2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಚುನಾವಣಾ ಅಕ್ರಮ ನಡೆದಿದೆ. ಬ್ರೆಝಿಲ್ ರೂಪದರ್ಶಿ(Model) ಫೋಟೋವನ್ನು ಕನಿಷ್ಠ 10 ವಿಭಿನ್ನ ಮತಗಟ್ಟೆಗಳಲ್ಲಿ 22 ಬಾರಿ ಮತದಾರರಾಗಿ ನೋಂದಾಯಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, “ಬಿಜೆಪಿ ನಕಲಿ ಮತಗಳು ಮತ್ತು ಅಂಚೆ ಮತಪತ್ರಗಳ ಅಕ್ರಮ ನಡೆಸುವ ಮೂಲಕ ಗೆಲುವು ಕಂಡಿದೆ. ಎಲ್ಲಾ ಸಮೀಕ್ಷೆಗಳು 52ರಿಂದ 62 ಸ್ಥಾನಗಳೊಂದಿಗೆ ಕಾಂಗ್ರೆಸ್ ಗೆಲುವನ್ನು ಸೂಚಿಸಿವೆ. ಆದರೆ ಫಲಿತಾಂಶಗಳು ಸಂಪೂರ್ಣವಾಗಿ ಭಿನ್ನವಾಗಿತ್ತು. ಹರಿಯಾಣದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ, ಅಂಚೆ ಮತಗಳು ಸಾಮಾನ್ಯ ಮತಗಳಿಗೆ ಹೊಂದಿಕೆಯಾಗುವ ರೀತಿ ಇರಲಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕರ್ನಾಟಕದ ಆಳಂದದಲ್ಲಿ 6,000 ಮತಗಳ ‘ಡಿಲೀಟ್’ ಯತ್ನ: ಪುರಾವೆ ಸಹಿತ ವಿವರಿಸಿದ ರಾಹುಲ್ ಗಾಂಧಿ
“ಕಾಂಗ್ರೆಸ್ ಕೇವಲ 22,000 ಮತಗಳಿಂದ ಸೋತಿದೆ. ಆದರೆ ಒಟ್ಟು 1.18 ಲಕ್ಷ ಮತಗಳ ವ್ಯತ್ಯಾಸವಿದೆ. ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ ನಡೆದಿದೆ. ಶೇಕಡ 12.5ರಷ್ಟು ನಕಲಿ ಮತಗಳನ್ನು ಹಾಕಲಾಗಿದೆ. ಸುಮಾರು 93,000 ವಿಳಾಸಗಳು ಅಮಾನ್ಯವಾಗಿದೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಶೀಲನೆ ನಡೆಸಲು ಅವಕಾಶ ನೀಡುತ್ತಿಲ್ಲ, ನಿರ್ಬಂಧಿಸುತ್ತಿದೆ” ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ.
“ಒಂದೇ ಗುರುತಿನಿಂದ ಬಹು ಮತಗಳನ್ನು ಚಲಾಯಿಸಲು ನಕಲಿ ಫೋಟೋಗಳನ್ನು ಬಳಸಲಾಗಿದೆ. ಪ್ರತ್ಯೇಕ ಕ್ಷೇತಗಳು ಮಾತ್ರವಲ್ಲ ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಮತಗಳ್ಳತನ ನಡೆಯುತ್ತಿದೆ ಎಂಬುದು ನಮ್ಮ ಅನುಮಾನ. ಹರಿಯಾಣದಲ್ಲಿ, ನಮ್ಮ ಅಭ್ಯರ್ಥಿಗಳಿಂದ, ಏನೋ ತಪ್ಪಾಗಿದೆ ಮತ್ತು ಕೆಲಸ ಮಾಡುತ್ತಿಲ್ಲ ಎಂದು ನಮಗೆ ಬಹಳಷ್ಟು ದೂರುಗಳು ಬಂದಿವೆ. ಅವರ ಭವಿಷ್ಯವಾಣಿಗಳೂ ತಲೆಕೆಳಗಾದವು. ಮಧ್ಯಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರದಲ್ಲಿಯೂ ಇದೇ ರೀತಿ ನಡೆದಿದೆ. ಆದರೆ ನಾವು ಹರಿಯಾಣದಲ್ಲಿ ನಿಜವಾಗಿಯೂ ನಡೆದಿದ್ದು ಏನು ಎಂಬ ಬಗ್ಗೆ ವಿವರವಾದ ತನಿಖೆ ನಡೆಸಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.
“ಎಲ್ಲಾ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್ ಗೆಲುವಿನತ್ತ ಬೆರಳು ತೋರಿಸಿದ್ದವು. ಆದರೆ ಹಾಗೆ ಆಗಲಿಲ್ಲ. ಹರಿಯಾಣದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಚೆ ಮತಗಳು ನಿಜವಾದ ಮತದಾನಕ್ಕಿಂತ ಭಿನ್ನವಾಗಿವೆ. ಹರಿಯಾಣದಲ್ಲಿ ಹಿಂದೆಂದೂ ಈ ರೀತಿ ಆಗಿರಲಿಲ್ಲ. ಆದ್ದರಿಂದ ನಾವು ವಿವರಗಳನ್ನು ಕೆದಕಿದೆವು. ಆಗ ನಮಗೆ ಲಭ್ಯವಾದ ಮಾಹಿತಿ ನೋಡಿ ನನಗೆ ನಂಬಲು ಸಾಧ್ಯವಾಗಲಿಲ್ಲ. ನಾನು ಆಘಾತಕ್ಕೊಳಗಾಗಿದ್ದೆ. ನಾನು ತಂಡಕ್ಕೆ ಹಲವು ಬಾರಿ ಪರಿಶೀಲಿಸಲು ಹೇಳಿದೆ” ಎಂದಿದ್ದಾರೆ.
ರಾಹುಲ್ ಈ ಹಿಂದೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದ ಅಕ್ರಮಗಳನ್ನು ಬಹಿರಂಗಪಡಿಸಿದ್ದಾರೆ. ಇದಕ್ಕೂ ಮೊದಲು ‘ಹೈಡ್ರೋಜನ್ ಬಾಂಬ್’ ಸಿಡಿಸುವುದಾಗಿ ಹೇಳಿ, ಒಂದೊಂದೆ ಮತಗಳ್ಳತನ ಪ್ರಕರಣಗಳನ್ನು ಬಯಲಿಗೆಳೆಯುತ್ತಾ ಬಂದಿದ್ದಾರೆ. ಆಳಂದ ಕ್ಷೇತ್ರದಲ್ಲಿಯೂ ಮತಗಳ್ಳತನದ ಆರೋಪವನ್ನು ರಾಹುಲ್ ಮಾಡಿದ್ದಾರೆ.





