ಮಣಿಪುರದಲ್ಲಿ 2023ರಿಂದ ಆರಂಭವಾಗಿರುವ ಜನಾಂಗೀಯ ಹಿಂಸಾಚಾರ, ಘರ್ಷಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಶಮನವಾಗಿಲ್ಲ. ಹೊಸ ಸರ್ಕಾರ ರಚನೆಯಾದ ಬಳಿಕ ಸರ್ಕಾರ ರಚನೆ ವಿರುದ್ಧವಾಗಿ ಕುಕಿ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಉಖ್ರುಲ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಎರಡು ಬುಡಕಟ್ಟು ಗುಂಪುಗಳು ನಡುವೆ ಹಿಂಸಾಚಾರ ನಡೆದಿದ್ದು, ಜಿಲ್ಲಾಡಳಿತವು ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.
ಉಖ್ರುಲ್‌ನಲ್ಲಿ ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿದೆ. ಈ ಘಟನೆ ನಡೆಯುತ್ತಿದ್ದಂತೆ ಜಿಲ್ಲೆಯ “ಲಿಟನ್ ಪ್ರದೇಶದಲ್ಲಿ ಶಾಂತಿ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ಭಂಗ ಬರಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ನಿಷೇಧಾಜ್ಞೆಗಳನ್ನು ಹೊರಡಿಸಲಾಗಿದೆ” ಎಂದು ಉಖ್ರುಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ದಾಸ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ | ಎರಡು ಗ್ರಾಮಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ನಿಷೇಧಾಜ್ಞೆ ಜಾರಿ
ಯಾವುದೇ ವ್ಯಕ್ತಿ ತಮ್ಮ ಮನೆಯಿಂದ ಹೊರಗೆ ಓಡಾಡುವುದು, ಶಾಂತಿಗೆ ಭಂಗ ತರುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಹಾಗೆಯೇ ಆಡಳಿತವು ಸೈನ್ಯ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸುವಂತೆ ಜಿಲ್ಲಾಡಳಿತ ಕೋರಿದೆ.
ತಂಗ್ಖುಲ್ ಸಮುದಾಯದ ಸದಸ್ಯರ ಮೇಲೆ ಕುಕಿ-ಝೋ ಬುಡಕಟ್ಟು ಜನಾಂಗದವರ ಗುಂಪೊಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ಬಳಿಕ ಶನಿವಾರ ರಾತ್ರಿಯಿಂದ ಲಿಟನ್‌ನಲ್ಲಿ ಕುಕಿ-ಝೋ ಮತ್ತು ನಾಗಾ ಸಮುದಾಯದ ನಡುವೆ ಉದ್ವಿಗ್ನತೆ ಉಂಟಾಗಿದೆ.
ಈ ಪ್ರದೇಶದ ಹಲವಾರು ನಾಗಾ ಬುಡಕಟ್ಟು ಸಮುದಾಯದ ನಿವಾಸಿಗಳು ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಉಖ್ರುಲ್ ನಾಗಾ ಸಮುದಾಯ ಹೆಚ್ಚಾಗಿ ಇರುವ ಜಿಲ್ಲೆಯಾಗಿದ್ದು, ಪ್ರಸ್ತುತ ಪರಿಸ್ಥಿತಿ ಉದ್ವಿಗ್ನವಾಗಿದೆ.
2023ರ ಮೇ ತಿಂಗಳಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಗುಂಪುಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು, 260ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಎನ್ ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಳೆದ ವರ್ಷ ಫೆಬ್ರವರಿ 13ರಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವಿತ್ತು.
ಇತ್ತೀಚೆಗೆ ಖೇಮ್‌ಚಂದ್ ಸಿಂಗ್ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಿದೆ. ಆದರೆ ಸರ್ಕಾರ ರಚನೆಗೆ ಕುಕಿ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಮ್ಮ ಸಮುದಾಯದ ಶಾಸಕರು ಸರ್ಕಾರ ರಚನೆಯಲ್ಲಿ ಭಾಗಿಯಾಗಬಾರದು ಎಂದು ಆಗ್ರಹಿಸಿದೆ. ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಬಿಜೆಪಿಯ ಕುಕಿ-ಝೋ ಶಾಸಕ ನೆಮ್ಚಾ ಕಿಪ್ಗೆನ್ ಕೂಡಾ ಒಬ್ಬರಾಗಿದ್ದಾರೆ. ಕುಕಿ ಸಮುದಾಯ ಮತ್ತಿಬ್ಬರೂ ಸರ್ಕಾರದ ಜತೆ ಕೈಜೋಡಿಸಿದ್ದಾರೆ. ಇದು ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಘರ್ಷಣೆ ಉಂಟಾಗಿದೆ. ಅಲ್ಲಲ್ಲಿ ಹಿಂಸಾಚಾರಗಳು ಮತ್ತೆ ಆರಂಭವಾಗುತ್ತಿದೆ.





