ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಫೋಟೋಗಳಿರುವ ಪೆನ್ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಆಪ್ತರಿಬ್ಬರಿಗೆ ಜಾಮೀನು ಲಭಿಸಿದೆ.
ಆರೋಪಿಗಳಾದ ಚೇತನ್ ಹಾಗೂ ಲಿಖಿತ್ ಗೌಡ ಎಂಬುವವರಿಗೆ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಆರು ಮತ್ತು ಏಳನೇ ಆರೋಪಿಗಳಾಗಿದ್ದ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರಾದ ಯಲಗುಂದ ಚೇತನ್ ಹಾಗೂ ಲಿಖಿತ್ಗೌಡರನ್ನು ಮೇ 12ರಂದು ಎಸ್ಐಟಿ ತಂಡ ಬಂಧಿಸಿ ವಿಚಾರಣೆ ನಡೆಸಿದ ನಂತರ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಹದಿನೆಂಟು ದಿನಗಳ ಬಳಿಕ ಇಬ್ಬರು ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ.
ಸದ್ಯ ಹಾಸನದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಚೇತನ್ ಹಾಗೂ ಲಿಖಿತ್ಗೌಡ ಇದ್ದು, ಇಂದು ಸಂಜೆ ಅಥವಾ ನಾಳೆ (ಶುಕ್ರವಾರ) ಇಬ್ಬರೂ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಬ್ಬರು ಆರೋಪಿಗಳ ಪರ ವಕೀಲ ಹರೀಶ್ ಬಾಬು ವಾದ ಮಂಡಿಸಿದ್ದರು.
ಬಂಧಿತ ಕಾಂಗ್ರೆಸ್ ಕಾರ್ಯಕರ್ತರು ಮೂರು ದಿನ ಎಸ್ಐಟಿ ಕಸ್ಟಡಿಗೆ
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಅಶ್ಲೀಲ ವಿಡಿಯೊ ವೈರಲ್ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರು ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಗೌಡ ಹಾಗೂ ಚೇತನ್ನನ್ನು ಮೂರು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್: ವಿದೇಶದಿಂದ ಬಂದ ಕೂಡಲೇ ಬಂಧನ?
ಜೂನ್ 1 ರಂದು ಶನಿವಾರ ಸಂಜೆ 4.30ಕ್ಕೆ ಆರೋಪಿಗಳನ್ನು ಮತ್ತೆ ಕೋರ್ಟ್ಗೆ ಹಾಜರುಪಡಿಸಲು ಸೂಚಿಸಲಾಗಿದೆ. ಜೂನ್ 1ರವರೆಗೆ ನವೀನ್ ಹಾಗೂ ಚೇತನ್ ಎಸ್ಐಟಿ ಕಸ್ಟಡಿಗೆ ನೀಡಿ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ.
ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಆರೋಪಿಗಳಾದ ಚೇತನ್, ನವೀನ್ ಗೌಡ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇದ್ದ ಕಾರಣ ಹೈಕೋರ್ಟ್ಗೆ ಬಂದಿದ್ದರು. ಈ ವೇಳೆ ಇಬ್ಬರನ್ನೂ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.





