ಸರ್ಕಾರಕ್ಕೆ ಅಥವಾ ಪ್ರಭಾವಿ ಕಾರ್ಪೊರೇಟ್ ಸಂಸ್ಥೆಗಳಿಗೆ ವಿರುದ್ಧವಾಗಿ ತೀರ್ಪು ನೀಡಿದಾಗಲೇ ತಕ್ಷಣ ನ್ಯಾಯಾಧೀಶರನ್ನು ವರ್ಗಾಯಿಸುವುದು ನ್ಯಾಯಾಂಗದ ಸ್ವಾಯತ್ತತೆಯನ್ನು ಕುಗ್ಗಿಸುತ್ತದೆ ಎಂದು ಕಾನೂನು ತಜ್ಞರುಗಳು ಅಭಿಪ್ರಾಯಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್, "ಇದು ಅದಾನಿಗಾಗಿ, ಅದಾನಿಗೋಸ್ಕರ ಇರುವ, ಅದಾನಿ ಸರ್ಕಾರ" ಎಂದು ಟೀಕಿಸಿದ್ದಾರೆ.
ಅದಾನಿ ನೇತೃತ್ವದ ಸಂಸ್ಥೆಯ ವಿರುದ್ಧವಾಗಿ ತೀರ್ಪು ನೀಡಿದ ದಿನವೇ ರಾಜಸ್ಥಾನದ ನ್ಯಾಯಾಧೀಶರು ವರ್ಗಾವಣೆಯಾಗಿರುವ ಘಟನೆ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ನಮ್ಮ ನ್ಯಾಯ ವ್ಯವಸ್ಥೆಯು ಯಾರ ಹತೋಟಿಯಲ್ಲಿದೆ ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ.
ಜೈಪುರ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಕುಮಾರ್ ಗುಪ್ತಾ ಅವರು ಅದಾನಿ ನೇತೃತ್ವದ ಸಂಸ್ಥೆಯು ರಾಜಸ್ಥಾನ ಸರ್ಕಾರಿ ಸ್ವಾಮ್ಯದ ಕಂಪನಿಯ ವೆಚ್ಚದಲ್ಲಿ ಸಾರಿಗೆ ಶುಲ್ಕದಲ್ಲಿ 1,400 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ತಪ್ಪಾಗಿ ವಸೂಲಿ ಮಾಡಿದೆ ಎಂದು ತೀರ್ಪು ನೀಡಿದ್ದರು.
ಇದನ್ನು ಓದಿದ್ದೀರಾ? ಮೋದಿ ಮಿತ್ರ ಅದಾನಿಗೆ ಮಹಾರಾಷ್ಟ್ರ-ರಾಜಸ್ಥಾನ ವಿದ್ಯುತ್ ಗುತ್ತಿಗೆ: ಇದು ಸಂಘಟಿತ ಭ್ರಷ್ಟಾಚಾರವಲ್ಲವೇ?
ಅದೇ ದಿನ, ರಾಜ್ಯದ ಬಿಜೆಪಿ ಸರ್ಕಾರವು ನ್ಯಾಯಾಧೀಶ ದಿನೇಶ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರಗಳು ಹೈಕೋರ್ಟ್‌ನ ಒಪ್ಪಿಗೆಯೊಂದಿಗೆ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡುತ್ತದೆ. ನ್ಯಾಯಾಧೀಶ ದಿನೇಶ್ ಅದಾನಿ ಸಂಸ್ಥೆ ವಿರುದ್ಧ ತೀರ್ಪು ನೀಡುತ್ತಿದ್ದಂತೆ ಅವರನ್ನು ರಾಜ್ಯ ರಾಜಧಾನಿಯಿಂದ 200 ಕಿ.ಮೀ ದೂರದಲ್ಲಿರುವ ಬೀವರ್ ಜಿಲ್ಲೆಗೆ ಬಿಜೆಪಿ ಸರ್ಕಾರ ವರ್ಗಾಯಿಸಿದೆ. ದಿನೇಶ್ ಅವರನ್ನು ತೆಗೆದುಹಾಕುವ ಆದೇಶವನ್ನು ರಾಜ್ಯ ಸರ್ಕಾರದ ಕಾನೂನು ಮತ್ತು ಕಾನೂನು ವ್ಯವಹಾರಗಳ ಇಲಾಖೆ ಹೊರಡಿಸಿದೆ.
ಅಷ್ಟು ಮಾತ್ರವಲ್ಲದೆ ಎರಡು ವಾರಗಳ ನಂತರ, ಅದಾನಿ ನೇತೃತ್ವದ ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿದ ಗುಪ್ತಾ ಅವರ ಆದೇಶವನ್ನು ಹೈಕೋರ್ಟ್ ತಡೆಹಿಡಿದಿದೆ. ರಾಜ್ಯ ಮತ್ತು ಸಮೂಹ ಸಂಸ್ಥೆಯ ನಡುವಿನ ಒಪ್ಪಂದವನ್ನು ಲೆಕ್ಕಪರಿಶೋಧಿಸುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರನ್ನು ಕೋರುವಂತೆ ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅದೇ ದಿನ, ರಾಜಸ್ಥಾನ ಹೈಕೋರ್ಟ್‌ನ ಜೋಧಪುರ ಪೀಠವು ಗುಪ್ತಾ ಅವರನ್ನು ಬೀವರ್‌ನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲು ಆದೇಶಿಸಿದೆ. ಬಿಜೆಪಿ ಸರ್ಕಾರ ಅದಾನಿ-ಅಂಬಾನಿಯಂತಹ ಕಾರ್ಪೋರೇಟ್ ದೊರೆಗಳಿಗಾಗಿ ನ್ಯಾಯ ವ್ಯವಸ್ಥೆಯನ್ನು ಹತೋಟಿಯಲ್ಲಿಡುತ್ತಿರುವ ಪ್ರಶ್ನೆ ಸದ್ಯ ಎದ್ದಿದ್ದು, ಈ ವಿವಾದದ ಬಗ್ಗೆ ಈವರೆಗೂ ರಾಜಸ್ಥಾನ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿಲ್ಲ. ಬಿಜೆಪಿ ನಾಯಕರುಗಳು ಮಾತ್ರ ಇದು ಕೇವಲ ಆಡಳಿತಾತ್ಮಕ ವರ್ಗಾವಣೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಏನಿದು ಅದಾನಿ ನೇತೃತ್ವದ ಸಂಸ್ಥೆಯ ವಿರುದ್ಧದ ತೀರ್ಪು?
2007ರಲ್ಲಿ ರಾಜಸ್ಥಾನ ಕಲ್ಲಿದ್ದಲು ಸಚಿವಾಲಯವು ಛತ್ತೀಸ್‌ಗಢದ ಹಸ್ದಿಯೊ ಅರಾಂಡ್ ಅರಣ್ಯದಲ್ಲಿರುವ ಕಲ್ಲಿದ್ದಲು ಬ್ಲಾಕ್ ಅನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನ್ ನಿಗಮ್ ಲಿಮಿಟೆಡ್‌ಗೆ ಹಂಚಿಕೆ ಮಾಡಿತ್ತು. ಸಂಸ್ಥೆಯು ತನ್ನ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ನೇರವಾಗಿ ಪಡೆಯಲು ಅವಕಾಶ ನೀಡುವ ಉದ್ದೇಶದಿಂದ ಈ ಹಂಚಿಕೆ ಮಾಡಲಾಗಿತ್ತು. ಆದರೆ ಸಂಸ್ಥೆಯು ಅದಾನಿ ಗ್ರೂಪ್‌ನೊಂದಿಗೆ ಜಂಟಿ ಉದ್ಯಮವನ್ನು ಮಾಡಿಕೊಂಡಿದ್ದು, ಅದಾನಿ ಸಂಸ್ಥೆ ಶೇ.74ರಷ್ಟು ಪಾಲನ್ನು ಹೊಂದಿತ್ತು. ಗಣಿಗಾರಿಕೆ ಕಾರ್ಯಾಚರಣೆಗಳನ್ನು ಹೊರಗುತ್ತಿಗೆ ನೀಡಲಾಗಿತ್ತು.
ಇದನ್ನು ಓದಿದ್ದೀರಾ? ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿರುವ ಮೋದಿ: ರಾಹುಲ್ ಗಾಂಧಿ
ಒಪ್ಪಂದದ ಪ್ರಕಾರ ಛತ್ತೀಸ್‌ಗಢದಿಂದ ಗಣಿಗಾರಿಕೆ ಮಾಡಿದ ಕಲ್ಲಿದ್ದಲನ್ನು ರೈಲು ಮೂಲಕ ರಾಜಸ್ಥಾನಕ್ಕೆ ಸಾಗಿಸಬೇಕೆಂದು ಆದೇಶಿಸಲಾಗಿತ್ತು. ಇದಕ್ಕಾಗಿ, ಅದಾನಿ ನೇತೃತ್ವದ ಜಂಟಿ ಉದ್ಯಮವು ಗಣಿಯನ್ನು ಮುಖ್ಯ ರೈಲ್ವೆ ಕಾರಿಡಾರ್‌ಗೆ ಸಂಪರ್ಕಿಸಲು ರೈಲ್ವೆ ಸೈಡಿಂಗ್‌ಗಳು ಅಥವಾ ಸೈಡ್‌ಟ್ರಾಕ್‌ಗಳನ್ನು ನಿರ್ಮಿಸುವುದು ಎಂದು ಒಪ್ಪಂದವಾಗಿತ್ತು. 2013ರಲ್ಲಿ ಗಣಿಗಾರಿಕೆ ಪ್ರಾರಂಭವಾಗಿದೆ. ಆದರೆ ಹಲವು ವರ್ಷಗಳ ನಂತರ ರೈಲ್ವೆ ಸೈಡಿಂಗ್‌ಗಳನ್ನು ನಿರ್ಮಿಸಲಾಗಿತ್ತು.
ಸೈಡಿಂಗ್‌ಗಳನ್ನು ಹಾಕುವವರೆಗೆ ಗಣಿಯಿಂದ ರೈಲ್ವೆ ನಿಲ್ದಾಣಗಳಿಗೆ ರಸ್ತೆಯ ಮೂಲಕ ಕಲ್ಲಿದ್ದಲನ್ನು ಸಾಗಿಸಲು ಸಾರಿಗೆ ಸಂಸ್ಥೆಯನ್ನು ತೊಡಗಿಸಿಕೊಳ್ಳಲು ಎರಡು ಸಂಸ್ಥೆಗಳು ಒಪ್ಪಿಕೊಂಡಿದ್ದವು. ಆದರೆ ಕಲ್ಲಿದ್ದಲು ಗಣಿಗಾರಿಕೆ ಮತ್ತು ವಿತರಣಾ ಒಪ್ಪಂದ ಎಂದು ಕರೆಯಲ್ಪಡುವ ಸಂಸ್ಥೆಗಳ ನಡುವಿನ ಮೂಲ ಒಪ್ಪಂದದಲ್ಲಿ ರಸ್ತೆ ಸಾರಿಗೆ ಬಳಕೆಯ ಉಲ್ಲೇಖವಿರಲಿಲ್ಲ.
ಇದನ್ನು ಓದಿದ್ದೀರಾ? ಅಯೋಧ್ಯೆ | ಬಿಜೆಪಿ ನಂಟಿನ ಸಂಸ್ಥೆಯಿಂದ ಪರಿಸರ ಸೂಕ್ಷ್ಮ ಭೂಮಿ ಖರೀದಿಸಿದೆ ಅದಾನಿ ಸಮೂಹ
ಅದಾದ ಬಳಿಕ ಅದಾನಿ ನೇತೃತ್ವದ ಜಂಟಿ ಉದ್ಯಮವು ರಸ್ತೆಯ ಮೂಲಕ ಕಲ್ಲಿದ್ದಲನ್ನು ಸಾಗಿಸಲು ಆದ ವೆಚ್ಚ 1,400 ಕೋಟಿ ರೂಪಾಯಿಯ ಲೆಕ್ಕಾಚಾರವನ್ನು ರಾಜಸ್ಥಾನ ಸಂಸ್ಥೆಗೆ ನೀಡಿತ್ತು. ರಾಜಸ್ಥಾನ ಸಂಸ್ಥೆಯು ರಸ್ತೆ ಸಾರಿಗೆ ಶುಲ್ಕವನ್ನು ಪಾವತಿಸಿದೆ. ಆದರೆ 2018ರಲ್ಲಿ, ಅದಾನಿ ನೇತೃತ್ವದ ಜಂಟಿ ಉದ್ಯಮವು ವಿಳಂಬವಾದ ಪಾವತಿಗಳಿಗೆ ಬಡ್ಡಿಯನ್ನು ಸಹ ಪಾವತಿಸಬೇಕೆಂದು ಒತ್ತಾಯಿಸಿದ್ದು, ಅದಕ್ಕೆ ಸಂಸ್ಥೆ ನಿರಾಕರಿಸಿದೆ.
2020ರಲ್ಲಿ, ಈ ವಿಷಯಕ್ಕೆ ಸಂಬಂಧಿಸಿ ಅದಾನಿ ನೇತೃತ್ವದ ಜಂಟಿ ಉದ್ಯಮವು ಜೈಪುರದ ವಾಣಿಜ್ಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಆದರೆ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಗುಪ್ತಾ ರಾಜಸ್ಥಾನ ಸಂಸ್ಥೆಯ ಪರವಾಗಿ ತೀರ್ಪು ನೀಡಿದ್ದಾರೆ. ಇದು ಮೂಲ ಗುತ್ತಿಗೆ ಒಪ್ಪಂದದಲ್ಲಿ ಇರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಷ್ಟು ಮಾತ್ರವಲ್ಲದೆ ಒಪ್ಪಂದದ ಪ್ರಕಾರ ಅದಾನಿ ಜಂಟಿ ಉದ್ಯಮವು ರೈಲ್ವೆ ಸೈಡಿಂಗ್‌ಗಳನ್ನು ನಿರ್ಮಿಸಬೇಕಾಗಿತ್ತು. ಆದರೆ, ಅದನ್ನು ನಿರ್ಮಿಸಲು ವಿಫಲವಾದ ಕಾರಣ, ರಸ್ತೆ ಸಾರಿಗೆಯ ವೆಚ್ಚವನ್ನು ಅವರೇ ಭರಿಸಬೇಕಿತ್ತು. ಬದಲಾಗಿ, ಆ ವೆಚ್ಚವನ್ನು ರಾಜ್ಯ ಕಂಪನಿಗೆ ವರ್ಗಾಯಿಸಿ ಲಾಭ ಮಾಡಿಕೊಂಡಿದೆ ಎಂದು ನ್ಯಾಯಾಲಯ ಟೀಕಿಸಿತ್ತು. ನ್ಯಾಯಾಲಯವು ಸಂಸ್ಥೆಗೆ ₹50 ಲಕ್ಷ ದಂಡ ವಿಧಿಸಿತ್ತು. ಈ ಒಪ್ಪಂದದ ಬಗ್ಗೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಮೂಲಕ ಲೆಕ್ಕಪರಿಶೋಧನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತು.
ಆದರೆ ಈ ತೀರ್ಪು ನೀಡಿದ ದಿನವೇ, ನ್ಯಾಯಾಧೀಶ ದಿನೇಶ್ ಕುಮಾರ್ ಗುಪ್ತಾ ಅವರನ್ನು ಬೇರೊಂದು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿರುವುದು ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಸರ್ಕಾರಕ್ಕೆ ಅಥವಾ ಪ್ರಭಾವಿ ಕಾರ್ಪೊರೇಟ್ ಸಂಸ್ಥೆಗಳಿಗೆ ವಿರುದ್ಧವಾಗಿ ತೀರ್ಪು ನೀಡಿದಾಗಲೇ ತಕ್ಷಣ ನ್ಯಾಯಾಧೀಶರನ್ನು ವರ್ಗಾಯಿಸುವುದು ನ್ಯಾಯಾಂಗದ ಸ್ವಾಯತ್ತತೆಯನ್ನು ಕುಗ್ಗಿಸುತ್ತದೆ ಎಂದು ಕಾನೂನು ತಜ್ಞರುಗಳು ಅಭಿಪ್ರಾಯಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಇದು ಅದಾನಿಗಾಗಿ, ಅದಾನಿಗೋಸ್ಕರ ಇರುವ, ಅದಾನಿ ಸರ್ಕಾರ” ಎಂದು ಟೀಕಿಸಿದ್ದಾರೆ.
ಇನ್ನು ನೆಟ್ಟಿಗರು “ನಮ್ಮ ಕಾನೂನು ವ್ಯವಸ್ಥೆ ಪ್ರಭಾವಿಗಳ ಹಿಡಿತದಲ್ಲಿರುವುದು ಸ್ಪಷ್ಟವಾಗುತ್ತಿದೆ. ಬಿಜೆಪಿ ಅದಾನಿ ಸಂಸ್ಥೆಗಳಿಂದ ದೇಣಿಗೆ ಪಡೆದುಕೊಂಡಿದೆ. ಇದೀಗ ನ್ಯಾಯಾಲಯವನ್ನು ಹತೋಟಿಯಲ್ಲಿಟ್ಟುಕೊಂಡು ಋಣವನ್ನು ತೀರಿಸುತ್ತಿದೆ. ಪ್ರಭಾವಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡರೆ ಶಿಕ್ಷೆಯ ರೂಪದಲ್ಲಿ ವರ್ಗಾವಣೆ ಮಾಡಲಾಗುತ್ತದೆ ಎಂಬ ಸಂದೇಶವನ್ನು ಸರ್ಕಾರ ನೀಡಿದಂತಿದೆ” ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




