ಯಾವುದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ನಡೆಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ವೇಳೆ, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುತ್ತೀರಾ, ಇಲ್ಲವಾ,’ ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಪ್ರಶ್ನೆಗೆ ಉತ್ತರಿಸಿರುವ ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ‘ಯಾವುದೇ ಸಮಯದಲ್ಲೂ ಚುನಾವಣೆ ನಡೆಸುಲು ಕೇಂದ್ರ ಸಿದ್ದವಿದೆ’ ಎಂದು ಹೇಳಿದ್ದಾರೆ.
“ಆ ರಾಜ್ಯದಲ್ಲಿ ಪಂಚಾಯತಿ ಮತ್ತು ಮುನ್ಸಿಪಲ್ ಚುನಾವಣೆಗಳು ನಡೆಯಲಿವೆ. ಆ ಚುನಾವಣೆಗಳ ಬಳಿಕ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ. ಯಾವ ಚುನಾವಣೆಯನ್ನು ಮೊದಲು ನಡೆಸಬೇಕು ಎಂದು ಚುನಾವಣಾ ಆಯೋಗ ನಿರ್ಧರಿಸುತ್ತದೆ. ಸದ್ಯ, ಅಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಗಣನೀಯವಾಗಿ ಪೂರ್ಣಗೊಂಡಿದೆ” ಎಂದು ಮೆಹ್ತಾ ವಿವರಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನವು ತಾತ್ಕಾಲಿಕವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲು ಕಾಲಮಿತಿ ಅಗತ್ಯವಿದ್ದು, ಅದಕ್ಕಾಗಿ ಚುನಾವಣೆ ನಡೆಸುವುದರಿಂದ ಕೇಂದ್ರವು ದೂರ ಉಳಿದಿದೆ” ಎಂದು ಅವರು ತಿಳಿಸಿದ್ದಾರೆ.




