ಭಾರತದ ಮೇಲೆ ಶೇಕಡ 50ರಷ್ಟು ಸುಂಕವನ್ನು ವಿಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಮೇಲೆ ಕೇವಲ ಶೇಕಡ 19ರಷ್ಟು ಸುಂಕವನ್ನು ವಿಧಿಸಿದ್ದಾರೆ. ಹೀಗಿರುವಾಗ “ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸ್ನೇಹದ ಕಥೆಯೇನು, ಈ ಸ್ನೇಹಕ್ಕೆ ಅರ್ಥವೇನಿದೆ” ಎಂದು ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಟ್ರಂಪ್ ತಾವುಗಳು ಸ್ನೇಹಿತರು ಎಂದು ಹೇಳಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಭಾರತ ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ನೆಪವನ್ನು ಮುಂದಿಟ್ಟುಕೊಂಡು ಅಮೆರಿಕಾ ಭಾರತದ ಮೇಲೆ ಶೇಕಡ 50ರಷ್ಟು ಸುಂಕವನ್ನು ವಿಧಿಸಿದೆ. ಆದರೆ ಈ ಬಗ್ಗೆ ಈವರೆಗೂ ಪ್ರಧಾನಿ ಮೋದಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ನಿಲುವೂ ತೆಗೆದುಕೊಂಡಿಲ್ಲ. ಈ ವಿಚಾರದಲ್ಲಿ ವಿಪಕ್ಷಗಳೂ ಮೋದಿ ಅವರನ್ನು ಟೀಕಿಸುತ್ತಿದೆ.
ಇದನ್ನು ಓದಿದ್ದೀರಾ? ರಷ್ಯಾದಿಂದ ತೈಲ ಖರೀದಿ ಇಲ್ಲವೆಂದು ಮೋದಿ ಭರವಸೆ: ಟ್ರಂಪ್
ಈ ಎಲ್ಲಾ ಬೆಳವಣಿಗೆ ಬಗ್ಗೆ ಚಿಕಾಗೋ ಕೌನ್ಸಿಲ್ ಆನ್ ಗ್ಲೋಬಲ್ ಅಫೇರ್ಸ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಮಾಜಿ ಆರ್‌ಬಿಐ ಗವರ್ನರ್ ರಾಜನ್, “ಸುಂಕದ ವಿಚಾರದಲ್ಲಿ ಅಮೆರಿಕಾದ ನಿರ್ಧಾರ ಭಾರತಕ್ಕೆ ನಿರಾಶಾದಾಯಕ. ಕಳೆದ 20 ವರ್ಷಗಳಿಂದ ಭಾರತ ಅಮೆರಿಕಾಕಕ್ಕೆ ಹತ್ತಿರವಾಗುತ್ತಿದೆ ಎಂದು ನಾನು ಭಾವಿಸುತ್ತಿದ್ದೆವು. ಆದರೆ ಈಗ ನಡೆಯುತ್ತಿರುವುದೇ ಬೇರೆ” ಎಂದು ಹೇಳಿದ್ದಾರೆ.
“ನಾನಿಲ್ಲಿ ರಾಜಕಾರಣಿಗಳ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಈ ಸುಂಕದ ಸುಳಿಯಲ್ಲಿ ಸಿಲುಕಿದ ಜನರ ಬಗ್ಗೆ ಮಾತನಾಡುತ್ತಿದ್ದೇನೆ. ಗಾಯದ ಮೇಲೆ ಉಪ್ಪು ಸವರಲು ನಾನು ಬಯಸಲ್ಲ. ಆದರೆ ಒಂದೆಡೆ, ಪಾಕಿಸ್ತಾನದ ಮೇಲೆ ಶೇ. 19ರಷ್ಟು ಸುಂಕ, ಇನ್ನೊಂದೆಡೆ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಲಾಗಿದೆ. ಹೀಗಿರುವಾಗ ಮೋದಿ ಮತ್ತು ಟ್ರಂಪ್ ನಡುವಿನ ಬಹು ಪ್ರಚಾರದ ಸ್ನೇಹಕ್ಕೆ ಏನಾಯಿತು ಎಂಬ ಪ್ರಶ್ನೆ ಹುಟ್ಟುತ್ತದೆ. ಇದು ಮೋದಿ ಅವರಿಗಾದ ಭಾರಿ ಹಿನ್ನೆಡೆ. ಏಕೆಂದರೆ ಈಗ ವಿಪಕ್ಷಗಳು ಮೋದಿ ಅವರನ್ನು ಟೀಕಿಸುತ್ತಿದೆ. ‘ನಿಮ್ಮ ಸ್ನೇಹ ಏನಾಯ್ತು, ನಿಮ್ಮ ಸ್ನೇಹ ಬಟಾಬಯಲಾಯ್ತು’ ಎನ್ನುತ್ತಿದೆ” ಎಂದು ರಾಜನ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತ-ಅಮೆರಿಕ ಸುಂಕ ಜಟಾಪಟಿ, ರಿಫೈನರ್‌ಗಳಿಗೆ ಲಾಭ: ರಘುರಾಮ್ ರಾಜನ್
ಈ ಹಿಂದೆಯೇ ಮೋದಿ ಸರ್ಕಾರದ ಜನವಿರೋಧಿ ನೀತಿಗಳನ್ನು ಟೀಕಿಸುತ್ತಾ ಬಂದಿರುವ ರಾಜನ್, “ಅಮೆರಿಕಾವನ್ನು ನಂಬಲು ಸಾಧ್ಯವಿಲ್ಲ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಅಮೆರಿಕಾ ಪಾಕಿಸ್ತಾನದ ಕಡೆಗೆ ಒಲವು ತೋರಿತ್ತು. ಪಾಕಿಸ್ತಾನಕ್ಕೆ ಸಹಾಯ ಮಾಡಲು ಅಮೆರಿಕ ತನ್ನ ಏಳನೇ ನೌಕಾಪಡೆಯನ್ನೂ ಕಳುಹಿಸಿತ್ತು. ಈ ವೇಳೆ ಸೋವಿಯತ್ ಒಕ್ಕೂಟವು ಭಾರತಕ್ಕೆ ಸಹಾಯ ಮಾಡಿತ್ತು. ಇದರಿಂದಾಗಿ ಭಾರತ 25 ವರ್ಷಗಳ ಕಾಲ ಸೋವಿಯತ್ ಮೈತ್ರಿಯಲ್ಲಿರಬೇಕಾಯಿತು” ಎಂದು ವಿವರಿಸಿದರು.
“ಭಾರತಕ್ಕೆ ಅಧಿಕ ಆಯ್ಕೆಗಳಿಲ್ಲ. ಭಾರತ ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಆದರೆ ಚೀನಾದೊಂದಿಗೆ ಸಂಬಂಧ ಹದಗೆಟ್ಟಿದೆ. ಭಾರತ ಚೀನಾವನ್ನು ನಂಬಲ್ಲ. ಭಾರತೀಯ ಮಾರುಕಟ್ಟೆಗಳು ಚೀನಾದ ಸರಕುಗಳಿಂದ ತುಂಬಿವೆ, ಇದು ಸರ್ಕಾರಕ್ಕೆ ಕಳವಳ ಮೂಡಿಸಿದೆ. ಭಾರತವು ಚೀನಾದ ಹೂಡಿಕೆಯನ್ನು ಸ್ವಾಗತಿಸುತ್ತದೆ. ಆದರೆ ಚೀನಾವನ್ನು ಅವಲಂಬಿಸುವ ಬಗ್ಗೆ ಜಾಗರೂಕವಾಗಿದೆ. ಹಾಗೆಯೇ ಜಪಾನ್, ಆಸ್ಟ್ರೇಲಿಯಾ ಮತ್ತು ಇತರ QUAD ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಆದರೆ ಅಮೆರಿಕಾದೊಂದಿಗೆ ಸಂಬಂಧ ಬೆಳೆಸಲು ಬಯಸಿದ ಭಾರತಕ್ಕೆ ತೀವ್ರ ನಿರಾಶೆಯಾಗಿದೆ” ಎಂದು ರಾಜನ್ ಹೇಳಿದ್ದಾರೆ.





