ಚುನಾವಣೆಯ ಸಂದರ್ಭದಲ್ಲಿ ಜನರು ಸಾಮಾಜಿಕ ಜಾಲತಾಣದಲ್ಲಿ, ಹಳ್ಳಿಗಳಲ್ಲಿ ಮರದ ಕೆಳಗೆ ಕೂತುಕೊಂಡು ಟಿಕೆಟ್ ಅವರಿಗೆ ಸಿಗುತ್ತೆ, ಇವರಿಗೆ ಸಿಗುತ್ತೆ ಎಂದು ಸದಾ ಚರ್ಚೆಯಲ್ಲಿರುತ್ತಾರೆ. ಇನ್ನೊಂದು ಕಡೆ ಅಭ್ಯರ್ಥಿಗಳು ಟಿಕೆಟ್ ಪಡೆಯುವುದರಲ್ಲಿ ಹಿರಿಯ ರಾಜಕೀಯ ವ್ಯಕ್ತಿಗಳ ಬೆನ್ನಿಗೆ ಬಿದ್ದಿರುತ್ತಾರೆ.
ರಾಯಚೂರು ಎಸ್‌ಟಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸತೀಶ್ ಜಾರಕಿಹೊಳಿ ಅಳಿಯ ರವಿ ಪಾಟೀಲ್ ಮತ್ತು ಮಾಜಿ ನಿವೃತ್ತ ಐಎಎಸ್ ಅಧಿಕಾರಿ ಜಿ. ಕುಮಾರ್ ನಾಯಕ್ ಅವರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಆಗಿತ್ತು. ಕೊನೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿ. ಕುಮಾರ್ ನಾಯಕ್ ಅವರು ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿತು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಮಯದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಬಿ.ವಿ. ನಾಯಕ್ ಬಿಜೆಪಿ ಸೇರಿದ್ದರು. ಕಾಂಗ್ರೆಸ್ ನಾಯಕರು ಹೊಸಬರಿಗೆ ಅವಕಾಶ ಮಾಡಿದ್ದಾರೆ. ಪಕ್ಷದಲ್ಲಿ ಪ್ರಬಲ ಆಕಾಂಕ್ಷಿಗಳಿದ್ದರೂ ಸಹ ಹೊಸ ಪ್ರಯತ್ನಕ್ಕೆ ಪಕ್ಷ ಮುಂದಾಗಿದೆ.
ಜಿ. ಕುಮಾರ್ ನಾಯಕ್ ಅವರು ಮೂಲ ಬೆಂಗಳೂರಿನವರು. ಕರ್ನಾಟಕದ ನಾನಾ ಭಾಗದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಅವರು 1990ರಲ್ಲಿ ಐಎಎಸ್‌ನ ಕರ್ನಾಟಕ ಕೇಡರ್‌ಗೆ ಸೇರಿದರು. ಉತ್ತರಕನ್ನಡ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. 1999ರಿಂದ 2002ರವರೆಗೆ ಅವರು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಅವರು ತೀವ್ರ ಬರಗಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಿದ್ದಾರೆ. ಸಾರ್ವಜನಿಕ ಗ್ರಂಥಾಲಯ, ಮಾರುಕಟ್ಟೆ, ಪಾಳುಬಿದ್ದ ಕಟ್ಟಡಗಳು, ಜಿಲ್ಲೆಯ ಶಿಕ್ಷಣ ಸ್ಥಿತಿಯನ್ನು ಸುಧಾರಿಸಲು ರಾಯಚೂರಿನಲ್ಲಿ ವಿಶ್ರಾಂತಿ ಮತ್ತು ಮನರಂಜನೆಗಾಗಿ ಇದ್ದ ಏಕೈಕ ಸ್ಥಳ ಪಟ್ಟಣದ ಸರೋವರ ಆಮ್ ತಲಾಬ್ ಹೆಚ್ಚುವರಿ ಸೌಲಭ್ಯಗಳೊಂದಿಗೆ ಅವರ ಅಧಿಕಾರಾವಧಿಯಲ್ಲಿ ಅಭಿವೃದ್ದಿಯಾದವು.
ಕುಮಾರ್ ನಾಯಕ್ ರಾಜಕೀಯವಾಗಿ ಜಿಲ್ಲೆಗೆ ಪರಿಚಯವಿಲ್ಲದೇ ಇದ್ದರೂ ಸರ್ಕಾರಿ ಅಧಿಕಾರಿಯಾಗಿ ಜಿಲ್ಲೆಯೊಂದಿಗೆ ಹಳೆ ಸಂಬಂಧ ಕೆಲವು ರಾಜಕಾರಣಿ ಮುಖಂಡರ ಜೊತೆ ನಿರಂತರ ಸಂಪರ್ಕ, ಆವಾಗಾವಾಗ ಜಿಲ್ಲೆಗೆ ಆಗಮಿಸಿ ಕೆಲವು ಮುಖಂಡರನ್ನು ಭೇಟಿಯಾಗಿ ಚರ್ಚಿಸುತ್ತಿದ್ದರು. ಈ ಹಿಡಿತದಿಂದ ರಾಯಚೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಕನಸಿನೊಂದಿಗೆ ಸುಮಾರು ದಿನಗಳಿಂದ ರಾಯಚೂರಿನಲ್ಲಿ ನೆಲೆಯೂರಿ ತಳಮಟ್ಟದಿಂದ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಜನರು ಅವರ ಕೈ ಹಿಡಿಯುತ್ತಾರಾ ಕಾದು ನೋಡಬೇಕಿದೆ.




