೆ ಎಂದ ಕಾಂಗ್ರೆಸ್
ಮಣಿಪುರ ಹಿಂಸಾಚಾರದ ಬಗ್ಗೆ ಹೆಚ್ಚು ಪ್ರಸ್ತಾಪಿಸದ ಪ್ರಧಾನಿ ನರೇಂದ್ರ ಮೋದಿ ಮನಸ್ಥಿತಿಯನ್ನು ಕಾಂಗ್ರೆಸ್ ಟೀಕಿಸಿದೆ.
ಪ್ರಶ್ನೆಗಳು ಈಗಲೂ ಹಾಗೆಯೇ ಉಳಿದಿವೆ ಎಂದಿರುವ ಕಾಂಗ್ರೆಸ್, ಮಣಿಪುರ ಹಿಂಸಾಚಾರ 100 ದಿನಗಳನ್ನು ಪೂರೈಸಿದೆ, ಪ್ರಧಾನಿ ಮೋದಿ ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ? ಮಣಿಪುರದ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಸುಮಾರು 80 ದಿನಗಳನ್ನು ಏಕೆ ತೆಗೆದುಕೊಂಡರು? ಪ್ರಧಾನಿ ಮೋದಿ ಅವರು ಮಣಿಪುರದ ಸಿಎಂ ಅನ್ನು ಇಲ್ಲಿಯವರೆಗೆ ಏಕೆ ವಜಾ ಮಾಡಿಲ್ಲ? ಎಂದು ಟ್ವಿಟರ್‌ನಲ್ಲಿ ತಿಳಿಸಿದೆ.
ಮಣಿಪುರಕ್ಕೆ ಸಂಬಂಧಿಸಿದ ವಿಪಕ್ಷಗಳ ಯಾವುದೇ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಲಿಲ್ಲ. ಅದಕ್ಕಾಗಿಯೇ ‘ಇಂಡಿಯಾ’ ಮೈತ್ರಿಕೂಟವು ಮಣಿಪುರದ ಜನರಿಗೆ ತನ್ನ ಹೊಣೆಗಾರಿಕೆಯನ್ನು ಮನವರಿಕೆ ಮಾಡುವ ಸಲುವಾಗಿಯೇ ಸದನದಿಂದ ಹೊರನಡೆದಿದೆ ಎಂದು ಹೇಳಿದೆ.





