ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕಾರಣದಿಂದಾಗಿ ರಾಜ್ಯದಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇಲ್ಲಿ ಯಾರು ಸತ್ತರೂ ತಮಟೆ ಹೊಡೆದುಕೊಂಡು ಹೋಗುವಂತಿಲ್ಲ. ಮಸೀದಿ ಮುಂದೆ ಮಾತ್ರ ಮೌನವಾಗಿ ಸಾಗಬೇಕಾಗುತ್ತದೆ. ಸಿಎಂ ಸಿದ್ದರಾಮಯ್ಯನವರಿಂದಾಗಿ ನಮ್ಮನ್ನು ಏನೂ ಮಾಡಲ್ಲ ಎಂಬ ಭಾವನೆ ಮುಸ್ಲಿಮರಿಗೆ ಬಂದಿದೆ. ರಂಜಾನ್ ಸಮಯದಲ್ಲಿ ದೇವಾಲಯದ ಮುಂಭಾಗ ಮುಸ್ಲಿಮರು ಮೆರವಣಿಗೆ ಹೋಗಬಹುದು. ಆದರೆ ಹಿಂದೂಗಳು ಮಸೀದಿ ಮುಂಭಾಗ ಮೌನವಾಗಿ ಇರಬೇಕು. ಕಾಂಗ್ರೆಸ್ ಅಧಿಕಾರದಲ್ಲೇ ಇದ್ದರೆ, ರಾಜ್ಯದೊಳಗೆ ಹಲವು ಪಾಕಿಸ್ತಾನಗಳು ಉದ್ಭವವಾಗುತ್ತದೆ ಎಂದರು.
ಕಾಂಗ್ರೆಸ್‌ನ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಇಂತಹ ಗಲಭೆಗಳನ್ನು ಮಾಡಲಾಗುತ್ತಿದೆ. ಮುಸ್ಲಿಮರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತಿದೆ. ಮದ್ದೂರಿನಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಜನರು ಬಂದಿದ್ದಾರೆ. ಈಗ ಕಲ್ಲು ಹೊಡೆದಿರುವವರು ಮುಂದೆ ಬಾಂಬ್ ಹಾಕುತ್ತಾರೆ. ಕಾಂಗ್ರೆಸ್ ನಾಯಕರು ಇವರು ನಮ್ಮ ಬ್ರದರ್‌ಗಳು ಎಂದು ಹೇಳುತ್ತಾರೆ. ಇಲ್ಲಿನ ಕಾಂಗ್ರೆಸ್ ಶಾಸಕರು ಕೂಡ ಅದನ್ನೇ ಹೇಳುತ್ತಾರೆ. ಆ ಬೆಂಬಲದಿಂದಲೇ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗಿವೆ. ಈ ತಾಲಿಬಾನ್ ಸರ್ಕಾರ ಮುಸ್ಲಿಮರಿಗೆ ಬೆಂಬಲ ನೀಡುತ್ತಿದೆ ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಹೇಳಿದ್ದನ್ನೆಲ್ಲ ಮೋದಿ ಮಾಡುತ್ತಿದ್ದಾರಲ್ಲ?
ಎಲ್ಲರೂ ಒಂದೇ ಎಂದು ಮಾತಿನಲ್ಲಿ ಹೇಳುತ್ತಾರೆ. ಆದರೆ ಹಿಂದೂಗಳು ಯಾವುದೇ ಸಮಾರಂಭ ಮಾಡುವಂತಿಲ್ಲ. ಇದನ್ನೇ ಜಾತ್ಯತೀತತೆ ಎಂದು ಹೇಳುತ್ತಾರೆ. ಮೆರವಣಿಗೆ ಸಮಯದಲ್ಲೇ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು. ಅದನ್ನು ಸರ್ಕಾರ ಮಾಡಲೇ ಇಲ್ಲ. ಮಾಡಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿರುವುದರಿಂದ ಇಡೀ ದೇಶ ಇತ್ತ ಕಡೆ ನೋಡುತ್ತಿದೆ. ನಾವ್ಯಾರೂ ಬರಲಿಲ್ಲ ಎಂದರೆ ಮುಸ್ಲಿಮರು ಮನೆಗಳಿಗೆ ಹೋಗಿ ಹೊಡೆಯುತ್ತಾರೆ ಎಂದರು.
ಕಲ್ಲು ಹೊಡೆದಿರುವವರು ಇಲ್ಲಿಯವರು ಅಲ್ಲ ಎಂದಾದರೆ ಅವರೇನು ಪಾಕಿಸ್ತಾನದಿಂದ ಬಂದಿದ್ದಾರಾ? ಇದು ಪೂರ್ವ ನಿಯೋಜಿತ ಕೃತ್ಯ. ಸರ್ಕಾರದ ಗುಪ್ತಚರ ಇಲಾಖೆ ಇದನ್ನು ಪತ್ತೆ ಮಾಡಬೇಕಿತ್ತು. ಗಣಪತಿ ಮೂರ್ತಿ ವಿಸರ್ಜನೆ ಸಮಯದಲ್ಲಿ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದೂ ಎಂದು ಹೇಳಿಕೊಳ್ಳುತ್ತಾರೆಯೇ ಹೊರತು, ಅವರಿಗೆ ಯಾವ ಅಭಿಮಾನವೂ ಇಲ್ಲ. ಅವರು ನಿರಾಶರಾಗಿದ್ದಾರೆ ಎಂದರು.





