ಕೇರಳದ ಕೊಲ್ಲಂನ ಪಾರ್ಥಸಾರಥಿ ದೇವಸ್ಥಾನದ ಹೊರಗೆ ಆರ್‌ಎಸ್‌ಎಸ್ ಧ್ವಜ ಮತ್ತು ಆಪರೇಷನ್ ಸಿಂಧೂರ ಎಂದು ಬರೆದಿರುವ ಹೂವಿನ ರಂಗೋಲಿ(ಪೂಕ್ಕಲಂ) ಕಾಣಿಸಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸದ್ಯ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಬಿಜೆಪಿ ನಾಯಕರು ಇದು ಆಪರೇಷನ್ ಸಿಂಧೂರ ಬರವಣಿಗೆಯ ರಂಗೋಲಿಗೆ ಪ್ರಕರಣ ದಾಖಲಿಸಿರುವುದು ದೇಶದ್ರೋಹ ಎಂದು ರಾಜಕೀಯಕ್ಕಿಳಿದಿದ್ದಾರೆ. ಆದರೆ ಎಫ್‌ಐಆರ್ ದಾಖಲಿಸಿರುವುದು ರಂಗೋಲಿಯಲ್ಲಿ ಆರ್‌ಎಸ್‌ಎಸ್ ಧ್ವಜ ಮಾಡಿರುವುದಕ್ಕೆ ಎಂದು ಪೊಲೀಸರು ಈಗಾಗಲೇ ಸ್ಪಷ್ಟಣೆಯನ್ನು ನೀಡಿದ್ದಾರೆ.
ಎಫ್‌ಐಆರ್ ದಾಖಲಿಸಿರುವುದರ ವಿರುದ್ಧ ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದು ನಾಚಿಕೆಗೇಡಿನ ಮತ್ತು ದೇಶದ್ರೋಹದ ಕೃತ್ಯ’ ಎಂದು ರಾಜೀವ್ ಹೇಳಿದ್ದಾರೆ. ಆದರೆ ಎಫ್‌ಐಆರ್ ದಾಖಲಿಸಿರುವುದು ಆಪರೇಷನ್ ಸಿಂಧೂರ ಎಂಬ ರಂಗೋಲಿ ಸಂಬಂಧವಲ್ಲ, ನಿರ್ದಿಷ್ಟವಾಗಿ ಆರ್‌ಎಸ್‌ಎಸ್ ಧ್ವಜದ ಬಳಕೆ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಣೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ಪ್ರಕಾರ ‘ಆಪರೇಷನ್ ಸಿಂಧೂರ’ ಯಶಸ್ವಿ: ಅಭಿಯಾನ ಆರಂಭಿಸಿದ ಸ್ತ್ರೀದ್ವೇಷಿಗಳು!
ಕೇರಳದಲ್ಲಿ ಓಣಂ ಸಂದರ್ಭ ಹೂವಿನಿಂದಲೇ ರಂಗೋಲಿ ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ಈ ಹಿಂದೆ ರಾಜಕೀಯವಾಗಿ ಉದ್ವಿಗ್ನತೆ ಕಂಡುಬಂದಿದ್ದ ಕಾರಣ ಈ ಬಾರಿ ಪೂಕ್ಕಳಂನಲ್ಲಿ ಯಾವುದೇ ರಾಜಕೀಯ ಧ್ವಜಗಳು ಅಥವಾ ಚಿಹ್ನೆಗಳನ್ನು ಪ್ರದರ್ಶಿಸಬಾರದು ಎಂದು ಸಿಪಿಐ (ಎಂ) ಮತ್ತು ಬಿಜೆಪಿ ಕಾರ್ಯಕರ್ತರಿಗೆ ಈ ಹಿಂದೆಯೇ ನಿರ್ದೇಶನ ನೀಡಲಾಗಿತ್ತು. ಈ ಷರತ್ತಿಗೆ ಎರಡೂ ಕಡೆಯವರು ಒಪ್ಪಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಷರತ್ತಿಗೆ ಒಪ್ಪಿಕೊಂಡಿದ್ದರೂ ಹಬ್ಬದ ಸಮಯದಲ್ಲಿ ಆರ್‌ಎಸ್‌ಎಸ್ ಧ್ವಜದ ರಂಗೋಲಿ ಬಿಡಿಸಲಾಗಿದೆ. ಒಪ್ಪಂದವನ್ನು ಉಲ್ಲಂಘಿಸಿ ಉದ್ವಿಗ್ನತೆಗೆ ಕಾರಣ ಉಂಟು ಮಾಡಿದ ಕಾರಣಕ್ಕಾಗಿ 27 ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಬಿಜೆಪಿ ಮುಖಂಡರು ಈ ವಿಚಾರವನ್ನು ತಿರುಚುತ್ತಿದ್ದು ಆಪರೇಷನ್ ಸಿಂಧೂರ ಎಂದು ರಂಗೋಲಿ ಮಾಡಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜೀವ್ ಚಂದ್ರಶೇಖರ್, “ಆಪರೇಷನ್ ಸಿಂಧೂರ ನಮ್ಮ ಹೆಮ್ಮೆ. ಇದು ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಧೈರ್ಯದ ಸಂಕೇತ. ಎಫ್‌ಐಆರ್ ದಾಖಲಿಸಿ ಕೇರಳ ಪೊಲೀಸರು ಈ ದಾಳಿಯಲ್ಲಿ ಬಲಿಯಾದ 26 ಮಂದಿಗೆ ಮತ್ತು ಅವರ ಕುಟುಂಬಕ್ಕೆ, ಪ್ರತಿಯೊಬ್ಬ ಯೋಧರಿಗೂ ಅವಮಾನ ಮಾಡಿದ್ದಾರೆ” ಎಂದು ದೂರಿದ್ದಾರೆ.
“ಕೇರಳವು ಜಮಾತ್-ಇ-ಇಸ್ಲಾಮಿ ಅಥವಾ ಪಾಕಿಸ್ತಾನದಿಂದ ಆಳಲ್ಪಡುವ ಭೂಮಿಯಲ್ಲ ಮತ್ತು ಎಂದಿಗೂ ಆಗುವುದಿಲ್ಲ. ಇದು ಭಾರತ ಎಂಬುದನ್ನು ಕೇರಳ ಪೊಲೀಸರು ಮರೆಯಬಾರದು. ಅವರಿಗೆ ಮತ್ತು ಮುಖ್ಯಮಂತ್ರಿ/ಗೃಹ ಸಚಿವ ಪಿಣರಾಯಿ ವಿಜಯನ್ ಜಿ ಅವರಿಗೆ, ಈ ನಾಚಿಕೆಗೇಡಿನ ಮತ್ತು ದೇಶದ್ರೋಹದ ಎಫ್‌ಐಆರ್ ಅನ್ನು ಹಿಂತೆಗೆದುಕೊಳ್ಳಿ ಎಂದು ನಾನು ಹೇಳುತ್ತೇನೆ. ಈಗಲೇ!” ಅವರು ಹೇಳಿದರು.
ಅಧಿಕಾರಿಗಳು ಎಫ್‌ಐಆರ್ ಬಗ್ಗೆ ಸ್ಪಷ್ಟಣೆ ನೀಡಿದರೂ ತಪ್ಪು ಮಾಹಿತಿಯನ್ನು ಬಿಜೆಪಿ ನಾಯಕರುಗಳು ಹಬ್ಬುತ್ತಿದ್ದಾರೆ.





