ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯ ಪ್ರತಿಕ್ರಿಯಿಸಿದ್ದು, ‘ಇದೇ ರಾಜಕೀಯ’ ಎಂದಿದ್ದಾರೆ. ರಾಜಕೀಯದಲ್ಲಿ ಪ್ರಮುಖ ನಿರ್ಧಾರಗಳನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯ, “ಅಧಿಕಾರ ಹಂಚಿಕೆ ವಿಚಾರವನ್ನು ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರು ಮುಖ್ಯಮಂತ್ರಿಯಾದರೂ ಸರಿ, ರಾಜ್ಯಕ್ಕೆ ಒಳ್ಳೆಯದಾಗಬೇಕು” ಎಂದು ಹೇಳಿದ್ದಾರೆ.
“ಎಲ್ಲ ನಾಯಕರಿಗೂ ಅರ್ಹತೆ ಇದೆ. ಯಾರೇ ಮುಖ್ಯಮಂತ್ರಿಯಾದರೂ ನನಗೆ ಅಭ್ಯಂತರವಿಲ್ಲ. ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ವೇಣುಗೋಪಾಲ್ ರಂತ ದೊಡ್ಡ ದೊಡ್ಡ ನಾಯಕರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ” ಎಂದಿದ್ದಾರೆ.
ಇತ್ತೀಚೆಗಷ್ಟೇ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಡಿ.ಕೆ ಶಿವಕುಮಾರ್ ಜೊತೆ ಮಾತನಾಡಿದ್ದು, ‘ಪ್ಲೀಸ್ ವೇಯ್ಟ್’ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ತಮ್ಮ ಮತ್ತು ರಾಹುಲ್ ಗಾಂಧಿ ನಡುವಿನ ಮಾತುಕತೆಯ ಗುಟ್ಟು ಬಿಟ್ಟುಕೊಡದ ಶಿವಕುಮಾರ್, “ನಮ್ಮ ನಡುವಿನ ಮಾತುಕತೆ ಏನು ಎಂಬುದು ಮಾಧ್ಯಮದಲ್ಲಿ ಮಾತನಾಡುವ ವಿಚಾರವಲ್ಲ. ಮಾತುಕತೆಯ ಸಾರವನ್ನು ಹೇಳುವ ಅವಶ್ಯಕತೆಯೂ ಇಲ್ಲ” ಎಂದು ಹೇಳಿದ್ದಾರೆ.
ಸದ್ಯಕ್ಕೆ, ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದರೂ, ಈಗ ಅಂತಹ ಬದಲಾವಣೆಗಳು ನಡೆಯುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಆದಾಗ್ಯೂ, ಸಚಿವ ಸಂಪುಟ ಪುನರ್‌ರಚನೆ ಆಗಲಿದೆ ಎಂಬುದು ವಿಶ್ವಾಸಾರ್ಹ ಮೂಲಗಳಿಂದ ಈದಿನ.ಕಾಮ್‌ಗೆ ಮಾಹಿತಿ ದೊರೆತಿದೆ.




