ರಾಜಸ್ಥಾನದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತಗಳಿಂದ ಗೆದ್ದಿರುವ ಕ್ಷೇತ್ರಗಳಲ್ಲಿ ಮುಸ್ಲಿಮರ ಮತಗಳನ್ನು ಅಳಿಸಲು ಬಿಜೆಪಿ ಏಜೆಂಟ್‌ಗಳು ಒತ್ತಡ ಹೇರುತ್ತಿದ್ದಾರೆ ಎಂದು ಬಿಎಲ್‌ಒವೊಬ್ಬರು ಆರೋಪಿಸಿದ್ದಾರೆ. ‘ತಾವು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವ ಮತಗಟ್ಟೆಯಲ್ಲಿ 470 (40%) ಮತದಾರರ ಹೆಸರನ್ನು ಅಳಿಸಲು ಬಿಜೆಪಿ ಆಕ್ಷೇಪಣೆ ಅರ್ಜಿ ಸಲ್ಲಿಸಿದೆ. ಆ ಅರ್ಜಿಗಳು ಮುಸ್ಲಿಂ ಮತದಾರರನ್ನ ಗುರಿಯಾಗಿಸಿಕೊಂಡಿವೆ. ಅವುಗಳನ್ನು ಪರಿಶೀಲಿಸುವಂತೆ ಬೆದರಿಕೆ ಹಾಕಲಾಗುತ್ತಿದೆ. ಆದರೆ, ತಾವು ಈಗಾಗಲೇ ಎಲ್ಲ ಮತದಾರರನ್ನೂ ಪರಿಶೀಲಿಸಿದ್ದೇನೆ’ ಎಂದು ಜೈಪುರದ ಹವಾ ಮಹಲ್ ವಿಧಾನಸಭಾ ಕ್ಷೇತ್ರದ ಬಿಎಲ್ಒ ಕೀರ್ತಿಕುಮಾರ್ ಆರೋಪಿಸಿರುವುದಾಗಿ ‘ನ್ಯೂಸ್‌ಲ್ಯಾಂಡ್ರಿ’ ವರದಿ ಮಾಡಿದೆ.
ಬಿಎಲ್‌ಒ ಕೀರ್ತಿಕುಮಾರ್ ಅವರು ಫೋನ್ ಕರೆಯಲ್ಲಿ ಕೂಗಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ, ‘ನಾನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಅವರು ಹೇಳುತ್ತಿರುವುದು ಕಂಡುಬಂದಿದೆ.
ಕೀರ್ತಿಕುಮಾರ್ ಅವರು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವ ಹವಾ ಮಹಲ್ ಕ್ಷೇತ್ರದ ಬಸ್ತಿ ಪ್ರದೇಶದಲ್ಲಿ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿದೆ. ಈ ಕ್ಷೇತ್ರವನ್ನು ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ಅವರು ಪ್ರತಿನಿಧಿಸುತ್ತಿದ್ದಾರೆ. ಅವರು, ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 974 ಮತಗಳ ಅಂತರದಿಂದ ಗೆದ್ದಿದ್ದರು. ಈ ಅಲ್ಪ ಮತಗಳಿಂದ ಗೆದ್ದಿದ್ದ ಬಿಜೆಪಿ, ಮುಂದಿನ ಚುನಾವಣೆಯಲ್ಲಿಯೂ ಗೆಲ್ಲುತ್ತದೆ ಎಂಬುದಕ್ಕೆ ಖಾತ್ರಿ ಇಲ್ಲವೆಂದು ಹೇಳಲಾಗಿದೆ.
ಹೀಗಾಗಿ, “ಮುಂದಿನ (2028) ವಿಧಾನಸಭಾ ಚುನಾವಣೆಯಲ್ಲಿ ಆಚಾರ್ಯ (ಬಿಜೆಪಿ) ಗೆಲುವನ್ನು ಖಚಿತಪಡಿಸಿಕೊಳ್ಳಲು ಮತದಾರರ ಪಟ್ಟಿಯಿಂದ ಮತದಾರರನ್ನು ಹೆಸರನ್ನು ಅಳಿಸಿಹಾಕುವಂತೆ 470 ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಅವುಗಳಲ್ಲಿರುವ ಹೆಸರುಗಳನ್ನು ಅಲಿಸುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ, ಹಿಂದು ಮತದಾರರು ಹೆಚ್ಚಾಗಿರುವ ಬೂತ್‌ಗಳಲ್ಲಿ ಈ ಪ್ರಮಾಣದ ಆಕ್ಷೇಪಣೆಗಳು ಬಂದಿಲ್ಲ. ಇಡೀ ಬಸ್ತಿಯ ಮತದಾರರನ್ನೇ ತೆಗೆದುಹಾಕಿಬಿಡುತ್ತೇನೆ. ಆಗ ಆಚಾರ್ಯ ಸುಲಭವಾಗಿ ಗೆಲ್ಲಬಹುದು” ಎಂದು ಕುಮಾರ್ ಹತಾಶೆ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: 2025ರಲ್ಲಿ ಕೋಮುದ್ವೇಷ ತೀವ್ರ ಏರಿಕೆ; ಮುಸ್ಲಿಮರೇ ಹೆಚ್ಚು ಗುರಿ: ವರದಿ
“ಚುನಾವಣಾ ಆಯೋಗವೇ ನೀಡಿರುವ ಕೈಪಿಡಿಯ ಪ್ರಕಾರ, ಒಬ್ಬ ಬೂತ್ ಮಟ್ಟದ ಏಜೆಂಟ್ ಒಂದು ದಿನಕ್ಕೆ 10ಕ್ಕಿಂತ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸುವಂತಿಲ್ಲ. ಆದರೆ, ನಮ್ಮ ಬೂತ್‌ನಲ್ಲಿ ಬಿಜೆಪಿ ಏಜೆಂಟ್‌ಗಳು ಎರಡೇ ದಿನಗಳಲ್ಲಿ 400ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಅರ್ಜಿಗಳನ್ನು ಪರಿಶೀಲಿಸಿ ಡಿಜಿಟಲೀಕರಣ ಮಾಡುವುದು ಅಸಾಧ್ಯ” ಎಂದು ಬಿಎಲ್‌ಒ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲಸ ಮತ್ತು ರಾಜಕೀಯ ಒತ್ತಡ, ಬೆದರಿಕೆಗಳ ಕಾರಣದಿಂದಾಘಿ ಮೂವರು ಬಿಎಲ್‌ಒಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.




