ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ಮಧ್ಯದಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ. ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಸುಮಾರು 28 ತಿಂಗಳುಗಳ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ವರದಿಯಾಗಿದೆ.
2023ರ ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದ್ದು, ಈವರೆಗೆ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈವರೆಗೂ ಪ್ರಧಾನಿ ಮೋದಿ ಹಿಂಸಾಚಾರ ಪೀಡಿತ ಪ್ರದೇಶ ಭೇಟಿ ನೀಡದೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದನ್ನು ಓದಿದ್ದೀರಾ? ಒಂದೂವರೆ ಗಂಟೆಯಾದರೂ ಮಣಿಪುರದ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ
ಆದರೆ ಇದೀಗ ಮೋದಿ ಮಣಿಪುರ ಭೇಟಿ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮೋದಿ ಮಣಿಪುರ ಭೇಟಿ ವೇಳೆ ರಾಜಧಾನಿ ಇಂಫಾಲ್ ಮತ್ತು ಚುರಚಂದ್‌ಪುರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 12ರಿಂದ 14ರವರೆಗೆ ಪ್ರಧಾನಿ ಮೋದಿ ಮಿಜೋರಾಂ ಮತ್ತು ಅಸ್ಸಾಂ ಪ್ರವಾಸ ಮಾಡಲಿದ್ದು ಹಲವು ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆಯೇ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಈ ನಡುವೆ ಮಣಿಪುರ ಆಡಳಿತವು ರಾಜ್ಯದಲ್ಲಿ ಭದ್ರತೆಯನ್ನು ಬಲಪಡಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.





