ಪುತ್ತೂರು ನೂಕುನುಗ್ಗಲು: ದೌಲತ್ತು ತೋರಿಸಲು ಜನರನ್ನು ಕಾಯಿಸುವುದೇ?

Date:

ಕರ್ನಾಟಕ ಮಾತ್ರವಲ್ಲ ದೇಶದ ಹಲವು ಭಾಗಗಳಲ್ಲಿ ಇಂತಹ ಉಡುಗೊರೆ ನೀಡುವ ಅಥವಾ ಯಾವುದೋ ಓರ್ವ ರಾಜಕಾರಣಿ, ನಟ-ನಟಿ ಭಾಗಿಯಾಗುವ ಕಾರ್ಯಕ್ರಮದಲ್ಲಿ ಸಮಯ ಪ್ರಜ್ಞೆ ಎಂಬುದು ಅಪ್ರಸ್ತುತ ವಿಚಾರದಂತೆ. ಪುತ್ತೂರು ಘಟನೆಯ ವೇಳೆ ನಮ್ಮ ಮುಂದೆ ಬರುವುದು ಇತ್ತೀಚಿನ ಕರೂರು ಕಾಲ್ತುಳಿತ ಘಟನೆ. ತಮಿಳುನಾಡಿನಲ್ಲಿ ನಡೆದ ದುರಂತಕ್ಕೂ ಕಾರಣವಾಗಿದ್ದು ನಾಯಕರು ಮರೆತಿರುವ ಸಮಯಪ್ರಜ್ಞೆ.

ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೊಂಬೆಟ್ಟು ಮೈದಾನದಲ್ಲಿ ಅ.20ರಂದು ‘ಅಶೋಕ ಜನಮನ – 2025’ ಕಾರ್ಯಕ್ರಮ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಸುಮಾರು 13 ಮಂದಿ ಅಸ್ವಸ್ಥರಾಗಿದ್ದಾರೆ. ಈ ಹಿಂದೆ ನಡೆದ ಗಂಭೀರ ಕಾಲ್ತುಳಿತ ಪ್ರಕರಣಗಳನ್ನೆಲ್ಲ ಮರೆತು ನಡೆದ ಈ ಬೃಹತ್ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ಆಯೋಜನೆ ಮಾಡಲಾಗಿಲ್ಲ ಎಂಬ ಆರೋಪಗಳಿವೆ. ಇನ್ನೊಂದೆಡೆ ರಾಜಕೀಯ ನಾಯಕರು ತಮ್ಮ ದೌಲತ್ತು ಮೆರೆಯಲು ಇಂತಹ ಕಾರ್ಯಕ್ರಮ ಆಯೋಜಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗಳಿವೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕಳೆದ 13 ವರ್ಷಗಳಿಂದ ದೀಪಾವಳಿ ವೇಳೆ ಕಾರ್ಯಕ್ರಮ ನಡೆಸಿ ಜನರಿಗೆ ಉಡುಗೊರೆಗಳನ್ನು ಹಂಚುತ್ತಿದ್ದಾರೆ. ಈ ವರ್ಷ ಸುಮಾರು ‘ಒಂದು ಲಕ್ಷ’ ಜನರಿಗೆ ಉಡುಗೊರೆ ಹಂಚುವ ನಿರ್ಧಾರ ಮಾಡಲಾಗಿತ್ತು. ಉಡುಗೊರೆಯ ನಿರೀಕ್ಷೆಯಲ್ಲಿ ಬಡ ವರ್ಗದ ಜನರು ಬೆಳಗ್ಗೆಯಿಂದಲೇ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಧಾವಿಸಲು ಆರಂಭಿಸಿದ್ದರು. ಆದರೆ ಮಧ್ಯಾಹ್ನ 12ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ನಡೆದಿದ್ದು ಮಧ್ಯಾಹ್ನ ಒಂದು ಗಂಟೆಗೆ. ಕಾರಣ ಮುಖ್ಯಮಂತ್ರಿ ಒಂದು ಗಂಟೆ ತಡವಾಗಿ ಬಂದಿದ್ದು.

ಇದನ್ನು ಓದಿದ್ದೀರಾ? ಪುತ್ತೂರು | ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು: 13 ಮಂದಿ ಅಸ್ವಸ್ಥ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕ ಮಾತ್ರವಲ್ಲ ದೇಶದ ಹಲವು ಭಾಗಗಳಲ್ಲಿ ಇಂತಹ ಉಡುಗೊರೆ ನೀಡುವ ಅಥವಾ ಯಾವುದೋ ಓರ್ವ ರಾಜಕಾರಣಿ, ನಟ-ನಟಿ ಭಾಗಿಯಾಗುವ ಕಾರ್ಯಕ್ರಮದಲ್ಲಿ ಸಮಯ ಪ್ರಜ್ಞೆ ಎಂಬುದು ಅಪ್ರಸ್ತುತ ವಿಚಾರದಂತೆ. ನಾಯಕರು ಬಂದು ಭಾಷಣ ಮುಗಿಸುವವರೆಗೂ ಕಾರ್ಯಕ್ರಮಕ್ಕೆ ಹಾಜರಾಗಿರುವ ಸಾವಿರಾರು ಜನರು ‘ತಾಳ್ಮೆಯಿಂದ’ ಅಲ್ಲೇ ಕೂತಿರಬೇಕು ಎಂಬುದು ಈ ನಾಯಕರುಗಳ ನಿರೀಕ್ಷೆ. ಇಂತಹ ಕಾರ್ಯಕ್ರಮದಲ್ಲಿ ಜನರಿಗೆ ಗೌರವವೂ ಇರದು. ಪುತ್ತೂರು ಕಾರ್ಯಕ್ರಮದಲ್ಲಿ ನಡೆದಿದ್ದು ಕೊಂಚ ಹಾಗೆಯೇ ಎನ್ನಬಹುದು.

ಪ್ರತ್ಯಕ್ಷದರ್ಶಿಗಳು ಹೇಳುವಂತೆ ರೈ ಎಸ್ಟೇಟ್ ಆಂಡ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‌ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ತಾಸು ತಡವಾಗಿ ಬಂದಿದ್ದಾರೆ. ಇದಾದ ಬಳಿಕ 15 ನಿಮಿಷದಲ್ಲೇ ಎಲ್ಲಾ ಸಭಾ ಕಾರ್ಯಕ್ರಮ ಮುಗಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕಾರ್ಯಕ್ರಮ ಮುಗಿದಿದ್ದು ಮಧ್ಯಾಹ್ನ ಮೂರು ಗಂಟೆಗೆ. ಈಗಾಗಲೇ ಹಿಂದಿನ ರಾತ್ರಿ ಸುರಿದ ಮಳೆಯಿಂದಾಗಿ ಮೈದಾನ ಕೆಸರುಮಯವಾಗಿತ್ತು. ಹಗಲಲ್ಲಿ ಉರಿ ಬಿಸಿಲಿತ್ತು. ಕೆಸರು, ಬಿಸಿಲಿನ ನಡುವೆ ಹೇಗೋ ಕೂತ ಜನರಿಗೆ ನೀರು ಕುಡಿಯುವ ಅವಕಾಶವೂ ಇರಲಿಲ್ಲ ಎಂಬ ಆರೋಪವಿದೆ. “ನೀರಿನ ಬಾಟಲಿಯನ್ನು ಸಿದ್ಧರಾಮಯ್ಯ ಅವರ ಮೇಲೆ ಯಾರಾದರೂ ಎಸೆಯಬಹುದು” ಎಂಬ ಕಾರಣಕ್ಕೆ ಜನರಿಗೆ ನೀರಿನ ಬಾಟಲಿ ಇಟ್ಟುಕೊಳ್ಳಲು ಅವಕಾಶ ನೀಡಿಲ್ಲ, ಪ್ರತ್ಯೇಕ ನೀರಿನ ವ್ಯವಸ್ಥೆಯೂ ಮಾಡಿರಲಿಲ್ಲ. ಮೂರು-ನಾಲ್ಕು ತಾಸು ನೀರಿಲ್ಲದೆ ಬಿಸಿಲಿನ ಝಳಕ್ಕೆ ಮೈಯೊಡ್ಡಿದ ಜನರು ಕಾರ್ಯಕ್ರಮ ಮುಗಿಯುವಷ್ಟರಲ್ಲಿ ನಿರ್ಜಲೀಕರಣಕ್ಕೆ ಒಳಗಾದರು. ಉಡುಗೊರೆ ಪಡೆಯುವ ಭರದಲ್ಲಿ ನೂಕುನುಗ್ಗಲು ಉಂಟಾಯಿತು. ಒಟ್ಟು 13 ಮಂದಿ ಅಸ್ವಸ್ಥರಾದರು.

ಕರೂರು ಕಾಲ್ತುಳಿತ ಮತ್ತು ನಾಯಕರ ಸಮಯಪ್ರಜ್ಞೆ!

ಪುತ್ತೂರು ಘಟನೆಯ ವೇಳೆ ನಮ್ಮ ಮುಂದೆ ಬರುವುದು ಇತ್ತೀಚಿನ ಕರೂರು ಕಾಲ್ತುಳಿತ ಘಟನೆ. ತಮಿಳುನಾಡಿನಲ್ಲಿ ನಡೆದ ದುರಂತಕ್ಕೂ ಕಾರಣವಾಗಿದ್ದು ನಾಯಕರು ಮರೆತಿರುವ ಸಮಯಪ್ರಜ್ಞೆ. ಸೆಪ್ಟೆಂಬರ್ 27ರಂದು ನಟ, ರಾಜಕಾರಣಿ ವಿಜಯ್ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 41 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ನಿಗದಿಪಡಿಸಲಾಗಿದ್ದ ಸಮಯಕ್ಕೂ ಬರೋಬ್ಬರಿ ಏಳು ಗಂಟೆಗಳ ಕಾಲ ತಡವಾಗಿ ವಿಜಯ್ ಹಾಜರಾಗಿದ್ದರು. ಮಧ್ಯಾಹ್ನ ನಡೆಯಬೇಕಾಗಿದ್ದ ಕಾರ್ಯಕ್ರಮ ಸಂಜೆ 7 ಗಂಟೆಯಾದರೂ ಆರಂಭವಾಗಿರಲಿಲ್ಲ. ಅಷ್ಟರಲ್ಲೇ ಜನಸಂದಣಿ ಹೆಚ್ಚಾಗಿತ್ತು. ಹತ್ತು ಸಾವಿರ ಮಂದಿ ಸೇರಲು ಅನುಮತಿ ನೀಡಲಾಗಿದ್ದರೂ 40ರಿಂದ 50 ಸಾವಿರ ಜನ ಸೇರಿದ್ದರು.

ಆರ್‌ಸಿಬಿ ದುರಂತ ಮತ್ತು ಎಡವಟ್ಟು

ಸಾವಿರಾರು, ಲಕ್ಷಾಂತರ ಜನರನ್ನು ಸೇರಿಸುವಾಗ ಅಲ್ಲಿ ಉಂಟಾಗಬಹುದಾದ ದುರಂತಗಳ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು ಎಂಬ ಪಾಠವನ್ನು ರಾಜ್ಯ ಸರ್ಕಾರಕ್ಕೆ ಆರ್‌ಸಿಬಿ ದುರಂತವೇ ನೀಡಿತ್ತು. ಹಾಗಿದ್ದರೂ ಸಾವಿರಾರು ಜನ ಸೇರಿ ಕಾರ್ಯಕ್ರಮ ನಡೆಸುವುದು ಸಾಮಾನ್ಯ. ಅದಕ್ಕೆ ವಿರೋಧವಿಲ್ಲ. ಸರಿಯಾದ ನಿರ್ವಹಣೆ ಮಾತ್ರ ಅತ್ಯಗತ್ಯ. ಜೂನ್ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ನಡೆದು 11 ಮಂದಿ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದರು. ಈ ಕಾರ್ಯಕ್ರಮವನ್ನು ತರಾತುರಿಯಲ್ಲಿ ಆಯೋಜಿಸಲಾಗಿತ್ತು. ಸರಿಯಾದ ವ್ಯವಸ್ಥೆ ಮಾಡದೆಯೇ ಸಂಭ್ರಮಾಚರಣೆ ಬಗ್ಗೆ ಆರ್‌ಸಿಬಿ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಗೊಂದಲಮಯ ಪೋಸ್ಟ್ ಕೂಡಾ ಈ ದುರಂತಕ್ಕೆ ಕಾರಣ. ಅಷ್ಟು ಮಾತ್ರವಲ್ಲದೆ 35 ಸಾವಿರ ಜನ ಸೇರಬಹುದಾದ ಮೈದಾನದಲ್ಲಿ ಎರಡು-ಮೂರು ಲಕ್ಷ ಫ್ಯಾನ್ಸ್‌ ಸೇರಿದ್ದರು.

ಇದನ್ನು ಓದಿದ್ದೀರಾ? ಬೆಂಗಳೂರು ಕಾಲ್ತುಳಿತ | ಹೈಕೋರ್ಟ್‌ಗೆ ವರದಿ ಸಲ್ಲಿಕೆ: ದುರ್ಘಟನೆಗೆ ಕೊಹ್ಲಿ ಸೇರಿ RCBಯೇ ಹೊಣೆ

ಬಿಸಿಲಲ್ಲಿ ಒಂದು ಗಂಟೆ ಕಾದು ಕೊನೆಯಿಸಿರೆಳೆದರು!

2023ರ ಏಪ್ರಿಲ್ 17ರಂದು ಮಹಾರಾಷ್ಟ್ರದಲ್ಲಿಯೂ ಅಂದಿನ ಬಿಜೆಪಿ-ಶಿವಸೇನೆ ಸರ್ಕಾರ ಜನರನ್ನು ಹಲವು ಗಂಟೆಗಳ ಕಾಲ ಬಿಸಿಲಲ್ಲಿ ಕಾಯಿಸಿತ್ತು. ಮುಂಬೈನಲ್ಲಿ ಸರ್ಕಾರ ಪ್ರಾಯೋಜಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದರು. ಆದರೆ ಕಾರ್ಯಕ್ರಮ ವಿಳಂಬವಾಗಿ ಜನರು ಹಲವು ಗಂಟೆಗಳ ಕಾಲ ಬಿಸಿಲಲ್ಲಿ ಕಾಯಬೇಕಾಯಿತು. ಧಗೆಯ ಅಡ್ಡಪರಿಣಾಮದಿಂದಾಗಿ 11 ಮಂದಿ ಮೃತಪಟ್ಟಿದ್ದರು. ಐವತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು, 600 ಮಂದಿ ಅಸ್ವಸ್ಥರಾಗದ್ದರು. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, “ದುರದೃಷ್ಟವಶಾತ್ ಚಿಕಿತ್ಸೆ ವೇಳೆ 11 ಮಂದಿ ಸಾವನ್ನಪ್ಪಿದ್ದಾರೆ” ಎಂದು ತಿಳಿಸಿದ್ದರು. ಮೃತರ ಕಟುಂಬಕ್ಕೆ ಪರಿಹಾರದ ಭರವಸೆಯನ್ನೂ ನೀಡಲಾಗಿತ್ತು. ಬಿಸಿಲಲ್ಲಿ 11 ಮಂದಿ ಮೃತಪಟ್ಟಿದ್ದರೂ “ಬಿಸಿಲಲ್ಲೂ ಗಂಟೆಗಟ್ಟಲೆ ಕಾದ” ಜನರನ್ನು ಶ್ಲಾಘಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕೆಗೆ ಗುರಿಯಾಗಿದ್ದರು.

ಹಾಸನಾಂಬೆ ಕಾಲ್ತುಳಿತ ಪ್ರಕರಣ

2023ರ ನವೆಂಬರ್‌ನಲ್ಲಿ ಹಾಸನದ ಹಾಸನಾಂಬೆ ದೇಗುಲದಲ್ಲಿಯೂ ಇದೇ ರೀತಿ ಕಾಲ್ತುಳಿತ ಉಂಟಾಗಿತ್ತು. ಧರ್ಮ ದರ್ಶನ ಸರತಿ ಸಾಲಿನ ಬಳಿ ಎಲ್‌ಇಡಿ ಸ್ಕ್ರೀನ್‌ಗೆ ಅವಳಡಿಸಲಾಗಿದ್ದ ತಂತಿಯಿಂದ ಒಂದಿಬ್ಬರಿಗೆ ವಿದ್ಯುತ್ ತಗಲಿ ಆತಂಕದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ ಸುಮಾರು 17 ಮಂದಿ ಅಸ್ವಸ್ಥರಾಗಿದ್ದರು. ಈ ವರ್ಷವೂ ಜಾತ್ರಾ ಮಹೋತ್ಸವಕ್ಕೆ ಭಾರಿ ಜನಸಂದಣಿ ಸೇರಿದೆ. ಅಕ್ಟೋಬರ್ 20ರವರೆಗೆ ಸುಮಾರು 23 ಲಕ್ಷ ಜನರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕಾಲ್ತುಳಿತದ ಆತಂಕವಿದ್ದ ಕಾರಣ ಈ ಬಾರಿ ಸೂಕ್ತ ಕ್ರಮಕೈಗೊಳ್ಳಲಾಗಿದೆ.

2025ರಲ್ಲಿ ನಡೆದ ಕಾಲ್ತುಳಿತ ಪ್ರಕರಣಗಳು

ದೇಶದಲ್ಲಿ 2025ರ ಈ ಹತ್ತು ತಿಂಗಳಲ್ಲಿ ಒಟ್ಟು ಆರು ಕಾಲ್ತುಳಿತ ದುರಂತಗಳು ಸಂಭವಿಸಿವೆ. ಜನವರಿ 29ರಂದು ಕುಂಭಮೇಳದಲ್ಲಿ ನಡೆದ ದುರಂತದಲ್ಲಿ, ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಅಧಿಕ ಜನಸಂದಣಿ ಕಾರಣ. ಫೆಬ್ರವರಿ 15ರಂದು ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ 18 ಮಂದಿ ಮೃತಪಟ್ಟಿದ್ದಾರೆ. ಮೇ 3ರಂದು ಗೋವಾದ ಶಿರಗಾಂವ್‌ನ ಶ್ರೀ ಲೈರಾಯ್ ದೇವಿ ದೇವಸ್ಥಾನದಲ್ಲಿ ಮೆರವಣಿಗೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಏಳು ಮಂದಿ ಮೃತಪಟ್ಟು, ಸುಮಾರು 80 ಮಂದಿ ಗಾಯಗೊಂಡಿದ್ದಾರೆ.

ಇನ್ನು ಜೂನ್‌ 4ರಂದು ಆರ್‌ಸಿಬಿ ದುರಂತದಲ್ಲಿ 11 ಮಂದಿ ಮಡಿದರೆ, 33 ಮಂದಿ ಗಾಯಗೊಂಡಿದ್ದಾರೆ. ಜುಲೈ 27ರಂದು ಉತ್ತರಾಖಂಡದ ಹರಿದ್ವಾರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿ ಆರು ಭಕ್ತರು ಸಾವನ್ನಪ್ಪಿದ್ದಾರೆ. ಅದಾದ ಬಳಿಕ ಸೆಪ್ಟೆಂಬರ್‌ನಲ್ಲಿ ಕರೂರು ದುರಂತದಲ್ಲಿ 41 ಮಂದಿ ಮೃತಪಟ್ಟಿದ್ದಾರೆ.

ಇವೆಲ್ಲ ಘಟನೆಗಳಿಗೆ ನಿರೀಕ್ಷೆಗಿಂತ ಅಧಿಕ ಜನ ಸೇರುವುದು ಸಾಮಾನ್ಯ ಕಾರಣ ಎನಿಸಿದರೂ ಕೆಲವು ಘಟನೆಗಳಲ್ಲಿ ರಾಜಕಾರಣಿಗಳು, ಸೆಲೆಬ್ರೆಟಿಗಳಿಗಳು ತಡವಾಗಿ ಬರುವುದು, ಸರ್ಕಾರ ಜನರನ್ನು ಕಾಯಿಸುವುದೇ ದುರಂತಕ್ಕೆ ಎಡೆಮಾಡಿಕೊಟ್ಟಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಕರೂರು ದುರಂತ. ಪುತ್ತೂರಿನಲ್ಲಿ ಕರೂರಿನಂತಹ ಭೀಕರ ದುರಂತ ಸ್ವಲ್ಪದರಲ್ಲೇ ತಪ್ಪಿದೆ ಎಂದರೆ ತಪ್ಪಾಗದು.

ಸಣ್ಣ ಪುಟ್ಟ ಸಭೆಯಿಂದ ಹಿಡಿದು, ಅತಿ ದೊಡ್ಡ ಕಾರ್ಯಕ್ರಮದವರೆಗೂ ಜನರನ್ನು ಕಾಯಿಸುವುದು ನಮ್ಮ ನಾಯಕರುಗಳಿಗೆ ರೂಢಿಯಾಗಿಬಿಟ್ಟಿದೆ ಮತ್ತು ಕಾಯಿಸುವುದೇ ಘನತೆಯಾದಂತಿದೆ. ನಾಯಕರುಗಳಿಗೆ ಜನರು ಗೌರವ ನೀಡುವಂತೆ ನಮ್ಮ ನಾಯಕರುಗಳು ಜನರ ಸಮಯಕ್ಕೆ, ತಾಳ್ಮೆಗೆ ಗೌರವ ನೀಡಬೇಕು. ಸಮಯ ಪ್ರಜ್ಞೆ ಎಂಬ ‘ಜವಾಬ್ದಾರಿ’ ಪ್ರತಿ ನಾಯಕರಲ್ಲೂ ಇರಬೇಕು. ಅಷ್ಟಕ್ಕೂ ನಮ್ಮ ದೌಲತ್ತನ್ನು ತೋರಿಸಲು ಜನರನ್ನು ಅಸ್ತ್ರವನ್ನಾಗಿಸುವುದು ಎಷ್ಟು ಸರಿ? ತಾವು ಕೊಡುವ ತಟ್ಟೆ, ಬಟ್ಟೆಗಾಗಿ ಜನರು ಗಂಟೆಗಟ್ಟಲೆ ಕಾಯಲಿ ಎಂಬಂತಹ ವರ್ತನೆ ಅತಿರೇಕವಲ್ಲವೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...