ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ತನ್ನ ಮಿತ್ರಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಬಿಹಾರ, ಆಂಧ್ರಪ್ರದೇಶಕ್ಕೆ ಹೆಚ್ಚು ಆದ್ಯತೆ ನೀಡಿದ್ದನ್ನೂ ನಾವು ನೆನಪಿಸಿಕೊಳ್ಳಬೇಕು. ಅಂದರೆ ಎನ್‌ಡಿಎ ಜತೆಯಾದರಷ್ಟೇ ಮಾತ್ರ ನಮ್ಮ ಹಕ್ಕಿನ ಹಣ ಸಿಗುವುದು ಎಂದು ಬಹಿರಂಗವಾಗಿ ಸಾರುತ್ತಿರುವುದೇ ಈ ಮೋದಿ ಸರ್ಕಾರ?
ಕೇಂದ್ರ ಸರ್ಕಾರದಿಂದ ಅನುದಾನ ಮತ್ತು ತೆರಿಗೆ ಪಾಲನ್ನು ಪಡೆಯುವುದು ರಾಜ್ಯಗಳ ಸಾಂವಿಧಾನಿಕ ಹಕ್ಕು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಈ ಹಂಚಿಕೆ ಪ್ರಮುಖವಾದ ಪಾತ್ರ ವಹಿಸುತ್ತದೆ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಈ ಒಕ್ಕೂಟ ವ್ಯವಸ್ಥೆಗೆ, ರಾಜ್ಯಗಳ ಸಾಂವಿಧಾನಿಕ ಹಕ್ಕಿಗೆ ಕೊಡಲಿ ಏಟು ಬಿದ್ದಿದೆ. ರಾಜ್ಯಗಳಿಗೆ ಸಿಗಬೇಕಾದ ಪಾಲನ್ನು ನೀಡದೆ ಕೇಂದ್ರ ಸತಾಯಿಸುತ್ತಿದೆ. ಕರ್ನಾಟಕ, ಕೇರಳ ಸೇರಿದಂತೆ ಹಲವು ದಕ್ಷಿಣ ರಾಜ್ಯಗಳು ಈ ಆರೋಪವನ್ನು ಮಾಡುತ್ತಲೇ ಬಂದಿದೆ. ಇದೀಗ ರಾಜ್ಯಗಳ ಹಕ್ಕಿನ ಹಣವನ್ನು ಪಡೆಯಬೇಕಾದರೆ ಎನ್‌ಡಿಎ ಸೇರುವ ಆಫರ್ ಅನ್ನು ಕೇಂದ್ರ ಸಚಿವ ರಾಮದಾಸ್ ಅಠವಳೆ ನೀಡಿದ್ದಾರೆ! ಈ ಮೂಲಕ ಕೇಂದ್ರದ ಕೀಳುಮಟ್ಟದ, ‘ಬ್ಲ್ಯಾಕ್‌ಮೇಲ್’ ರಾಜಕೀಯ ಬೆಳಕಿಗೆ ಬಂದಿದೆ.
“ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಐ(ಎಂ) ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿದರೆ ಕೇರಳ ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಹಣ, ನಿಧಿ ಹರಿದುಬರುತ್ತವೆ. ವಿಜಯನ್ ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡರೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳಕ್ಕೆ ದೊಡ್ಡ ಮೊತ್ತದ ವಿಶೇಷ ಪ್ಯಾಕೇಜ್ ನೀಡಲಿದ್ದಾರೆ. ಕಮ್ಯುನಿಸ್ಟ್ ನಾಯಕರು ಎನ್‌ಡಿಎ ಸೇರುವುದು ‘ಕ್ರಾಂತಿಕಾರಿ’ ಕ್ರಮವಾಗಲಿದೆ. ಇದರಿಂದ ಕೇರಳದ ಅಭಿವೃದ್ಧಿಯಾಗಲಿದೆ. ಎನ್‌ಡಿಎ ಸೇರಿದರೆ ಮತ್ತೆ ಕೇರಳ ವಿಧಾನಸಭೆ ಚುನಾವಣೆ ಗೆದ್ದು ಪಿಣರಾಯಿ ಸಿಎಂ ಆಗಬಹುದು” ಎಂದು ಮೋದಿ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಕಣ್ಣೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾಗ ಹೇಳಿದ್ದಾರೆ. ಸದ್ಯ ರಾಜ್ಯಗಳ ಹಕ್ಕಿನ ಹಣವನ್ನು ನೀಡಲೂ ಕೇಂದ್ರ ಬಹಿರಂಗವಾಗಿ ‘ಬ್ಲ್ಯಾಕ್‌ಮೇಲ್’ ಮಾಡುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದಿಂದ ಹಣ ಪಡೆಯುವುದು ರಾಜ್ಯಗಳ ಹಕ್ಕು, ಭಿಕ್ಷೆಯಲ್ಲ ಎಂಬ ಕೂಗು ಕೇಳಿಬರುತ್ತಿದೆ.
ಇದನ್ನು ಓದಿದ್ದೀರಾ? ಜಿಎಸ್‌ಟಿ ಸಭೆ | ಕೇಂದ್ರದ ವಿರುದ್ಧ ರಾಜ್ಯದ ಆರ್ಥಿಕ ಹೋರಾಟ ಮತ್ತು ನಿರೀಕ್ಷೆಗಳು
ಸಿಪಿಐಎಂ ಕೇರಳ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅಠವಳೆ ಹೇಳಿಕೆಯನ್ನು ಟೀಕಿಸಿದ್ದು, “ಇದು ಸಂವಿಧಾನಬಾಹಿರ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ” ಎಂದಿದ್ದಾರೆ. ಹಾಗೆಯೇ ಕೇಂದ್ರದಿಂದ ಹಣ ಪಡೆಯಲು ಎನ್‌ಡಿಎ ಸೇರಲೇಬೇಕು ಎಂಬ ಅಠವಳೆ ವಾದವು ಭಾರತದ ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ಧಕ್ಕೆ ತರುವಂತದ್ದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೇರಳಕ್ಕೆ ಬರಬೇಕಾದ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ಕಳೆದ ಐದು ವರ್ಷಗಳಿಂದ ತಡೆಹಿಡಿಯಲಾಗಿದೆ ಎಂದು ಸಿಪಿಐಎಂ ಆರೋಪಿಸಿದೆ. ಕೇವಲ ರಾಜಕೀಯ ಮೈತ್ರಿಗಾಗಿ ಹಕ್ಕಿನ ಹಣವನ್ನು ನೀಡುವ ಆಮಿಷ ತೋರಿಸುವುದು ರಾಜ್ಯದ ಹಕ್ಕುಗಳ ಮೇಲಿನ ದಾಳಿ ಎಂದು ಕಮ್ಯೂನಿಸ್ಟ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೂ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರದ ವಿರುದ್ಧದ ಅಲೆಯನ್ನು ಹೆಚ್ಚಿಸಲು ಅಠವಳೆ ಹೇಳಿಕೆಯನ್ನು ಕೇರಳ ಸರ್ಕಾರ ಬಳಸಿಕೊಳ್ಳುವ ತಂತ್ರವೂ ನಡೆಯುತ್ತಿದೆ.
ಕೇಂದ್ರದಿಂದ ಹಣ ಪಡೆಯುವುದು ಹಕ್ಕು, ಭಿಕ್ಷೆಯಲ್ಲ
ಕೇಂದ್ರ ಸರ್ಕಾರದಿಂದ ಅನುದಾನ, ತೆರಿಗೆ ಪಾಲನ್ನು ಪಡೆಯುವುದು ರಾಜ್ಯಗಳ ಹಕ್ಕು. ಸಂವಿಧಾನದ 280ನೇ ವಿಧಿಯಡಿ ರಚನೆಯಾಗುವ ಹಣಕಾಸು ಆಯೋಗವು ಕೇಂದ್ರದ ಒಟ್ಟು ತೆರಿಗೆ ಆದಾಯದಲ್ಲಿ ರಾಜ್ಯಗಳಿಗೆ ಎಷ್ಟು ಪಾಲು ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ. ಪ್ರಸ್ತುತ 15ನೇ ಹಣಕಾಸು ಆಯೋಗ ಶಿಫಾರಸಿನಂತೆ ಕೇಂದ್ರದ ತೆರಿಗೆಯ ಶೇ.41ರಷ್ಟು ಭಾಗವನ್ನು ರಾಜ್ಯಗಳಿಗೆ ಹಂಚಿಕ ಮಾಡಬೇಕಾಗಿದೆ. ಇನ್ನು ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯಗಳಿಗಾದ ಆದಾಯ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಕೇಂದ್ರವು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ನೀಡುವುದು ಕಾನೂನುಬದ್ಧವಾಗಿದೆ. ಆದರೆ ಈ ಹಕ್ಕನ್ನು ಇತ್ತೀಚೆಗೆ ಕಸಿಯಲಾಗುತ್ತಿದೆ. ಈ ವೇಳೆ ರಾಜ್ಯಗಳು ಸಂಗ್ರಹಿಸಿ ಕೇಂದ್ರಕ್ಕೆ ನೀಡುವ ತೆರಿಗೆಯಲ್ಲಿ ನ್ಯಾಯಯುತ ಪಾಲನ್ನು ಪಡೆಯುವುದು ಭಿಕ್ಷೆಯಲ್ಲ, ಅದು ಸಂವಿಧಾನದತ್ತವಾದ ಹಕ್ಕು ಎಂದು ನಾವು ಮತ್ತೆ ಮತ್ತೆ ಸಾರಿ ಹೇಳುವಂತಾಗಿದೆ.
ಕೇರಳ ಮಾತ್ರವಲ್ಲ ನೆರೆಯ ರಾಜ್ಯವಾದ ಕರ್ನಾಟಕವೂ ಕೇಂದ್ರದ ಈ ನಡೆಯನ್ನು ಖಂಡಿಸಬೇಕಿದೆ. ಈಗಾಗಲೇ ಕೇಂದ್ರ ನಮ್ಮ ಹಕ್ಕಿನ ಹಣವನ್ನು ನೀಡುವ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟಿಸಿದ ರಾಜ್ಯ ನಮ್ಮದು. 15ನೇ ಹಣಕಾಸು ಆಯೋಗವು ಜಾರಿಗೆ ಬಂದ ನಂತರ ಕರ್ನಾಟಕಕ್ಕೆ ಸಿಗುತ್ತಿದ್ದ ತೆರಿಗೆಯ ಪಾಲು ಗಮನಾರ್ಹವಾಗಿ ಕಡಿಮೆಯಾಗಿದೆ. ಕೇಂದ್ರಕ್ಕೆ ರಾಜ್ಯ ಸಲ್ಲಿಸುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಮರಳಿ ಪಡೆಯುವುದು ಬರೀ 13ರಿಂದ 15 ರೂಪಾಯಿಗಳು ಮಾತ್ರ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ. ಈ ವಿಚಾರದಲ್ಲಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಅಭಿಯಾನವನ್ನು ರಾಜ್ಯ ಸರ್ಕಾರ ನಡೆಸಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರು ಬೃಹತ್ ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ಆದರೆ ಸಿಗಬೇಕಾದ ಹಣದ ಪಾಲು ಮಾತ್ರ ಪೂರ್ಣವಾಗಿ ಸಿಕ್ಕಿಲ್ಲ.
ಇದನ್ನು ಓದಿದ್ದೀರಾ? ಜಿಎಸ್‌ಟಿ ಕಡಿತ | ಬಿಜೆಪಿ ಸಂಭ್ರಮಿಸುವಂಥಾದ್ದು ಏನಿದೆ?
ಇತ್ತ ಕೇರಳದ ಸ್ಥಿತಿಯೂ ಅದುವೇ ಆಗಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಹಣವನ್ನು ಬಿಡುಗಡೆ ಮಾಡುತ್ತಿದ್ದರೂ ರಾಜ್ಯ ಸರ್ಕಾರದ ಹಕ್ಕಿನ, ಪೂರ್ಣ ಪ್ರಮಾಣದ ಹಣವನ್ನು ನೀಡುತ್ತಿಲ್ಲ. ಕೇಂದ್ರವು ಇನ್ನೂ ಸಾವಿರಾರು ಕೋಟಿ ರೂಪಾಯಿಗಳ ಜಿಎಸ್‌ಟಿ ಪರಿಹಾರ ಮತ್ತು ಇತರ ಅನುದಾನಗಳನ್ನು ನೀಡಿಲ್ಲ ಎಂದು ಕೇರಳ ಸರ್ಕಾರ ಹೇಳಿದೆ. ಆದರೆ ಕೇಂದ್ರ ಮಾತ್ರ ರಾಜ್ಯಗಳು ಸರಿಯಾದ ಅಂಕಿಅಂಶಗಳೊಂದಿಗೆ ಎಜಿ (Accountant General) ಪ್ರಮಾಣಪತ್ರವನ್ನು ನೀಡಿದರೆ ಕೂಡಲೇ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೊಂಡಿದೆ. ಈ ಆರೋಪವನ್ನು ಕೇರಳ ಸರ್ಕಾರ ತಳ್ಳಿಹಾಕಿದಾಗ, ಕೇರಳ ಎಜಿ ಸಲ್ಲಿಸಿದೆ. ಆದರೆ ಎಜಿಯೊಂದಿಗೆ ಸಂಖ್ಯೆಗಳನ್ನು ಮರುಪರಿಶೀಲಿಸುವ (reconciliation) ಪ್ರಕ್ರಿಯೆ ಮುಗಿಯುವವರೆಗೆ ಹಣ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕೇಂದ್ರ ವರಸೆ ಬದಲಾಯಿಸಿತ್ತು. ಇನ್ನೊಂದೆಡೆ ಕರ್ನಾಟಕ ಎಜಿ ಪ್ರಮಾಣಪತ್ರಗಳನ್ನು ಸಲ್ಲಿಸುವಲ್ಲಿ ಇತರ ರಾಜ್ಯಗಳಿಗಿಂತ ಮುಂದಿದೆ ಎಂದು ಕೇಂದ್ರ ಸರ್ಕಾರವೇ ಶ್ಲಾಘಿಸಿದೆ. ಆದರೆ ಜಿಎಸ್‌ಟಿ ಪಾಲು ಮಾತ್ರ ತಡವಾಗಿಯೇ ತಲುಪುವುದು!
ಇವೆಲ್ಲವುದರ ನಡುವೆ ಅಠವಳೆ ಹೇಳಿಕೆ ಜನಸಾಮಾನ್ಯರನ್ನೂ ಚರ್ಚೆಗೆ ಸೆಳೆಯುವಂತದ್ದು. ರಾಜ್ಯ ಸರ್ಕಾರದ ಹಕ್ಕಿನ ಹಣವನ್ನು ನೀಡಬೇಕಾದರೆ ಕೇಂದ್ರದೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಳ್ಳಬೇಕೆಂದಾದರೆ ನಮ್ಮ ದೇಶ ಎತ್ತ ಸಾಗುತ್ತಿದೆ? ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು ಅಲ್ಲವೇ? ಈ ಸಂದರ್ಭದಲ್ಲಿ ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ತನ್ನ ಮಿತ್ರಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಬಿಹಾರ, ಆಂಧ್ರಪ್ರದೇಶಕ್ಕೆ ಹೆಚ್ಚು ಆದ್ಯತೆ ನೀಡಿದ್ದನ್ನೂ ನಾವು ನೆನಪಿಸಿಕೊಳ್ಳಬೇಕು. ಅಂದರೆ ಎನ್‌ಡಿಎ ಜತೆಯಾದರಷ್ಟೇ ಮಾತ್ರ ನಮ್ಮ ಹಕ್ಕಿನ ಹಣ ಸಿಗುವುದು ಎಂದು ಬಹಿರಂಗವಾಗಿ ಸಾರುತ್ತಿರುವುದೇ ಈ ಮೋದಿ ಸರ್ಕಾರ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




