ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ, ಕೆ.ಆರ್ ನಗರದ ಸಂತ್ರಸ್ತ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಅಪರಾಧಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಅಂದಿನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಲೈಂಗಿಕ ವಿಡಿಯೋಗಳ ಪೆನ್‌ಡ್ರೈವ್‌ಗಳು ಹಾಸನ ನಗರದಾದ್ಯಂತ ಪತ್ತೆಯಾಗಿದ್ದವು. ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ ಬೆಳಕಿಗೆ ಬರುತ್ತಿದ್ದಂತೆ, ಆತ ಜರ್ಮನಿ ಪಲಾಯನ ಮಾಡಿದ್ದನು. ಆತನ ವಿರುದ್ಧ ಬಂಧನ ವಾರೆಂಟ್ ಇಶ್ಯೂ ಆಗಿತ್ತು. ಈ ಬೆನ್ನಲ್ಲೇ, ಮೇ 31ರಂದು ಪ್ರಜ್ವಲ್ ಬೆಂಗಳೂರಿಗೆ ಹಿಂದಿರುಗಿದ್ದರು. ಬಳಿಕ, ಆತನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದರು.
ಅಂದಿನಿಂದ ಈವರೆಗೆ ಪ್ರಜ್ವಲ್ ರೇವಣ್ಣ ಜೈಲಿನಲ್ಲಿಯೇ ಇದ್ದಾರೆ. ಪ್ರಜ್ವಲ್ ರೇವಣ್ಣನ ತೋಟದ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಜ್ವಲ್ ರೇವಣ್ಣನ ಪ್ರಕರಣದ ಹಿನ್ನೋಟ;
2024ರ ಏಪ್ರಿಲ್: ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯದ ವಿಡಿಯೋಗಳಿರುವ ಪೆನ್‌ಡ್ರೈವ್‌ಗಳು ಹಾಸನದ ವಿವಿಧ ಪ್ರದೇಶಗಳಲ್ಲಿ ಸಿಕ್ಕಿದ್ದವು. ಇದು ದೇಶಾದ್ಯಂತ ಕೋಲಾಹಲವನ್ನು ಹುಟ್ಟುಹಾಕಿತು.
2024ರ ಏಪ್ರಿಲ್ 20: ಚುನಾವಣೆಯ ಸಮಯದಲ್ಲಿ ಪ್ರಜ್ವಲ್ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ವೀಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಜ್ವಲ್ ರೇವಣ್ಣನ ಚುನಾವಣಾ ಏಜೆಂಟ್ ದೂರು ದಾಖಲಿಸಿದರು.
2024ರ ಏಪ್ರಿಲ್ 26: ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡ ಕೂಡಲೇ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ, ಭಾರತದಿಂದ ಪಲಾಯನ ಮಾಡಿದರು.
2024ರ ಏಪ್ರಿಲ್ 27: ಪ್ರಕರಣಗಳ ತನಿಖೆಗಾಗಿ ಕರ್ನಾಟಕ ಸರ್ಕಾರವು ಎಸ್‌ಐಟಿ ರಚಿಸಿತು.
2024ರ ಏಪ್ರಿಲ್ 28: ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ, ಮಾಜಿ ಸಚಿವ ಎಚ್.ಡಿ ರೇವಣ್ಣ ಅವರ ವಿರುದ್ಧ ಸಂತ್ರಸ್ತ ಮನೆಕೆಲಸದ ಮಹಿಳೆ ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿದರು.
2024ರ ಏಪ್ರಿಲ್ 29: ಸಾಕ್ಷಿ ಹೇಳದಂತೆ ತಡೆಯಲು ದೂರುದಾರ ಮಹಿಳೆಯನ್ನು ರೇವಣ್ಣನ ಕುಟುಂಬಸ್ಥರು ಅಪಹರಿಸಿದ್ದಾರೆ ಎಂದು ಅಪಹರಣ ಪ್ರಕರಣ ದಾಖಲಾಯಿತು.
2024ರ ಏಪ್ರಿಲ್ 30: ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್‌ನಿಂದ ಅಮಾನತುಗೊಳಿಸಲಾಯಿತು.
2024ರ ಮೇ 2: ಕರ್ನಾಟಕ ಪೊಲೀಸರು ಪ್ರಜ್ವಲ್ ರೇವಣ್ಣ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿತು.
2024ರ ಮೇ 4: ಅಪಹರಣಕ್ಕೆ ತುತ್ತಾಗಿದ್ದ ದೂರದಾರ ಮನೆಕೆಲಸದ ಮಹಿಳೆಯನ್ನು ಎಸ್‌ಐಟಿ ರಕ್ಷಿಸಿತು.
2024ರ ಮೇ 30: ಆರೋಪಿ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಹೊರಟರು.
2024ರ ಮೇ 31: ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಆತನನ್ನು ಎಸ್‌ಐಟಿ ಪೊಲೀಸರು ಬಂಧಿಸಿದರು.
2024ರ ಜೂನ್ 26: ಪ್ರಜ್ವಲ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆತನಿಗೆ ಜಾಮೀನು ನೀಡಲು ನಿರಾಕರಿಸಿತು.
2024ರ ಜುಲೈ 5: ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಪ್ರಜ್ವಲ್ ಮೇಲ್ಮನವಿ ಸಲ್ಲಿಸಿದರು.
2024ರ ಆಗಸ್ಟ್ 23: ಪ್ರಕರಣ ಸಂಬಂಧ ಎಸ್‌ಐಟಿ ಮೊದಲ ಆರೋಪಪಟ್ಟಿ ಸಲ್ಲಿಸಿತು.
2024ರ ಸೆಪ್ಟೆಂಬರ್ 9: ಎಸ್‌ಐಟಿ 1,632 ಪುಟಗಳ ಎರಡನೇ ಆರೋಪಪಟ್ಟಿ ಸಲ್ಲಿಸಿತು.
2024ರ ಅಕ್ಟೋಬರ್ 21: ಎರಡು ಅತ್ಯಾಚಾರ ಪ್ರಕರಣಗಳು ಮತ್ತು ಒಂದು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತು.
2024ರ ನವೆಂಬರ್ 2: ಅತ್ಯಾಚಾರ ಸಂತ್ರಸ್ತೆಯ ಒಳ ಉಡುಪುಗಳಲ್ಲಿ ಪ್ರಜ್ವಲ್ ರೇವಣ್ಣನ ಡಿಎನ್‌ಎ ಪತ್ತೆ.
2024ರ ನವೆಂಬರ್ 11: ಆರೋಪಿ ಪ್ರಜ್ವಲ್‌ನ ಜಾಮೀನು ಅರ್ಜಿಯನ್ನುಸುಪ್ರೀಂ ಕೋರ್ಟ್ ತಿರಸ್ಕರಿಸಿತು.
2024ರ ಜನವರಿ 16: ಅತ್ಯಾಚಾರ ಪ್ರಕರಣದ ಎಲ್ಲ ಡಿಜಿಟಲ್ ಸಾಕ್ಷ್ಯಗಳ ಮುದ್ರಿತ ಪ್ರತಿಗಾಗಿ ಪ್ರಜ್ವಲ್ ಸಲ್ಲಿಸಿದ ಮನವಿಯನ್ನು ಕರ್ನಾಟಕ ಹೈಕೋರ್ಟ್ ನಿರಾಕರಿಸಿತು.
2025ರ ಮೇ 1: ಹೊಸ ವಕೀಲರನ್ನು ನೇಮಿಸಲು ಹೆಚ್ಚಿನ ಸಮಯ ಕೋರಿ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತು.
2025ರ ಮೇ 2: ದೂರುದಾರ, ಸಂತ್ರಸ್ತ ಮನೆಕೆಲಸದ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯದಲ್ಲಿ ಆರಂಭಿಸಿತು.
2025ರ ಜುಲೈ 18: ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಲಯವು ತನ್ನ ತೀರ್ಪನ್ನು ಜುಲೈ 30ಕ್ಕೆ ಕಾಯ್ದಿರಿಸಿತು.
2025ರ ಜುಲೈ 30: ವಿಶೇಷ ನ್ಯಾಯಾಲಯವು ಎಸ್‌ಐಟಿಯಿಂದ ಕೆಲವು ಸ್ಪಷ್ಟೀಕರಣ ಕೇಳಿ, ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿತು.
2025ರ ಆಗಸ್ಟ್ 1: ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣನನ್ನು ಅತ್ಯಾಚಾರ ಪ್ರಕರಣದ ಅಪರಾಧಿ ಎಂದು ಘೋಷಿಸಿತು.
2025ರ ಆಗಸ್ಟ್ 2: ಪ್ರಕರಣದಲ್ಲಿ ಪ್ರಜ್ವಲ್‌ಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತು.




