ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವು ಬಿಹಾರಕ್ಕಾಗಿ ವಿಶ್ವಬ್ಯಾಂಕ್‌ನಿಂದ 14,000 ಕೋಟಿ ರೂ. ಸಾಲ ಪಡೆದಿತ್ತು. ಆದರೆ, ಆ ಸಾಲವನ್ನು ವಿಧಾನಸಭಾ ಚುನಾವಣೆಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಚುನಾವನಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜೆಎಸ್‌ಪಿ ಆರೋಪಿಸಿದೆ.
ಇತ್ತೀಚೆಗಷ್ಟೇ ಮುಗಿದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 202 ಸ್ಥಾನಗಳಲ್ಲಿ ಭಾರೀ ಗೆಲುವು ಸಾಧಿಸಿದೆ. 36 ಸ್ಥಾನಗಳೊಂದಿಗೆ ಮಹಾಘಟಬಂಧನ್ ಕಳಪೆ ಪ್ರದರ್ಶನ ನೀಡಿದೆ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆಎಸ್‌ಪಿ ತನ್ನ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಇದೀಗ, ಜೆಡಿಎಸ್ ನಾಯಕರು ನಿತೀಶ್ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಎಸ್‌ಪಿ ರಾಷ್ಟ್ರಾಧ್ಯಕ್ಷ ಉದಯ್ ಸಿಂಗ್, “ಜೂನ್‌ನಿಂದ ಚುನಾವಣೆ ಘೋಷಣೆಯಾಗುವವರೆಗೆ ಸರ್ಕಾರ 40,000 ಕೋಟಿ ರೂ. ಸಾರ್ವಜನಿಕ ಹಣ ವೆಚ್ಚ ಮಾಡಿದೆ. ಅದರಲ್ಲಿ ವಿಶ್ವಬ್ಯಾಂಕ್‌ನಿಂದ ಪಡೆದ 14,000 ಕೋಟಿ ರೂ.ಗಳನ್ನು ದೇಣಿಗೆ ಮತ್ತು ಉಚಿತ ಕೊಡುಗೆಗಳ ಹೆಸರಿನಲ್ಲಿ ಮತ ಖರೀದಿಗೆ ಬಳಸಿಕೊಂಡಿದೆ” ಎಂದು ಆರೋಪಿಸಿದ್ದಾರೆ.
ಚುನಾವಣೆಗೂ ಕೆಲವ ದಿನಗಳ ಮುನ್ನ ಮಹಿಳೆಯರ ಖಾತೆಗೆ 10,000 ರೂ. ಜಮೆ ಮಾಡಿದ್ದರ ಬಗ್ಗೆ ಮಾತನಾಡಿದ ಅವರು, “ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾನಕ್ಕೂ ಮುನ್ನ ಹಣ ಜಮೆಯಾಗುತ್ತಿತ್ತು. ಇದು ಬಿಹಾರ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ” ಎಂದು ಹೇಳಿದ್ದಾರೆ.
ಸಾರ್ವಜನಿಕ ಹಣವನ್ನು ದುರುಪಯೋಗ ಮಾಡದೇ ಇದ್ದರೆ ಎನ್‌ಡಿಎ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು. “ಜನ ಸುರಾಜ್ ಪಕ್ಷವು 2,000 ರೂಪಾಯಿ ವೃದ್ಧಾಪ್ಯ ಪಿಂಚಣಿ ಭರವಸೆ ನೀಡಿದಾಗಲೇ ಸರಕಾರ ಈ ಮೊತ್ತವನ್ನು 700ರಿಂದ 1,100 ರೂಪಾಯಿಗೆ ಹೆಚ್ಚಿಸಿತು” ಎಂದು ಸಿಂಗ್ ಆರೋಪಿಸಿದ್ದಾರೆ.




