ಹಾಸನದ ಜಿಲ್ಲಾ ಕ್ರಿಡಾಂಗಣದಲ್ಲಿ ಏಪ್ರಿಲ್ 22ರಂದು ಬೆಳಿಗ್ಗೆ ನಗರದ ನಿವಾಸಿಯೊಬ್ಬರು ನಡೆದುಕೊಂಡು ಹೋಗುವಾಗ ಪೆನ್‌ಡ್ರೈವ್‌ವೊಂದು ಬಿದ್ದಿರುವುದನ್ನು ಗಮನಿಸಿದರು. ಮೊದಲಿಗೆ ಈ ಪೆನ್‌ಡ್ರೈವ್ಅನ್ನ ನಿರ್ಲಕ್ಷಿಸಿ ಮುಂದೆ ಹೋದ ಅವರು, ಬಳಿಕ ಕುತೂಹಲದಿಂದ ಮರಳು ಬಂದು ಅದನ್ನು ತೆಗೆದುಕೊಂಡು ತಮ್ಮ ಸ್ನೇಹಿತರಿಗೆ ನೀಡಿದ್ದಾರೆ.
ಆ ಕ್ರೀಡಾಂಗಣದಲ್ಲಿ ಒಂದು ಪೆನ್‌ಡ್ರೈವ್ ಮಾತ್ರ ಇರಲಿಲ್ಲ. ಅದೇ ಕ್ರೀಡಾಂಗಣದ ಸುತ್ತಮುತ್ತಲ ಪ್ರದೇಶಗಳಲ್ಲಿ 8 ರಿಂದ 10 ಪೆನ್‌ಡ್ರೈವ್‌ಗಳು ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಅಲ್ಲದೆ, ಹಾಸನದ ಹೃದಯ ಭಾಗದಲ್ಲಿರುವ ಮಹಾರಾಜ ಉದ್ಯಾನವನದ ವಾಕರ್ ಸ್ಥಳ, ಬೆಂಚ್‌ಗಳಲ್ಲಿ ಪೆಬ್‌ಡ್ರೈವ್‌ಗಳನ್ನು ಸಕ್ಕಿದ್ದವು ಎಂದು ಹೇಳಾಗುತ್ತಿದೆ.
ಜನರು ಪೆನ್‌ಡ್ರೈವ್‌ಗಳಲ್ಲಿ ಏನಿದೆ ಎಂದು ನೋಡಿದಾಗ, ಆ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ್ ವಿಡಿಯೋ ಕ್ಲಿಪ್‌ಗಳು, ಫೋಟೋಗಳು ಹಾಗೂ ವಿಡಿಯೋ ಕರೆ ಮಾಡಿದ ಸ್ಕ್ರೀನ್ ಶಾಟ್‌ಗಳು ಇದ್ದವು. ಅವುಗಳಲ್ಲಿ ಕೆಲವು ವಿಡಿಯೋಗಳು ಮತ್ತು ಫೋಟೋಗಳನ್ನು ಕೆಲ ಕಿಡಿಗೇಡಿಗಳು ಮಹಿಳೆಯರ ಮುಖಗಳು ಸ್ಪಷ್ಟವಾಗಿ ಕಾಣಿಸುವಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ, ಆ ವಿಡಿಯೋಗಳಲ್ಲಿರುವ ಪುರುಷನ ಮುಖ ಅಷ್ಟಾಗಿ ಕಾಣಿಸುವುದಿಲ್ಲ. ಆದರೂ, ಮಹಿಳೆಯರಿಗೆ ಮಾಡಿದ ವಿಡಿಯೋ ಕರೆಗಳ ಸ್ಕ್ರೀನ್‌ಶಾಟ್‌ಗಳಲ್ಲಿ ಭಾಗಶಃ ಪುರುಷನ ಮುಖ ಕಾಣಿಸುತ್ತದೆ.
ವಿಡಿಯೋದಲ್ಲಿ ಆ ವ್ಯಕ್ತಿ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರ ಮೊಮ್ಮಗ, ಹಾಸನ ಸಂಸದ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂದು ಹೇಳಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣಗಳೂ ದಾಖಲಾಗಿವೆ. ಈಗಾಗಲೇ ಪ್ರಜ್ವಲ್ ತಂದೆ, ಮಾಜಿ ಸಚಿವ ಎಚ್.ಡಿ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದೆ. ಪ್ರಜ್ವಲ್ ಬಂಧನಕ್ಕಾಗಿ ಯತ್ನಿಸುತ್ತಿದೆ.
ಅಂದಹಾಗೆ, ಪ್ರಜ್ವಲ್ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹೊರಬಂದ ನಾಲ್ಕು ದಿನಗಳಲ್ಲೇ (ಏಪ್ರಿಲ್ 26) ಹಾಸನ ಕ್ಷೇತ್ರಕ್ಕೆ ಮತದಾನ ನಡೆಯಿತು. ಮತದಾನದ ಹಿಂದಿನ ಮೂರು ದಿನಗಳಲ್ಲಿ ಪ್ರಜ್ವಲ್ ಯಾವುದೇ ಪ್ರಚಾರ ನಡೆಸಲಿಲ್ಲ. ಅಲ್ಲದೆ, ಮತದಾನ ಮುಗಿಯುತ್ತಿದ್ದಂತೆಯೇ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ.
ಹೊರಬಂದಿರುವ ವಿಡಿಯೋಗಳ ಪೈಕಿ ಎರಡು ಕ್ಲಿಪ್‌ಗಳಲ್ಲಿ ಆತನ ದೌರ್ಜನ್ಯವನ್ನು ಮಹಿಳೆಯರು ವಿರೋಧಿಸುವುದು ಮತ್ತು ಬೇಡವೆಂದು ಅಂಗಲಾಚುವುದನ್ನು ಕಾಣಬಹುದು. ಆ ಸಂತ್ರಸ್ತೆ ಮಹಿಳೆಯರಲ್ಲಿ ಓರ್ವರನ್ನು ಪ್ರಜ್ವಲ್ ತಂದೆ, ಹೊಳೆನರಸೀಪುರ ಶಾಸಕ ಎಚ್.ಡಿ ರೇವಣ್ಣ ಅಪಹರಿಸಿದ್ದರು ಎಂದು ಆರೋಪಿಸಲಾಗಿದೆ.
ಈ ವಿಡಿಯೋ ಮತ್ತು ಫೋಟೋಗಳಲ್ಲಿ ವಯಸ್ಕ ಯುವತಿಯರು, ವಯಸ್ಸಾದ ಮಹಿಳೆಯರು, ವಿವಾಹಿತರು ಮತ್ತು ಅವಿವಾಹಿತ ಮಹಿಳೆಯರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಈ ಮಹಿಳೆಯರಲ್ಲಿ ಕೆಲವರು ಅವರ ಮನೆ-ಸಹಾಯಕರು, ಪಕ್ಷದ ಕಾರ್ಯಕರ್ತರು, ವೃತ್ತಿಪರರು ಮತ್ತು ಸರ್ಕಾರಿ ಅಧಿಕಾರಿಗಳು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿದ್ದ ಕೆಲವು ಮಹಿಳೆಯರು ರಾಜಕೀಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಹಾಸನದ ಜನರಿಗೆ ಚಿರಪರಿಚಿತರಾಗಿದ್ದರು. ವಿಡಿಯೋ ವೈರಲ್ ಆಗುವವರೆಗೂ ಯಾರೂ ಪೊಲೀಸರಿಗೆ ದೂರು ನೀಡಿರಲಿಲ್ಲ.
ಸಂತ್ರಸ್ತೆಯರ ಪೈಕಿ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ವೈಯಕ್ತಿಕ, ವೃತ್ತಿಪರ ಅಥವಾ ಕ್ಷೇತ್ರದ ಕೆಲಸಕ್ಕಾಗಿ ಭೇಟಿ ಮಾಡಿದ ಮಹಿಳೆಯರನ್ನು ಸಂಸದ ಪ್ರಜ್ವಲ್ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.
ಸಂತ್ರಸ್ತೆಯ ಕುಟುಂಬದವರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿ ಬಲವಂತವಾಗಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೆ, ತನ್ನ ಕೃತ್ಯದ ವಿಡಿಯೋಗಳನ್ನು ತಾನೇ ರೆಕಾರ್ಡ್ ಮಾಡಿ, ಸಂತ್ರಸ್ತೆಯನ್ನು ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಓರ್ವ ಸಂತ್ರಸ್ತೆ ಆರೋಪಿಸಿದ್ದಾರೆ. ರಾಜ್ಯಸಭಾ ಸಂಸದರಾಗಿದ್ದ ದೇವೇಗೌಡರ ಅಧಿಕೃತ ನಿವಾಸವನ್ನೂ ಈ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಲೈಂಗಿಕ ಹಗರಣವು ಹೊರಬರುತ್ತಿದ್ದಂತೆ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ಭುಗಿಲೆದ್ದವು. ಸಂಸದ ಪ್ರಜ್ವಲ್‌ನನ್ನು ಬಂಧಿಸುವಂತೆ ಒತ್ತಾಯಗಳು ಕೇಳಿಬಂದವು. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟವೂ ಆರಂಭವಾಯಿತು.
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಸದಸ್ಯರು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದರು.
ದೇವರಾಜೇಗೌಡ ಹೇಳುತ್ತಿದ್ದ ವಿಡಿಯೋಗಳಿವು
2023ರಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಎಚ್.ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ಜಿ ದೇವರಾಜೇಗೌಡ ಸೋಲುಂಡಿದ್ದರು. ಅಲ್ಲದೇ, ಅವರು ರೇವಣ್ಣ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುವುದರಲ್ಲಿಯೂ ಹೆಸರುವಾಸಿಯಾಗಿದ್ದರು. ಅವರು ಈ ಹಿಂದೆ ಹಲವಾರು ಬಾರಿ, ‘ಪ್ರಜ್ವಲ್‌ಗೆ ಸಂಬಂಧಿಸಿದ ವಿಡಿಯೋಗಳು, ಫೋಟೋಗಳು ನಮ್ಮ ಬಳಿ ಇವೆ. ತಡೆಯಾಜ್ಞೆ ತೆರವು ಮಾಡಿದರೆ, ಕೆಲವು ವಿಡಿಯೋಗಳನ್ನು ಎಲ್‌ಇಡಿ ಪರದೆ ಹಾಕಿ ತೋರಿಸುತ್ತೇನೆ” ಎಂದು ಪದೇ ಪದೇ ಹೇಳುತ್ತಿದ್ದರು. ಈ ಹರಿದಾಡುತ್ತಿರುವ ವಿಡಿಯೋಗಳು ಅವರ ಹೇಳುತ್ತಿದ್ದ ವಿಡಿಯೋಗಳೇ ಎಂಬುದು ಏಪ್ರಿಲ್ 22ರ ಸಂಜೆಯ ವೇಳೆಗೆ ಜಿಲ್ಲೆಯ ಜನರಿಗೆ ಅರಿವಾಯಿತು.
“ನನ್ನ ಬಳಿ ಇರುವ ಈ ವಿಡಿಯೋಗಳು ಜೆಡಿಎಸ್ ನಾಯಕನ ನಿಜ ಸ್ವರೂಪವನ್ನು ಬಯಲಿಗೆಳೆಯುತ್ತದೆ. ಪ್ರಜ್ವಲ್ ರೇವಣ್ಣ ಫೋಟೋ ಮತ್ತು ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವ ಕಾರಣ ಅವುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಸ್ಥಿತಿಯಲ್ಲಿ ನಾನಿಲ್ಲ” ಎಂದು ಈ ವರ್ಷದ ಆರಂಭದಲ್ಲಿ ಒಂದೆರಡು ಬಾರಿ ಮಾಧ್ಯಮಗಳಿಗೆ ದೇವರಾಜೇಗೌಡ ತಿಳಿಸಿದ್ದರು.
2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಈ ನಡುವೆ 2023ರ ಡಿಸೆಂಬರ್ 8ರಂದು ದೇವರಾಜೇಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದು, “ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದವರ ಮೇಲೆ ಭಾರೀ ದೊಡ್ಡ ಆರೋಪಗಳಿವೆ. ಅದರಲ್ಲೂ ವಿಶೇಷವಾಗಿ ಪ್ರಜ್ವಲ್ ರೇವಣ್ಣನವರು ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿವೆ. ಅಂತಹ ವ್ಯಕ್ತಿಯನ್ನು ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಿದರೆ, ಅದರಿಂದ ಬಿಜೆಪಿಯು ತೀವ್ರ ಮುಜುಗರಕ್ಕೆ ಒಳಗಾಗುವಂತಾಗುತ್ತದೆ” ಎಂದು ಹೇಳಿದ್ದರು.
“ಪ್ರಜ್ವಲ್ ಅವರ 2,976 ಸ್ಪಷ್ಟ ಕ್ಲಿಪ್‌ಗಳನ್ನು ಹೊಂದಿರುವ ಪೆನ್ ಡ್ರೈವ್ ನನ್ನಲ್ಲಿದೆ” ಎಂದು ಹೇಳಿಕೊಂಡಿದ್ದರು. ಪೆನ್ ಡ್ರೈವ್‌ನ ಪ್ರತಿಯನ್ನು ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ ನಾಯಕರಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದರು.
ಈ ವಿಡಿಯೋಗಳು ಹೊರಬರಲು ಕಾಂಗ್ರೆಸ್ ಕಾರಣವೆಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಆದರೂ, ವಿಡಿಯೋಗಳನ್ನು ಹರಿಬಿಡುವಲ್ಲಿ ಬಿಜೆಪಿ ಕಾರ್ಯಕರ್ತರ ಪ್ರಮುಖ ಪಾತ್ರವಿದೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದೆ.
ಪ್ರಜ್ವಲ್ ಕಾರು ಚಾಲಕ ಹೇಳಿದ್ದೇನು?
ಅಶ್ಲೀಲ ವಿಡಿಯೋಗಳ ಹೊರಬಂದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಪ್ರಜ್ವಲ್ ಅವರ ಮಾಜಿ ಕಾರು ಚಾಲಕ ಕಾರ್ತಿಕ್, “ನಾನು ಪ್ರಜ್ವಲ್ ರೇವಣ್ಣ ಅವರ ಮೊಬೈಲ್‌ನಿಂದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ನನ್ನ ಮೊಬೈಲ್‌ಗೆ ಶೇರ್ ಮಾಡಿಕೊಂಡಿದ್ದೆ. ಈ ವಿಡಿಯೋ ಇರುವ ಪೆನ್‌ಡ್ರೈವ್‌ಅನ್ನು ದೇವರಾಜೇಗೌಡ ಅವರಿಗೆ ಕೊಟ್ಟಿದ್ದೇನೆ. ಅವರಿಗಲ್ಲದೆ, ಬೇರೆ ಯಾರಿಗೂ ಕೊಟ್ಟಿಲ್ಲ” ಎಂದು ಹೇಳಿದ್ದಾರೆ.
ಜರ್ಮನಿಗೆ ಪ್ರಜ್ವಲ್ ಪರಾರಿ
ಏಪ್ರಿಲ್ 26ರಂದು ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆದಿದೆ. ಅಂದು, ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯಲ್ಲಿ ಪ್ರಜ್ವಲ್ ರೇವಣ್ಣ ಮತದಾನ ಮಾಡಿದ್ದರು. ಅದೇ ಕೊನೆಯ ಬಾರಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು. ಮರುದಿನ ರಾತ್ರಿ 2 ಗಂಟೆಗೆ, ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜರ್ಮನಿಗೆ ಪರಾರಿಯಾಗಿದ್ದಾರೆ. ಆ ಬಳಿಕ, ಅವರನ್ನು ಜೆಡಿಎಸ್‌ನಿಂದ ಅಮಾನತು ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಏಕಾಏಕಿ ವಿದೇಶಕ್ಕೆ ತೆರಳಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಬಳಿಕ, ಲೈಂಗಿಕ ಕಿರುಕುಳ ಆರೋಪದ ಪ್ರಕರಣಗಳ ತನಿಖೆಗೆ ಕೋರಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಿತು. ನಂತರ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.
ಅಪರಾಧ ತನಿಖಾ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಬಿಜಯ್ ಕುಮಾರ್ ಅವರು ವಿಚಾರವಾದಿ ಎಂ.ಎಂ ಕಲಬುರ್ಗಿ ಮತ್ತು ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದವರು.
ಎಸ್‌ಐಟಿ ತಂಡದಲ್ಲಿ ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯ ಸಹಾಯಕ ಪೊಲೀಸ್ ಮಹಾ ನಿರೀಕ್ಷಕ ಸುಮನ್ ಡಿ ಪನ್ನೇಕರ್ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸೀಮಾ ಲಟ್ಕರ್ ಇದ್ದಾರೆ.
ಪ್ರಜ್ವಲ್ ಮತ್ತು ರೇವಣ್ಣ ವಿರುದ್ಧ ಎಫ್‌ಐಆರ್
ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯೊಬ್ಬರು ಏಪ್ರಿಲ್ 28ರಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354(A) (ಲೈಂಗಿಕ ಕಿರುಕುಳ), 354(D) (ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506 (ಬೆದರಿಕೆ) ಹಾಗೂ 509 (ಮಹಿಳೆ ಮಾನಹಾನಿ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅದಾದ ಬಳಿಕ, ರೇವಣ್ಣನ ಮನೆಯ ಮಾಜಿ ಸಹಾಯಕರೊಬ್ಬರು ರೇವಣ್ಣ ಮತ್ತು ಪ್ರಜ್ವಲ್‌ನಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ಆರೋಪಿಸಿದ್ದಾರೆ. ನಂತರ ರೇವಣ್ಣ ಅವರನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಸೇರಿಸಲಾಗಿದೆ. ಈವರೆಗೆ, ಅಪ್ಪ-ಮಗನ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ.
ಅತ್ಯಾಚಾರ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ ವಿರುದ್ಧ ಇಬ್ಬರು ಸಂತ್ರಸ್ತೆಯರು ದೂರು ನೀಡಿದ್ದಾರೆ. ಪ್ರಜ್ವಲ್ ವಿರುದ್ಧ ಸಾಕ್ಷಿ ಹೇಳದಂತೆ ತಡೆಯುವ ಪ್ರಯತ್ನದಲ್ಲಿ ಮಹಿಳೆಯೊಬ್ಬರನ್ನು ಅಪಹರಣ ಮಾಡಿದ್ದಕ್ಕಾಗಿ ಎಚ್.ಡಿ ರೇವಣ್ಣ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಅಪಹರಣಕ್ಕೊಳಗಾದ ಮಹಿಳೆಯನ್ನ ಎಸ್‌ಐಟಿ ರಕ್ಷಿಸಿದ್ದು, ಇದೇ ಪ್ರಕರಣದಲ್ಲಿ ರೇವಣ್ಣ ಮತ್ತು ಅವರ ಆಪ್ತನನ್ನು ಬಂಧಿಸಲಾಗಿದೆ.
“ವಿಡಿಯೋಗಳಲ್ಲಿದ್ದ ಹಲವಾರು ಸಂತ್ರಸ್ತೆಯರನ್ನು ನಾವು ಗುರುತಿಸಿದ್ದೇವೆ. ಆದರೆ, ಸಂತ್ರಸ್ತೆಯರಿಗೆ ದೂರು ದಾಖಲು ಮಾಡುವಂತೆ ಮನವರಿಕೆ ಮಾಡುವುದು ಸವಾಲಾಗಿದೆ” ಎಂದು ಹಿರಿಯ ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಡಿಯೋಗಳು ವೈರಲ್ ಆದ ಬಳಿಕ ಮಹಿಳೆಯರಿಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಆರಂಭದಲ್ಲಿ, ಸಂತ್ರಸ್ತೆಯರ ಪೈಕಿ ಕೆಲವರು ತಮ್ಮ ಕುಟುಂಬದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಕೆಲವು ಅಪರಿಚಿತರು ತಮ್ಮ ಫೋಟೋಗಳೊಂದಿಗೆ ಮಾರ್ಫ್ ಮಾಡಿದ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
“ಸಂತ್ರಸ್ತೆಯರಲ್ಲಿ ಕೆಲವರು ಊರನ್ನೇ ಬಿಟ್ಟಿದ್ದಾರೆ. ಇನ್ನು ಕೆಲವರು ಅಜ್ಞಾತವಾಗಿದ್ದಾರೆ. ಅವರು ಎಲ್ಲರಿಂದಲೂ ದೂರವಿರಲು ಬಯಸುತ್ತಿದ್ದಾರೆ” ಎಂದು ಅವರ ಜತೆಗೆ ಮಾತುಕತೆ ನಡೆಸಿದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
“ಸಂತ್ರಸ್ತೆಯರಿಗೆ ಕೌನ್ಸೆಲಿಂಗ್ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಸಂತ್ರಸ್ತೆಯೊಬ್ಬರ ಸ್ನೇಹಿತತು ಹೇಳಿದ್ದಾರೆ.
ದೂರು ನೀಡಲು ಮುಂದೆ ಬರುವ ಸಂತ್ರಸ್ತೆಯರಿಗೆ ಆರ್ಥಿಕ ನೆರವು ಮತ್ತು ಭದ್ರತೆಯನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಸಂತ್ರಸ್ತೆಯರಿಗೆ ಬೆಂಬಲ ನೀಡಲು ಸುಮಾರು 10 ವೃತ್ತಿಪರ ಮಹಿಳಾ ಸಲಹೆಗಾರರನ್ನು ಎಸ್‌ಐಟಿ ನಿಯೋಜಿಸಿದೆ.
“ಹೆಚ್ಚಿನ ಮಹಿಳೆಯರು ದೂರು ನೀಡಲು ಹೆದರುತ್ತಿದ್ದಾರೆ. ಅಲ್ಲದೇ, ಅನೇಕ ಸಂದರ್ಭಗಳಲ್ಲಿ ಅವರ ವಿಡಿಯೋಗಳು ಪ್ರಸಾರವಾಗುತ್ತಿವೆ ಎಂದು ಅವರ ಕುಟುಂಬಗಳಿಗೆ ತಿಳಿದಿರುವುದಿಲ್ಲ. ನಾವು ಅವರ ಕುಟುಂಬಗಳಿಗೂ ಸಲಹೆ ನೀಡಬೇಕಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ರೇವಣ್ಣ ಕುಟುಂಬವು ಪಾಳೇಗಾರಿಕೆ ಧೋರಣೆ ಹೊಂದಿದ್ದು, ಹಾಸನವನ್ನು ತಮ್ಮ ‘ರಿಪಬ್ಲಿಕ್’ ಮಾಡಿಕೊಂಡಿದೆ. ನಿರ್ಭಯದಿಂದ ಹಸನವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ. ಅವರ ಕುಟುಂಬವು ಸಹಾಯ ಕೋರಿ ಬಂದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವುದು ಈಗ ಬಹಿರಂಗವಾಗಿದೆ” ಎಂದು ಹೊಳೆನರಸೀಪುರದ ನಿವಾಸಿಯೊಬ್ಬರು ತಿಳಿಸಿದ್ದಾರೆ.
“ಸಂತ್ರಸ್ತ ಮಹಿಳೆಯರು ಹೆಚ್ಚಾಗಿ ಹಾಸನದವರಾಗಿದ್ದಾರೆ. ಇದು ಹಾಸನದಲ್ಲಿ ಪ್ರಜ್ವಲ್ ನಿರ್ಭೀತಿಯಿಂದ ಕೃತ್ಯಗಳನ್ನು ಎಸಗುತ್ತಿರುವುದನ್ನು ಸೂಚಿಸುತ್ತದೆ” ಎಂದು ರಾಜಕೀಯ ಕಾರ್ಯಕರ್ತರೊಬ್ಬರು ಹೇಳುತ್ತಾರೆ.
ದೂರು ನೀಡಿದ ಇಬ್ಬರು ಸಂತ್ರಸ್ತರು ತಮಗಾದ ಸಂಕಷ್ಟವನ್ನು ಪೊಲೀಸರಿಗೆ ವಿವರಿಸಿದ್ದಾರೆ. ಅವರ ದೂರುಗಳ ಆಧಾರದ ಮೇಲೆ, ಪ್ರಜ್ವಲ್ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ.
ದಾಖಲಾದ ಮೊದಲ ಅತ್ಯಾಚಾರ ಪ್ರಕರಣ
2021ರಲ್ಲಿ ಹಾಸ್ಟೆಲ್‌ನಲ್ಲಿ ಕೆಲವು ಮಹಿಳಾ ವಿದ್ಯಾರ್ಥಿಗಳಿಗೆ ಸೀಟು ಕೋರಿ ಸಂಸದರನ್ನು ಭೇಟಿಯಾಗಲು ಹೋದಾಗ ಅವರ ಹಾಸನದ ನಿವಾಸದಲ್ಲಿ ಪ್ರಜ್ವಲ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಹಕರಿಸದಿದ್ದರೆ ತನ್ನನ್ನು ಹಾಗೂ ತನ್ನ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು 44 ವರ್ಷದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಜೆಡಿಎಸ್ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದಾರೆ.
“ನಾನು ಯಾರಿಗಾದರೂ ಈ ಬಗ್ಗೆ ಹೇಳಿದರೆ ಅವರು ಈ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ನಾನು ಇರುವ ವಿಡಿಯೋದಲ್ಲಿ ಅವರು ಕಾಣಿಸುತ್ತಿಲ್ಲ. ಪ್ರಜ್ವಲ್ ಕರೆದಾಗಲೆಲ್ಲ ನಾನು ಆತನ ಮನೆಗೆ ಹೋಗಬೇಕಿತ್ತು. ಅಲ್ಲದೆ, ವಿಡಿಯೋ ಕರೆ ಮಾಡಿಯೂ ನನ್ನನ್ನು ವಿವಸ್ತ್ರವಾಗುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದರು. ಈ ವರ್ಷಗಳಲ್ಲಿ ಆತ ನನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ” ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ಮಹಿಳೆ ಇರುವ ಹಲವು ವಿಡಿಯೋಗಳಲ್ಲಿ ವ್ಯಕ್ತಿಯ ಮುಖ ಕಾಣಿಸುತ್ತಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಅಪರಾಧಿಗೆ ತಾನು ಸಿಕ್ಕಿಬೀಳುವುದಿಲ್ಲ ಎಂಬ ವಿಶ್ವಾಸವನ್ನು ನೀಡಿದೆ. ಆದಾಗ್ಯೂ, ಎಸ್‌ಐಟಿ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ವೀಡಿಯೊದಲ್ಲಿ ವ್ಯಕ್ತಿಯ ಗುರುತನ್ನು ಪತ್ತೆ ಮಾಡುತ್ತಿದ್ದಾರೆ.
ಸಂತ್ರಸ್ತೆಯ ಮಗ ದಾಖಲಿಸಿದ ಪ್ರಕರಣ
ಎರಡನೇ ದೂರನ್ನು ರೇವಣ್ಣನವರ ಹೊಳೆನರಸೀಪುರ ಮನೆಯಲ್ಲಿ ಅಡುಗೆ ಸಹಾಯಕಿ ದಾಖಲಿಸಿದ್ದಾರೆ. ಆಕೆಗೆ ಸುಮಾರು 60 ವರ್ಷ. ಆಕೆ ತನ್ನನ್ನು ಬಿಡುವಂತೆ ಕಾಮುಕನನ್ನು ಬೇಡಿಕೊಳ್ಳುತ್ತಿರುವುದು ವಿಡಿಯೋ ಕ್ಲಿಪ್‌ನಲ್ಲಿ ಕಾಣಿಸಿಕೊಂಡಿದೆ.
ವೀಡಿಯೋದಲ್ಲಿ, ಮಹಿಳೆ ನಾನು ನಿಮ್ಮ ತಂದೆ ಮತ್ತು ಅಜ್ಜನಿಗೆ ಊಟ ಬಡಿಸಿದ್ದೇನೆ. ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದಾಳೆ. ಆದರೆ, ಆ ವಿಡಿಯೋದಲ್ಲಿ ಮುಖ ಕಾಣದ ವ್ಯಕ್ತಿ ಆಕೆಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ವಿಡಿಯೋ ಹೊರಬಂದ ಬಳಿಕ, ಆಕೆ ನಾಪತ್ತೆಯಾಗಿದ್ದರು. “ಪ್ರಜ್ವಲ್ ವಿರುದ್ಧ ಸಾಕ್ಷಿ ಹೇಳದಂತೆ ತಡೆಯಲು ರೇವಣ್ಣನ ಆಜ್ಞೆಯ ಮೇರೆಗೆ ಸತೀಶ್ ಬಾಬು ಎಂಬ ವ್ಯಕ್ತಿ ತನ್ನ ತಾಯಿಯನ್ನು ಬಲವಂತವಾಗಿ ಕರೆದೊಯ್ದಿದ್ದಾನೆ. ತನ್ನ ತಾಯಿಯನ್ನು ಅಪಹರಿಸಲಾಗಿದೆ” ಎಂದು ಸಂತ್ರಸ್ತೆಯ ಮಗ ಮೈಸೂರು ಜಿಲ್ಲೆಯ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ರೇವಣ್ಣ ಮತ್ತು ಸತೀಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ಕೆಲವೇ ನಿಮಿಷಗಳಲ್ಲಿ ಎಸ್‌ಐಟಿ ತಂಡ ರೇವಣ್ಣ ಅವರನ್ನು ಅವರ ತಂದೆ ದೇವೇಗೌಡರ ಮನೆಯಿಂದ ಬಂಧಿಸಿತು.
ರೇವಣ್ಣ ಅವರನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪಹರಣ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಆರುಕ್ಕೆ ಏರಿಕೆಯಾಗಿದೆ.
ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್
ಲೈಂಗಿಕ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ನನ್ನು ಬಂಧಿಸುವಂತೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈವರೆಗೆ, ವಿಚಾರಣೆ ಹಾಜರಾಗುವಂತೆ ಪ್ರಜ್ವಲ್‌ಗೆ ಎಸ್‌ಐಟಿ ಮೂರು ನೋಟಿಸ್‌ಗಳನ್ನು ನೀಡಿದೆ. ಆದರೆ, ಆತ ಬೆಂಗಳೂರಿಗೆ ಬಂದಿಲ್ಲ. ಆತನ ಬಂಧನಕ್ಕಾಗಿ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಈ ನೋಟಿಸ್ “ಆರೋಪಿತ ವ್ಯಕ್ತಿ ಮತ್ತು ಆತನ ಅಪರಾಧಗಳ ಕುರಿತು ಜಗತ್ತಿನಾದ್ಯಂತ ಮಾಹಿತಿ ಹಂಚಿಕೊಳ್ಳಲು ಮತ್ತು ಎಚ್ಚರಿಕೆ ಹಾಗೂ ಮನವಿಗಳನ್ನು ಹಂಚಿಕೊಳ್ಳಲು” ಬಳಸಲಾಗುತ್ತದೆ.
ಚುನಾವಣಾ ಫಲಿತಾಂಶ ಪ್ರಕಟವಾಗುವ ಜೂನ್ 4ರ ಮೊದಲು ಪ್ರಜ್ವಲ್ ದೇಶಕ್ಕೆ ಮರಳುವ ಸಾಧ್ಯತೆಯಿಲ್ಲ ಎಂಬ ಊಹಾಪೋಹಗಳು ಹರಡಿವೆ.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ಪ್ರಕರಣ | ಮಹಿಳಾ ದೌರ್ಜನ್ಯದ ಮೂಲ ಅಪರಾಧವನ್ನೇ ಬಿಜೆಪಿ ಮರೆಮಾಚುತ್ತಿದೆ: ಕಾಂಗ್ರೆಸ್ ವಾಗ್ದಾಳಿ
“ಪ್ರಜ್ವಲ್ ಪ್ರಕರಣವು ರಾಷ್ಟ್ರೀಯ ವಿಷಯವಾಗಿದೆ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಬಿಜೆಪಿಯನ್ನು ಮುಜುಗರಕ್ಕೀಡು ಮಾಡಲು ಪ್ರಯತ್ನಿಸುತ್ತಿವೆ. ಪ್ರಜ್ವಲ್ ಈಗ ಹಿಂತಿರುಗಿದರೆ, ಕನಿಷ್ಠ ಒಂದು ವಾರ ರಾಷ್ಟ್ರೀಯವಾಗಿ ಈ ಸುದ್ದಿ ಮೇಲೇಳುತ್ತದೆ. ಅದು ಬಿಜೆಪಿಗೆ ಹೊಡೆತ ನೀಡಬಹುದು. ಹೀಗಾಗಿ, ಚುನಾವಣಾ ಫಲಿತಾಂಶ ಬರುವವರೆಗೆ ಪ್ರಜ್ವಲ್ ದೇಶಕ್ಕೆ ಮರಳುವುದು ಅಸಂಭವವಾಗಿದೆ” ಎಂದು ರಾಜಕೀಯ ನಾಯಕರೊಬ್ಬರು ಹೇಳುತ್ತಾರೆ.
“ಕೆಲ ದಿನಗಳ ಹಿಂದೆ ಈ ವಿಚಾರ ತಿಳಿದಾಗ ಆಘಾತಗೊಂಡಿದ್ದೆ. ನಾನು ಒಂದು ಕಾಲದಲ್ಲಿ ದೇವೇಗೌಡರ ಕುರುಡು ಅನುಯಾಯಿಯಾಗಿದ್ದೆ. ಅವರು ಸಮಸ್ಯೆಯ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸುತ್ತೇನೆ” ಎಂದು ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ. ಜವರೇಗೌಡ ತಿಳಿಸಿದ್ದಾರೆ. ಲೈಂಗಿಕ ಹಗರಣ ಹೊರಬಂದಾಗಿನಿಂದ ಎಚ್.ಡಿ.ದೇವೆಗೌಡರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಮೌನವಾಗಿದ್ದಾರೆ.
ರಾಜಕೀಯ ಕೆಸರೆರಚಾಟ
ವೀಡಿಯೋ ಕ್ಲಿಪ್‌ಗಳು ಸಾರ್ವಜನಿಕ ವಲಯಕ್ಕೆ ಹೇಗೆ ಬಂದವು ಎಂಬ ವಿಷಯದ ಕುರಿತು ಜೆಡಿಎಸ್-ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕೆಸರೆರಚಾಟ ನಿರಂತರವಾಗಿದೆ. ಈ ಚರ್ಚೆಯು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಮರೆಮಾಚುವ ಸಾಧ್ಯತೆಗಳನ್ನು ಸೂಚಿಸುತ್ತಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಪ್ರಜ್ವಲ್ ಚಿಕ್ಕಪ್ಪ ಎಚ್.ಡಿ ಕುಮಾರ್‌ಸ್ವಾಮಿ ಆರಂಭದಲ್ಲಿ ತಮ್ಮನ್ನು ಮತ್ತು ತಮ್ಮ ತಂದೆ ದೇವೇಗೌಡರನ್ನು ಈ ವಿವಾದದಿಂದ ದೂರವಿಡಲು ಯತ್ನಿಸಿದರು. ಆದರೆ, ಈಗ, “ಡಿ.ಕೆ ಶಿವಕುಮಾರ್ ಅವರು ಹಾಸನದಲ್ಲಿ ಚುನಾವಣೆಯ ಮೇಲೆ ಸ್ಪಷ್ಟವಾಗಿ ಪ್ರಭಾವ ಬೀರಲು 25,000 ಪೆನ್‌ಡ್ರೈವ್‌ಗಳನ್ನು ಹಂಚಿದ್ದಾರೆ” ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಒಕ್ಕಲಿಗರ ನಾಯಕನಾಗಲು ಇದು ದಾರಿಯಲ್ಲ ಎಂದು ಅವರು ಶಿವಕುಮಾರ್‌ಗೆ ಹೇಳಿದ್ದಾರೆ. ಎಸ್‌ಐಟಿ ಪಕ್ಷಪಾತಿಯಾಗಿದೆ ಎಂದು ಆರೋಪಿಸಿರುವ ಅವರು, ಕೇಂದ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಜತೆಗೆ ಒತ್ತಾಯಿಸಿದ್ದಾರೆ. ಸಂತ್ರಸ್ತೆಯರ ರಕ್ಷಣೆ ಮತ್ತು ನ್ಯಾಯಕ್ಕಾಗಿ ಹೋರಾಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜೆಡಿಎಸ್ ಆರೋಪಕ್ಕೆ ಪ್ರತಿಯಾಗಿ, ಕಾಂಗ್ರೆಸ್‌ನ ಹಲವು ಒಕ್ಕಲಿಗ ಸಚಿವರು ಮತ್ತು ಮುಖಂಡರು, “ಕುಮಾರಸ್ವಾಮಿ ಮತ್ತು ಬಿಜೆಪಿಯು ಲೈಂಗಿಕ ದೌರ್ಜನ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ. ಸಂತ್ರಸ್ತೆಯರಿಗೆ ನ್ಯಾಯ ಒದಗಿಸುವುದನ್ನು ತಪ್ಪಿಸುವ ಮೂಲಕ ಪೆನ್ ಡ್ರೈವ್‌ಗಳ ವಿತರಣೆಯಲ್ಲಿ ಭಾಗಿಯಾಗಿರುವ ನಾಯಕರ ಪಾತ್ರದ ಬಗ್ಗೆ ಗಮನ ಹರಿಸಲಾಗಿದೆ” ಎಂದಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ, “ಒಕ್ಕಲಿಗ ಮುಖಂಡ ಕುಮಾರಸ್ವಾಮಿ ಅವರು ಘೋರ ಅಪರಾಧಗಳನ್ನು ಮುಚ್ಚಿಡಲು ಸಮುದಾಯವನ್ನು ಗುರಾಣಿಯಾಗಿ ಬಳಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸಮುದಾಯವನ್ನು ವಿಶ್ವದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಎಳೆದಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಎಸ್‌ಐಟಿ ನಿಷ್ಪಕ್ಷಪಾತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅಲ್ಲದೇ, ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ಅನ್ನು ತಕ್ಷಣವೇ ರದ್ದುಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಜ್ವಲ್ ಪಾಸ್‌ಪೋರ್ಟ್ ಇನ್ನೂ ರದ್ದುಗೊಂಡಿಲ್ಲ. ಕಾನೂನು ಸುವ್ಯವಸ್ಥೆ ರಾಜ್ಯದ ಸಮಸ್ಯೆ ಎಂದು ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಪ್ರಕರಣ ರಾಜಕೀಯ ತಿರುವು ಪಡೆದಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜಕೀಯ ಪಕ್ಷಗಳು ಮಹಿಳೆಯರನ್ನು ತಮ್ಮ ಆಟದ ದಾಳಗಳಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ಹಾಸನ ಮೂಲದ ಕಾರ್ಯಕರ್ತೆ, ಕವಿ ರೂಪಾ ಹಾಸನ್ ಹೇಳಿದ್ದಾರೆ.
ಸದ್ಯಕ್ಕೆ, ಎಲ್ಲರೂ ಲೋಕಸಭೆ ಚುನಾವಣೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ವಿಶೇಷವಾಗಿ ಹಾಸನಕ್ಕೆ ಮತ್ತೆ ಪ್ರಜ್ವಲ್ ಮರಳುತ್ತಾರೆ. ಆದರೆ, ಈ ಲೈಂಗಿಕ ದೌರ್ಜನ್ಯ ಪ್ರಕರಣವು ಮುಂಬರುವ ವರ್ಷಗಳಲ್ಲಿ ಕರ್ನಾಟಕದ ರಾಜಕೀಯದ ಮೇಲೆ ನೆರಳು ಬೀಳುವ ಸಾಧ್ಯತೆಯಿದೆ. ಬಲಿಪಶುಗಳು ಭಯಭೀತರಾಗಿದ್ದಾರೆ, ಕಳಂಕಿತರಾಗಿದ್ದಾರೆ ಮತ್ತು ಪಿತೃಪ್ರಭುತ್ವದ ವಿರುದ್ಧ ಹೋರಾಡುತ್ತಿದ್ದಾರೆ.
ಮೂಲ : ದಿ ಹಿಂದು




