ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಆರ್‌ಜೆಡಿ ನಾಯಕಿ ಪ್ರತಿಮಾ ಕುಶ್ವಾಹ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಆರ್‌ಜೆಡಿಯಲ್ಲಿ ತಳಮಟ್ಟದ ನಾಯಕರಿಗೆ ಗೌರವವಿಲ್ಲ ಎಂದು ಪ್ರತಿಮಾ ಹೇಳಿಕೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್, ಪ್ರತಿಮಾ ಅವರನ್ನು ಸ್ವಾಗತಿಸಿದ್ದು ಈ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜೈಸ್ವಾಲ್, “ಸ್ವಜನಪಕ್ಷಪಾತ ಮತ್ತು ವಂಶಪಾರಂಪರ್ಯ ರಾಜಕೀಯ ಆರ್‌ಜೆಡಿ ಮತ್ತು ಕಾಂಗ್ರೆಸ್‌ನಲ್ಲಿ ಪ್ರಚಲಿತವಾಗಿದೆ. ಅದರಿಂದಾಗಿ ನಾಯಕರು ಭ್ರಮನಿರಸನಗೊಂಡಿದ್ದಾರೆ. ಇದೇ ಕಾರಣಕ್ಕೆ ಅವರ ಹಲವು ನಾಯಕರು ಬಿಜೆಪಿಗೆ ಸೇರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಈ ಬಾರಿ ಎನ್‌ಡಿಎ ಬಿಹಾರದಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್‌ಗೆ ಸೇರ್ಪಡೆಯಾದ ಬಿಜೆಪಿ ಸಂಸದ
ಬಿಜೆಪಿಗೆ ಸೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಮಾ ಕುಶ್ವಾಹ, “ಲಾಲು ಪ್ರಸಾದ್ ಯಾದವ್ ನೇತೃತ್ವದಲ್ಲಿದ್ದ ಆರ್‌ಜೆಡಿ ಪಕ್ಷ ಇನ್ನು ಮುಂದೆ ಇರಲ್ಲ. ಪಕ್ಷದಲ್ಲಿ ತಳಮಟ್ಟದ ನಾಯಕರಿಗೆ ಗೌರವವಿಲ್ಲ. ಕುಟುಂಬ ರಾಜಕಾರಣದಿಂದಾಗಿ ಪಕ್ಷ ಆಳವಾಗಿ ಛಿದ್ರಗೊಂಡಿದೆ” ಎಂದು ಹೇಳಿದ್ದಾರೆ.
“ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಬಿಹಾರದ ಯುವಕರಿಗೆ ಉದ್ಯೋಗ ನೀಡಿದ್ದೇನೆ ಎಂದು ಹೇಳಿದ್ದರು. ಆರ್‌ಜೆಡಿ ತನ್ನ ಆಡಳಿತದಲ್ಲಿರುವ ಜನರಿಗೆ ನಿಜವಾಗಿಯೂ ಉದ್ಯೋಗ ನೀಡಿತ್ತು, ಆದರೆ ಅವರ ಭೂಮಿಯನ್ನು ಕಸಿದುಕೊಂಡು ಉದ್ಯೋಗ ನೀಡಿದೆ” ಎಂದು ಉದ್ಯೋಗಕ್ಕಾಗಿ ಭೂಮಿ ಹಗರಣದ ಉಲ್ಲೇಖ ಮಾಡಿದ್ದಾರೆ.
ಇನ್ನು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮಿತಿಯನ್ನು ಹೆಚ್ಚಿಸುವ ತೇಜಸ್ವಿ ಅವರ ಹೇಳಿಕೆಯನ್ನು ತಿರಸ್ಕರಿಸಿದ ಅವರು, “ತೇಜಸ್ವಿ ಅವರು ತಮ್ಮ ಕುಟುಂಬಕ್ಕೆ ಮಾತ್ರ ಮೀಸಲಾತಿ ನೀಡಿದ್ದಾರೆ. ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಿಗೆ ಎನ್‌ಡಿಎ ಸರ್ಕಾರವು ನಿಜವಾದ ಮೀಸಲಾತಿಯನ್ನು ಒದಗಿಸಿದೆ” ಎಂದರು.
ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್‌ನಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಅದಕ್ಕೂ ಮುನ್ನವೇ ಬಿಜೆಪಿ ವಿಪಕ್ಷಗಳ ನಾಯಕರುಗಳನ್ನು ತನ್ನೆಡೆ ಸೆಳೆದುಕೊಳ್ಳುವ ತಂತ್ರವನ್ನು ನಡೆಸುತ್ತಿದೆ. ಇನ್ನೊಂದೆಡೆ ಜೆಡಿಯು-ಬಿಜೆಪಿ ಮೈತ್ರಿಯಿಂದ ಅಸಮಾಧಾನಗೊಂಡ ಜೆಡಿಯುನ ಅಲ್ಪಸಂಖ್ಯಾತ ನಾಯಕರು ಜೆಡಿಯು ತೊರೆದಿದ್ದಾರೆ. ಇನ್ನು ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಿಹಾರದ ಬಿಜೆಪಿ ಸಂಸದ ಅಜಯ್ ಕುಮಾರ್ ನಿಶಾದ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.





