ಕಳೆದ ತಿಂಗಳು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಸಂಭವಿಸಿದ ಟಿಆರ್‌ಪಿ ಗೇಮ್ ಝೋನ್ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಸಂಬಂಧಿಕರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದೆ. ತಮ್ಮ ಪಕ್ಷವು ಸಂತ್ರಸ್ತರ ಕುಟುಂಬದ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಮೇ 25ರಂದು ರಾಜ್‌ಕೋಟ್ ನಗರದ ನಾನಾ-ಮಾವಾ ಪ್ರದೇಶದಲ್ಲಿದ್ದ ಗೇಮ್ ಝೋನ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ದುರಂತ ಘಟನೆಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ 27 ಜನರು ಸಾವನ್ನಪ್ಪಿದ್ದರು.
ಸಾವನ್ನಪ್ಪಿದವರ ಕುಟುಂಬಸ್ಥರೊಂದಿಗೆ ಸಂವಾದ ನಡೆಸಿರುವ ರಾಹುಲ್, ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂವಾದದ ವೇಳೆ, ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿಂಗ್ ಗೋಹಿಲ್ ಅವರು ದೆಹಲಿಯಲ್ಲಿ ಗಾಂಧಿ ಅವರೊಂದಿಗೆ ಇದ್ದರು. ಸಂತ್ರಸ್ತರ ಸಂಬಂಧಿಕರೊಂದಿಗೆ ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಪಕ್ಷದ ನಾಯಕ ಲಾಲ್ಜಿ ದೇಸಾಯಿ ಸೇರಿದಂತೆ ಇತರರು ಸಂವಾದದಲ್ಲಿ ಭಾಗವಹಿಸಿ, ಜೊತೆಗಿದ್ದರು.
ಘಟನೆ ನಡೆದು ಒಂದು ತಿಂಗಳಾದರೂ, ಬಿಜೆಪಿ ಸರ್ಕಾರವು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಿಲ್ಲವೆಂದು ಆರೋಪಿಸಿರುವ ಕಾಂಗ್ರೆಸ್, ಜೂನ್ 25ರಂದು ‘ರಾಜ್‌ಕೋಟ್ ಬಂದ್’ಗೆ ಕರೆ ನೀಡಿದೆ. ಸಂತ್ರಸ್ತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.
ದುರಂತ ನಡೆದ ಬಳಿಕ, ಘಟನೆಗೆ ಕಾರಣಗಳು ಹಾಗೂ ಲೋಪದೋಷಗಳ ಬಗ್ಗೆ ತನಿಖೆ ನಡೆಸಲು ಗುಜರಾತ್ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಈವರೆಗೆ ಗೇಮ್ ಝೋನ್‌ನ ಐವರು ಮಾಲೀಕರು ಮತ್ತು ಆರು ಸರ್ಕಾರಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.




