ಸಂಸದ ಪ್ರತಾಪ್ ಸಿಂಹ ಅವರು ಸಂಸತ್ ದಾಳಿ ಘಟನೆಯ ಬಳಿಕ ಎಲ್ಲಿದ್ದಾರೆ? ಅವರು ಮಾಡಿರುವ ಕೆಲಸದಿಂದ ನಮ್ಮ ರಾಜ್ಯ ತಲೆತಗ್ಗಿಸುವಂತಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯೇ ಲೋಕಸಭೆ ಅಧಿವೇಶನ ದಾಳಿಗೆ ಕಾರಣ. ಈ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದರು.
“ಎಲ್ಲ ವಿಚಾರಕ್ಕೂ ಮಾಧ್ಯಮಗಳ ಮುಂದೆ ಬರುವ ಪ್ರತಾಪ್ ಸಿಂಹ ಈಗ ಕಾಣಿಸುತ್ತಿಲ್ಲ. ಈ ಘಟನೆ ಬಗ್ಗೆ ಕಾಂಗ್ರೆಸ್‌ನವರೂ ಮಾತನಾಡಬಾರದಂತೆ? ಘಟನೆ ಬಗ್ಗೆ ಇಲ್ಲಿಯವರೆಗೆ ಅಮಿತ್ ಶಾ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ ಯಾಕೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ
ರಾಹುಲ್ ಗಾಂಧಿ ಹೇಳಿಕೆಯಲ್ಲಿ ತಪ್ಪಿಲ್ಲ
“ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟಿದೆ ಗೊತ್ತಿಲ್ವಾ? ಇಂತಹ ಗಂಭೀರ ವಿಚಾರಕ್ಕೆ ರಾಜ್ಯಕೀಯ ಲೇಪ ಮಾಡುವುದು ಸರಿಯಲ್ಲ” ಎಂದು ಹೇಳಿದರು.
ಸಿಟಿ ರವಿ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಮೊದಲು ತಮ್ಮ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಪಡೆದು, ಬಳಿಕ ಮಾತನಾಡಲಿ” ಎಂದು ಲೇವಡಿ ಮಾಡಿದರು.





