ಡ್ರಗ್ಸ್ ಮಾಫಿಯಾದೊಂದಿಗೆ ಗುಜರಾತ್‌ನ ಸಚಿವರುಗಳ ನಂಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ, ಶಾಸಕ ಜಿಗ್ನೇಶ್ ಮೇವಾನಿ ನೀಡಿದ ಹೇಳಿಕೆಯು ಸದ್ಯ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಒಂದು ವಾರದ ಹಿಂದೆ ಉತ್ತರ ಗುಜರಾತ್‌ನಲ್ಲಿ ನಡೆದ ರಾಜ್ಯ ಕಾಂಗ್ರೆಸ್‌ನ ಜನಾಕ್ರೋಶ ಯಾತ್ರೆಯಲ್ಲಿ ಮೇವಾನಿ ಮದ್ಯದ ಹಾವಳಿಯ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರನ್ನು ಕಡೆಗಣಿಸಿ ಪೊಲೀಸರ ನಡೆಯನ್ನು ಖಂಡಿಸಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಾಗೆಯೇ ಮೇವಾನಿ ಮತ್ತು ಉಪಮುಖ್ಯಮಂತ್ರಿ ಹರ್ಷ ಸಂಘವಿ ನಡುವೆ ಚರ್ಚೆಗೂ ಕಾರಣವಾಗಿದೆ.
ಈ ಬಗ್ಗೆ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಿಗ್ನೇಶ್, “ಗುಜರಾತ್‌ನಲ್ಲಿ, ರಾಜ್ಯಾದ್ಯಂತ ಬೃಹತ್ ದಂಧೆಯನ್ನು ರಾಜ್ಯ ಸಚಿವರು ಮತ್ತು ಸುಮಾರು 100ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ಐಪಿಎಸ್ ಅಧಿಕಾರಿಗಳು, ಆಡಳಿತ ವ್ಯವಸ್ಥೆಯ ಸಹಕಾರದೊಂದಿಗೆ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯವನ್ನು ತರುವ ದಂಧೆಯನ್ನು ನಡೆಸುತ್ತಿದ್ದಾರೆ ಮತ್ತು ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ” ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಮೇ. 2ರಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಜೊತೆ ಸಂವಾದ
“ಇತ್ತೀಚೆಗೆ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ನಡೆದ ಆಂದೋಲನವು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿದೆ. ನೂರಾರು ಯುವಕರು ಮಾದಕ ವಸ್ತುಗಳು ಸಿಕ್ಕಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇನೆ. ಸರ್ಕಾರ ಮತ್ತು ಪೊಲೀಸರಿಗೆ ಯಾವುದೇ ಬದ್ಧತೆ ಇಲ್ಲ. ಅವರೇ ಜಾಲದಲ್ಲಿದ್ದಾರೆ. ಇದು ಕಾನೂನು ಮತ್ತು ಸಂವಿಧಾನದ ಸ್ಪಷ್ಟ ನಿರ್ಲಕ್ಷ್ಯ. ಹೆಚ್ಚಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಪ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ನಿರೀಕ್ಷಕರು ಹಣ ಈ ಜಾಲದಿಂದಲೇ ಹಣ ಸಂಪಾದಿಸುತ್ತಾರೆ. ಅದೇ ಹಣವು ಅವರ ಹವಾಲಾ ದಂಧೆಯ ಭಾಗವಾಗುತ್ತದೆ. ಆ ಹಣವನ್ನು ಅವರು ರಿಯಲ್ ಎಸ್ಟೇಟ್ ಮತ್ತು ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಾರೆ. ಪೊಲೀಸರೇ ಕಾನೂನು ಉಲ್ಲಂಘಿಸುತ್ತಾರೆ” ಎಂದು ಆರೋಪಿಸಿದ್ದಾರೆ.
“ರಾಜಸ್ಥಾನದಿಂದ ಬರುವ ಮದ್ಯವು ಬನಸ್ಕಾಂತ, ಪಠಾಣ್, ಮೆಹ್ಸಾನಾ ಮತ್ತು ಗಾಂಧಿನಗರದ ಮೂಲಕ ಸಾಗುತ್ತದೆ. ಆ ಮದ್ಯವನ್ನು ಅಹಮದಾಬಾದ್‌ನ ವಿವಿಧ ಸ್ಥಳಗಳಲ್ಲಿ ವಿತರಿಸಲಾಗುತ್ತದೆ. ಜಿಲ್ಲೆಗಳಲ್ಲಿ ಮೂವರು ಐಜಿ ಮಟ್ಟದ ಅಧಿಕಾರಿಗಳು, ನಾಲ್ಕು ಸಹಾಯಕ ಸೂಪರಿಂಟೆಂಡೆಂಟ್ ಮಟ್ಟದ ಅಧಿಕಾರಿಗಳು, ಸುಮಾರು 15-20 ಉಪ ಎಸ್‌ಪಿ ಮಟ್ಟದ ಅಧಿಕಾರಿಗಳು ಮತ್ತು ಹಲವಾರು ಪೊಲೀಸ್ ನಿರೀಕ್ಷಕರು ಈ ಜಾಲದಲ್ಲಿದ್ದಾರೆ. ಹೀಗಿರುವಾಗ ಗುಜರಾತ್‌ನ ಜನರು ಹೇಗೆ ಮೌನವಾಗಿರಲು ಸಾಧ್ಯ” ಎಂದು ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
“ಇವೆಲ್ಲವೂ ಗೃಹ ಸಚಿವರು, ಸಂಪುಟ ಮತ್ತು ಮುಖ್ಯಮಂತ್ರಿಯ ಆಶೀರ್ವಾದವಿಲ್ಲದೆ ನಡೆಯಲು ಸಾಧ್ಯವೇ? ಇದು ದಶಕಗಳಿಂದ ನಡೆಯುತ್ತಿರುವ ಕಾರಣ ಯಾರೂ ಮಾತನಾಡಬಾರದು ಎಂದಲ್ಲ. ಇದು ಗುಜರಾತ್ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಮಾಡಿದ ದೊಡ್ಡ ಅವಮಾನ. ಮದ್ಯದ ಅಂಗಡಿಗಳ ಮೇಲೆ ದಾಳಿ ಮಾಡಿ ಕಳ್ಳಭಟ್ಟಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಯುವಕರು ಕೇಳಿಕೊಂಡರೂ ಏನೂ ಮಾಡದಿರುವುದು ಜನರಿಗೆ ಮಾಡುವ ಅತ್ಯಂತ ದೊಡ್ಡ ಅವಮಾನ. ಇದು ನಿಜವಾದ ಪ್ರಜಾಪ್ರಭುತ್ವವೇ” ಎಂದು ಕೇಳಿದ್ದಾರೆ.
“2016-17ರಲ್ಲಿ ಮಾದಕ ದ್ರವ್ಯಗಳು ಪ್ರಮುಖ ಸಮಸ್ಯೆಯಾಗಿರಲಿಲ್ಲ. ಆದರೆ ಐದಾರು ವರ್ಷಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಗುಜರಾತ್‌ನ ಕರಾವಳಿಯಲ್ಲಿ ₹72,000 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಅದಾನಿ ಬಂದರಿನಲ್ಲಿ ಪತ್ತೆಯಾದ ಮಾದಕ ದ್ರವ್ಯಗಳು ಮತ್ತು ಎಟಿಎಸ್, ಅಪರಾಧ ವಿಭಾಗ ಮತ್ತು ಇತರ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡ ಮಾದಕ ದ್ರವ್ಯಗಳು ಸೇರಿಲ್ಲ. ಗುಜರಾತ್‌ನಲ್ಲಿ ಮಾದಕ ದ್ರವ್ಯಗಳನ್ನು ಸುರಿಯುತ್ತಿರುವ ಈ ಜನರು ಯಾರು? ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಗಳು ಸಹ ಕರಾವಳಿಗಳನ್ನು ಹೊಂದಿರುವಾಗ ಮಾದಕ ದ್ರವ್ಯ ವ್ಯಾಪಾರಿಗಳು ಗುಜರಾತ್ ಅನ್ನು ಸುರಕ್ಷಿತ ತಾಣವೆಂದು ಪರಿಗಣಿಸುತ್ತಿರುವುದು ಏಕೆ” ಎಂಬ ಪ್ರಶ್ನೆಯನ್ನೂ ಮೇವಾನಿ ಎತ್ತಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ | ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ವಿಧಾನಸಭೆಯಿಂದ ಉಚ್ಚಾಟನೆ
“ಮಾದಕ ವಸ್ತುಗಳಿಂದ ಹಣ ಸಂಪಾದಿಸುತ್ತಿರುವ ಸಚಿವರು ಗುಜರಾತ್‌ನ ದೇಶದ್ರೋಹಿಗಳು, ಮಾತೃಭೂಮಿಗೆ ವಂಚನೆ ಮಾಡುವವರು ಆಗಿದ್ದಾರೆ. ನಾನು ಅವರಿಗೆ ನನ್ನೊಂದಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದೇನೆ. ಆದರೆ ಅವರಿಗೆ ಧೈರ್ಯವಿಲ್ಲ. ನಮ್ಮ ಮನೆಯಿಂದ ಮಾದಕ ವಸ್ತು ಪತ್ತೆಯಾದರೆ ನಮ್ಮನ್ನು ಪ್ರಶ್ನಿಸಲಾಗುತ್ತದೆ, ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ ಗೌತಮ್ ಅದಾನಿಯನ್ನು ಇಲ್ಲಿಯವರೆಗೆ ಏಕೆ ಪ್ರಶ್ನಿಸಲಾಗಿಲ್ಲ? ಅದಾನಿಯ ಮುಂದ್ರಾ ಬಂದರಿನಿಂದ ಸಾವಿರಾರು ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಯಾಕೆ ಅವರು ಕಾನೂನಿಗಿಂತ ದೊಡ್ಡವರೆ” ಎಂದೂ ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
ಜಿಗ್ನೇಶ್ ಮೇವಾನಿ ಎತ್ತಿರುವ ಪ್ರಶ್ನೆಗಳು ಸದ್ಯ ಗುಜರಾತ್‌ನಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಗುಜರಾತ್ ಸಚಿವರುಗಳ ಮೇಲಿನ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಆರೋಪವನ್ನು ನಿರಾಕರಿಸಿದೆ. ಸಾಮಾನ್ಯವಾಗಿಯೇ ವಿಷಯಪಲ್ಲಟಕ್ಕೆ ಬಿಜೆಪಿ ಇಳಿಯುತ್ತಿದೆ. “ಮೇವಾನಿ ಅಭಿವೃದ್ಧಿ ಕಾರ್ಯಗಳ ಬದಲಿಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ” ಎಂದು ಗುಜರಾತ್ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಗೌತಮ್ ಗೆಡಿಯಾ ಆರೋಪಿಸಿದ್ದಾರೆ.
ಇತ್ತೀಚಿನ ವರದಿಗಳು ಗುಜರಾತ್‌ನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. 2021 ಮತ್ತು 2024ರ ನಡುವೆ ಗುಜರಾತ್ ಬಂದರುಗಳಲ್ಲಿ ಸುಮಾರು ₹7,350 ಕೋಟಿ ಮೌಲ್ಯದ 3,407 ಕಿಲೋಗ್ರಾಂಗಳಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2024ರಲ್ಲಿಯೇ ವಶಪಡಿಸಿಕೊಂಡ ಮಾದಕವಸ್ತುಗಳ ಮೌಲ್ಯ ₹7,303 ಕೋಟಿ ಆಗಿದೆ. ಮಾದಕವಸ್ತು ಜಾಲಗಳನ್ನು ಭೇದಿಸಲು ಗುಜರಾತ್ ಸರ್ಕಾರವು ಹೊಸ ಮಾದಕದ್ರವ್ಯ ವಿರೋಧಿ ಕಾರ್ಯಪಡೆ (ANTF) ಯನ್ನು ರಚಿಸಿದೆ ಮತ್ತು ಬಜೆಟ್‌ನಲ್ಲಿ ಹಣವನ್ನು ಮೀಸಲಿಟ್ಟಿದೆ. ಆದರೆ ಸಚಿವರುಗಳೇ ಈ ಜಾಲದಲ್ಲಿರುವ ಆರೋಪಗಳು ಕೇಳಿಬರುತ್ತಿವೆ.





