ಈವರೆಗೂ ರಾಜಕೀಯದಲ್ಲಿ ಕಾಣಿಸಿಕೊಳ್ಳದ ನಿಶಾಂತ್ ನೇರವಾಗಿ ಉಪಮುಖ್ಯಮಂತ್ರಿಯಾಗುವುದೇ? ಇಲ್ಲಿ ರಾಜಕೀಯಕ್ಕೆ ನಿಶಾಂತ್ ಬಲಿಯೋ ಅಥವಾ ಈಗಾಗಲೇ ಬಿಜೆಪಿ ಕೈಯಲ್ಲಿ ಸಿಕ್ಕಿ ಹೋಳಾಗುತ್ತಿರುವ ಜೆಡಿಯು ಅಂತ್ಯವೋ ತಿಳಿಯದು!
‘ಕುಟುಂಬ ರಾಜಕಾರಣ’ – ಸಾಮಾನ್ಯವಾಗಿಯೇ ಆಡಳಿತ, ವಿಪಕ್ಷಗಳು ಪರಸ್ಪರ ಟೀಕೆಗೆ ಬಳಸಿಕೊಳ್ಳುವ ಅಸ್ತ್ರ. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದ ಸದ್ಯ ಪ್ರಧಾನಿ ಆಗಿರುವವರೆಗೂ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ವಿರುದ್ಧದ ಭಾಷಣಗಳಲ್ಲಿ ‘ಕುಟುಂಬ ರಾಜಕಾರಣ’ ಮುಖ್ಯ ವಿಷಯ ವಸ್ತು. ನೆಹರು-ಗಾಂಧಿ ಕುಟುಂಬ, ತಾಯಿ-ಮಗನ ಸರ್ಕಾರ – ಹೀಗೆ ಪ್ರಧಾನಿ ಟೀಕೆಗಳು ಹಲವು. ಆದರೆ ಅದೇ ಕೆಸರಲ್ಲಿ ಬಹುತೇಕ ಬಿಜೆಪಿ ನಾಯಕರುಗಳು, ಮಿತ್ರ ಪಕ್ಷಗಳ ನಾಯಕರುಗಳು ಮೀಯುತ್ತಿರುವ ಮೋದಿ ಮಾತ್ರ ಗಪ್‌ಚುಪ್!
ಸದ್ಯ ಬಿಹಾರ ರಾಜಕೀಯದಲ್ಲಿ ಮತ್ತೆ ಕುಟುಂಬ ರಾಜಕಾರಣದ ಸದ್ದು ಕೇಳಿಬಂದಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ರಾಜಕೀಯಕ್ಕೆ ಇಳಿಯಲು ಮುಂದಾಗಿದ್ದಾರೆ. ಅರಳು ಮರಳಿನಿಂದ ವಿಚಿತ್ರವಾಗಿ ವರ್ತಿಸುವ ನಿತೀಶ್ ಕೈಯಿಂದ ಸಿಎಂ ಸ್ಥಾನ ಪಡೆದು, ರಾಜ್ಯಸಭೆಯಲ್ಲಿ ಕೂರಿಸಲು ಬಿಜೆಪಿ ಸಿದ್ಧವಾಗುತ್ತಿದೆ. ದಿಢೀರ್ ಆಗಿ ಸಿಎಂ ಕುರ್ಚಿಯನ್ನು ಎಳೆದರೆ ಮೈತ್ರಿಗೆ ಭಂಗವಾಗಬಹುದೆಂದು ನಿತೀಶ್ ಪುತ್ರ ನಿಶಾಂತ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಪ್ರಸ್ತಾಪವನ್ನೂ ಮುಂದಿಟ್ಟಿದೆ ಎಂಬ ಸುದ್ದಿಗಳಿವೆ. ಹೋಳಿ ಸಂದರ್ಭದಲ್ಲಿ ಪಕ್ಷಕ್ಕೆ ಸೇರಲಿದ್ದು, ಈ ಕುರಿತು ಜೆಡಿಯು ಶೀಘ್ರವೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಬಿಹಾರ ಸಚಿವ ಶರ್ವಣ್ ಕುಮಾರ್ ತಿಳಿಸಿದ್ದಾರೆ. ಸದ್ಯ ಈ ಬೆಳವಣಿಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಿಲುವೇನು ಎಂಬ ಪ್ರಶ್ನೆಗಳು ಎದ್ದಿವೆ.
ಇದನ್ನು ಓದಿದ್ದೀರಾ? ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿಗಿದೆ ರಾಜಕೀಯ ಹಿನ್ನೆಲೆ; ಇದು ಕುಟುಂಬ ರಾಜಕಾರಣವಲ್ಲವೇ?
ಬಿಜೆಪಿ ತನ್ನ ಆಂತರಿಕ ಕುಟುಂಬ ರಾಜಕಾರಣವನ್ನು ಬದಿಗೊತ್ತಿ ಈ ಹಿಂದಿನಿಂದಲೂ ಇತರೆ ಪಕ್ಷಗಳಲ್ಲಿರುವ ವಂಶ ರಾಜಕಾರಣವನ್ನು ವಿರೋಧಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿಯವರು ಕಾಂಗ್ರೆಸ್, ಆರ್‌ಜೆಡಿ ಮತ್ತು ಎಸ್‌ಪಿ ಪಕ್ಷಗಳನ್ನು ಟೀಕಿಸಿದ್ದಾರೆ. ಆದರೆ ನಿತೀಶ್ ಕುಮಾರ್ ಮತ್ತು ಬಿಹಾರ ವಿಷಯದಲ್ಲಿ ಮೌನ ತಾಳಿದ್ದಾರೆ. ತನ್ನ ರಾಜಕೀಯ ಲಾಭಕ್ಕಾಗಿ ಬೇಕಾದಾಗ ಮಗ್ಗಲು ಬದಲಾಯಿಸುವುದು ಅಂದರೆ ಇದೇ ಆಗಿರಬಹುದು! ಬಿಹಾರದಲ್ಲಿ ಸದ್ಯ ಬಿಜೆಪಿಯ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಯು ಅನಿವಾರ್ಯ ಎನಿಸಿದೆ. ಇತರೆ ಪಕ್ಷಗಳಲ್ಲಿ ವಂಶ ರಾಜಕಾರಣ ಇದೆ ಎಂದು ಬೊಟ್ಟು ಮಾಡಿ ತೋರಿಸುವ ಬಿಜೆಪಿ ಬಿಹಾರ ವಿಷಯಕ್ಕೆ ಬಂದಾಗ, ‘ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯ ಆಯ್ಕೆ ಅವರ ವೈಯಕ್ತಿಕ ಮತ್ತು ಪಕ್ಷದ ಆಂತರಿಕ ವಿಚಾರ’ ಎಂದು ನುಣುಚಿಕೊಂಡಿದೆ.
ಅಷ್ಟಕ್ಕೂ ಬಿಹಾರದಲ್ಲಿ ವಂಶ ರಾಜಕಾರಣ ಈಗ ಆರಂಭವಾಗುತ್ತಿರುವುದಲ್ಲ. ಬಿಜೆಪಿ ಮೈತ್ರಿಯೊಂದಿಗೆ ಚುನಾವಣೆ ಗೆದ್ದು ಸರ್ಕಾರ ರಚನೆಯಾದಾಗಲೇ ಈ ಕುಟುಂಬ ರಾಜಕೀಯದ ಚರ್ಚೆ ನಡೆದಿತ್ತು. ಅದಕ್ಕೆ ಕಾರಣ ನಿತೀಶ್ ಸಂಪುಟದ 26 ಸಚಿವರಲ್ಲಿ 10 ಮಂದಿಗೆ ರಾಜಕೀಯ ಹಿನ್ನೆಲೆ ಇರುವುದು.

ಮಾಜಿ ಮುಖ್ಯಮಂತ್ರಿ, ಗಯಾ ಕ್ಷೇತ್ರದ ಸಂಸದ ಮತ್ತು ಪ್ರಸ್ತುತ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಪುತ್ರ, ಶಾಸಕಿ ಜ್ಯೋತಿ ಮಾಂಝಿ ಅವರ ಅಳಿಯ ಮತ್ತು ಶಾಸಕಿ ದೀಪಾ ಮಾಂಝಿ ಅವರ ಪತಿ ಸಂತೋಷ್ ಸುಮಿತ್ ಮಾಂಝಿ. ಮಾಜಿ ಸಚಿವೆ ಶಕುನಿ ಚೌಧರಿ ಮತ್ತು ಮಾಜಿ ಶಾಸಕಿ ದಿವಂಗತ ಪಾರ್ವತಿ ದೇವಿ ಅವರ ಪುತ್ರ ಸಾಮ್ರಾಟ್ ಚೌಧರಿ. ಮಾಜಿ ಕೇಂದ್ರ ಸಚಿವ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಮತ್ತು ಶಾಸಕಿ ಸ್ನೇಹಲತಾ ಅವರ ಪುತ್ರ ದೀಪಕ್ ಪ್ರಕಾಶ್. ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಸಂಸದೆ ಪುತುಲ್ ಕುಮಾರಿ ಅವರ ಪುತ್ರಿ ಶ್ರೇಯಸಿ ಸಿಂಗ್. ಮಾಜಿ ಕೇಂದ್ರ ಸಚಿವ ಕ್ಯಾಪ್ಟನ್ ಜೈ ನಾರಾಯಣ್ ನಿಷಾದ್ ಅವರ ಸೊಸೆ ಮತ್ತು ಮಾಜಿ ಸಂಸದ ಅಜಯ್ ನಿಷಾದ್ ಅವರ ಪತ್ನಿ ರಮಾ ನಿಷಾದ್. ಮಾಜಿ ಶಾಸಕ ಜಗದೀಶ್ ಪ್ರಸಾದ್ ಚೌಧರಿ ಅವರ ಪುತ್ರ ವಿಜಯ್ ಚೌಧರಿ. ಮಾಜಿ ಸಚಿವ ಮಹಾವೀರ್ ಚೌಧರಿ ಅವರ ಪುತ್ರ, ಸಮಷ್ಟಿಪುರ ಸಂಸದ ಶಾಂಭವಿ ಚೌಧರಿ ಅವರ ತಂದೆ ಅಶೋಕ್ ಚೌಧರಿ. ಮಾಜಿ ಶಾಸಕ ನವೀನ್ ಕಿಶೋರ್ ಸಿನ್ಹಾ ಅವರ ಪುತ್ರ ನಿತಿನ್ ನವೀನ್. ಮಾಜಿ ಸಚಿವೆ ಚಂದ್ರಿಕಾ ರಾಮ್ ಅವರ ಮಗ ಮತ್ತು ಮಾಜಿ ಶಾಸಕ ಅನಿಲ್ ಕುಮಾರ್ ಅವರ ಸಹೋದರ ಸುನಿಲ್ ಕುಮಾರ್. ಸಮತಾ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ದಿವಂಗತ ಭೂತಾನ್ ಸಿಂಗ್ ಅವರ ಪತ್ನಿ ಲೆಸಿ ಸಿಂಗ್ ಸದ್ಯ ಬಿಹಾರದಲ್ಲಿ ಎನ್‌ಡಿಎ ಒಕ್ಕೂಟದಲ್ಲಿರುವ ಕುಟುಂಬ ರಾಜಕಾರಣದ ಕುಡಿಗಳು.
ಕೇಂದ್ರ ಸರ್ಕಾರದಲ್ಲಿ ಇಲ್ಲವೇ ಕುಟುಂಬ ರಾಜಕಾರಣ?
ವಿಪಕ್ಷಗಳನ್ನು ಕುಟುಂಬ ರಾಜಕಾರಣದ ವಿಷಯದಲ್ಲಿ ನಿರಂತರವಾಗಿ ಟೀಕಿಸುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇನು ಈ ವಂಶ ರಾಜಕಾರಣದಿಂದ ಹೊರತಾಗಿಲ್ಲ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿರುವ ಪಿಯೂಷ್ ಗೋಯಲ್ ಅವರ ತಂದೆ ವೇದಪ್ರಕಾಶ್ ಗೋಯಲ್ ಅವರು ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು, ತಾಯಿ ಚಂದ್ರಕಾಂತ ಗೋಯಲ್ ಶಾಸಕಿಯಾಗಿದ್ದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಂದೆ ದೇಬೇಂದ್ರ ಪ್ರಧಾನ್ ಅವರು ಕೂಡ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು.
ಇದನ್ನು ಓದಿದ್ದೀರಾ? ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುವ ಬಿಜೆಪಿಯಿಂದಲೇ 40 ಮಂದಿಗೆ ಟಿಕೆಟ್: ಪ್ರಿಯಾಂಕ್ ಖರ್ಗೆ
ಇನ್ನು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಸದ್ಯ ಬಿಜೆಪಿ ಸೇರಿ ಕೇಂದ್ರ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಸಿದ್ಧ ಸಿಂಧಿಯಾ ರಾಜಮನೆತನದವರು. ಅವರ ತಂದೆ ಮಾಧವರಾವ್ ಸಿಂಧಿಯಾ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದರು. ಅವರ ಅಜ್ಜಿ ವಿಜಯರಾಜೆ ಸಿಂಧಿಯಾ ಬಿಜೆಪಿಯ ಸಂಸ್ಥಾಪಕ ನಾಯಕಿಯರಲ್ಲಿ ಒಬ್ಬರು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ತಂದೆ ರಿಂಚಿನ್ ಖರು ಅರುಣಾಚಲ ಪ್ರದೇಶದ ಮೊದಲ ವಿಧಾನಸಭೆಯ ಮೊದಲ ಪ್ರೊ-ಟೆಂಪೋರ್ ಸ್ಪೀಕರ್ (Pro-tem Speaker) ಆಗಿ ಸೇವೆ ಸಲ್ಲಿಸಿದ್ದರು.
ಸದ್ಯ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾಗಿರುವ ಜಿತಿನ್ ಪ್ರಸಾದ್ ಅವರ ಜಿತೇಂದ್ರ ಪ್ರಸಾದ್ ಕಾಂಗ್ರೆಸ್‌ನ ಹಿರಿಯ ಮತ್ತು ಪ್ರಭಾವಿ ನಾಯಕರಾಗಿದ್ದರು. ಇನ್ನು ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದಲ್ಲಿ ಕೇಂದ್ರ ಸಂಪುಟ ಸಚಿವರಾಗಿದ್ದ ಅನುರಾಗ್ ಠಾಕೂರ್ ಅವರ ತಂದೆ ಪ್ರೇಮ್ ಕುಮಾರ್ ಧುಮಾಲ್ ಬಿಜೆಪಿಯ ಹಿರಿಯ ನಾಯಕ, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ. ಇನ್ನು ಸದ್ಯ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ರಾಜಕಾರಣದ ಇತಿಹಾಸ ತಿಳಿದಿರುವುದು.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಸರ್ವವಿದಿತ. ಬಿಎಸ್‌ವೈ ಇಬ್ಬರು ಪುತ್ರರೂ ರಾಜಕೀಯದಲ್ಲಿದ್ದಾರೆ. ಕಿರಿಯ ಪುತ್ರ ಬಿ.ವೈ. ವಿಜಯೇಂದ್ರ ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ, ಹಿರಿಯ ಪುತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ. ರಾಜ್ಯ ಬಿಜೆಪಿಯ ಈ ಕುಟುಂಬ ರಾಜಕಾರಣವನ್ನು ವಿಪಕ್ಷಗಳು ಮಾತ್ರವಲ್ಲದೆ ಬಿಜೆಪಿ ನಾಯಕರುಗಳೂ ಟೀಕಿಸಿದ್ದಾರೆ, ಅದಕ್ಕಾಗಿ ಪಕ್ಷದಿಂದ ಉಚ್ಚಾಟನೆಯೂ ಆಗಿದ್ದಾರೆ. ತಮ್ಮ ಪಕ್ಷದಲ್ಲೇ ಇರುವ ಕುಟುಂಬ ರಾಜಕೀಯ ಕಾಣದ ಪ್ರಧಾನಿ ನಿರಂತರವಾಗಿ ಕಾಂಗ್ರೆಸ್ ಅನ್ನು ಟೀಕಿಸುತ್ತಾ ಬಂದಿದ್ದಾರೆ. ಅಷ್ಟಕ್ಕೂ ಬಿಜೆಪಿಯಲ್ಲಿರುವ ಈ ಕುಟುಂಬ ರಾಜಕಾರಣ ಬರೀ ಕರ್ನಾಟಕಕ್ಕೆ ಸೀಮಿತವಲ್ಲ. ಹಲವು ರಾಜ್ಯಗಳಲ್ಲಿ ಇದೇ ಸ್ಥಿತಿ ಇರುವುದು. ಈ ವಂಶ ರಾಜಕಾರಣಕ್ಕೆ ಯಾವ ಪಕ್ಷಗಳೂ ಹೊರತಾಗಿಲ್ಲ.
ಸದ್ಯ ಬಿಹಾರದಲ್ಲಿ ನಡೆಯುತ್ತಿರುವುದು ಅದೇ ಬೆಳವಣಿಗೆ. ನಿಶಾಂತ್ ಈ ಹಿಂದೆಯೂ ಹಲವು ಬಾರಿ ರಾಜಕೀಯದಲ್ಲಿ ತನಗೆ ಕಿಂಚಿತ್ತೂ ಆಸಕ್ತಿ ಇಲ್ಲ ಎಂದು ಹೇಳಿಕೊಂಡು ಬಂದವರು. ಆದರೆ ಇದೀಗ ನಿತೀಶ್ ಮುಪ್ಪಿನಿಂದಾಗಿ ಆಡುತ್ತಿರುವ ಹಾಸ್ಯಾದಾಟ ಜೆಡಿಯು ಮಿತ್ರ ಪಕ್ಷ ಬಿಜೆಪಿಯನ್ನು ಪೀಕಲಾಟಕ್ಕೆ ಸಿಲುಕಿಸುತ್ತಿದ್ದಂತೆ ಪುತ್ರನಿಗೆ ಮಣೆ ಹಾಕಲು ಮುಂದಾಗಿದ್ದಾರೆ. ಈವರೆಗೂ ರಾಜಕೀಯದಲ್ಲಿ ಕಾಣಿಸಿಕೊಳ್ಳದ ನಿಶಾಂತ್ ನೇರವಾಗಿ ಉಪಮುಖ್ಯಮಂತ್ರಿಯಾಗುವುದೇ? ಇಲ್ಲಿ ರಾಜಕೀಯಕ್ಕೆ ನಿಶಾಂತ್ ಬಲಿಯೋ ಅಥವಾ ಈಗಾಗಲೇ ಬಿಜೆಪಿ ಕೈಯಲ್ಲಿ ಸಿಕ್ಕಿ ಹೋಳಾಗುತ್ತಿರುವ ಜೆಡಿಯು ಅಂತ್ಯವೋ ತಿಳಿಯದು! ಹೀಗೆಯೇ ಮುಂದುವರೆದರೆ ಮಿತ್ರ ಪಕ್ಷವನ್ನು ಮೂಲೆಗುಂಪು ಮಾಡಿ ಬಿಹಾರವನ್ನು ಸಂಪೂರ್ಣವಾಗಿ ತನ್ನ ಕಪಿಮುಷ್ಠಿಯಲ್ಲಿ ಹಿಡಿಯಬೇಕು ಎಂಬ ಮೋದಿ ಸಂಚು ಸಫಲವಾಗಲು ಹೆಚ್ಚು ಕಾಲ ಬೇಕಾಗಿಲ್ಲ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




