ಜಮ್ಮುವಿನ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ನೀಟ್ ಪಟ್ಟಿಯ ಮೆರಿಟ್ ಆಧಾರದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿ ಅಧಿಕವಾಗಿದೆ. ಈ ವಿಚಾರದಲ್ಲಿಯೂ ರಾಜಕೀಯಕ್ಕೆ ಇಳಿದಿರುವ ಆರ್‌ಎಸ್‌ಎಸ್, ಬಜರಂಗದಳ, ಬಿಜೆಪಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬೇಕು ಎಂದು ಹೇಳುತ್ತಿದೆ.
ಶಾಲಾ-ಕಾಲೇಜು, ಆಸ್ಪತ್ರೆ, ಉದ್ಯಾನ ಹೀಗೆ ಎಲ್ಲೆಂದರಲ್ಲಿ ಕೋಮುವಾದಿ ಬಣ್ಣವನ್ನು ಎರಚಿ ಸಾಮರಸ್ಯ ಕದಡುವ ಆರ್‌ಎಸ್‌ಎಸ್ ಇದೀಗ ಜಮ್ಮುವಿನ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ಕೋಮು ರಾಜಕೀಯಕ್ಕೆ ಇಳಿದಿದೆ. ಶಿಕ್ಷಣ ಸಂಸ್ಥೆಯು ನೀಟ್ ರ‍್ಯಾಂಕಿಂಗ್ ಆಧಾರದಲ್ಲಿ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಪ್ರವೇಶ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಶೇ.90ರಷ್ಟು ಕಾಶ್ಮೀರಕ್ಕೆ ಸೇರಿದ ಮುಸ್ಲಿಮರು ಇದ್ದಾರೆ. ಆದರೆ ನೀಟ್ ಪಟ್ಟಿ ಬದಿಗೊತ್ತಿ, ಹಿಂದೂಗಳಿಗೆ ದಾಖಲಾತಿ ನೀಡಬೇಕು ಎಂದು ಆರ್‌ಎಸ್‌ಎಸ್‌ಗೆ ಸೇರಿದ ಸಂಘಟನೆಗಳು ಜಮ್ಮುವಿನಲ್ಲಿ ಪ್ರತಿಭಟನೆಗೆ ಇಳಿದಿದೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳ ನಡೆಸಿದ ಪ್ರತಿಭಟನೆಯನ್ನು ಬೆಂಬಲಿಸಿದ ಉಧಂಪುರದ ಬಿಜೆಪಿ ಶಾಸಕ ಆರ್‌ಎಸ್ ಪಠಾನಿಯಾ, “ವೈಷ್ಣೋದೇವಿ ದೇಗುಲಕ್ಕೆ ನೀಡುವ ದೇಣಿಗೆಗಳಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಆದರೆ ಇಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಪ್ರಾಬಲ್ಯವಿದೆ. ಹಿಂದೂಗಳಿಗೆ ಇಲ್ಲಿ ಮೀಸಲಾತಿ ನೀಡಬೇಕು” ಎಂದು ವಾದಿಸುತ್ತಾ ಹಿಂದೂ-ಮುಸ್ಲಿಂ ರಾಜಕೀಯ ಮುಂದುವರೆಸಿದ್ದಾರೆ. ಆದರೆ ವಾಸ್ತವದಲ್ಲಿ ಈ ವೈದ್ಯಕೀಯ ಕಾಲೇಜನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ವರ್ಗೀಕರಿಸಿಯೇ ಇಲ್ಲ!
ಇದನ್ನು ಓದಿದ್ದೀರಾ? ಬಿಜೆಪಿ-ಆರ್‌ಎಸ್‌ಎಸ್‌ನ ‘ಲೆಕ್ಕಾಚಾರದ ರಾಜಕೀಯ ಯೋಜನೆ’ಯೇ ಎಸ್‌ಐಆರ್: ಸಿಪಿಎಂ ಆರೋಪ
ʼಅಲ್ಪಸಂಖ್ಯಾತ ಸಂಸ್ಥೆʼ ಎಂದು ವರ್ಗೀಕರಿಸಿಲ್ಲ
ದೇಶದಲ್ಲಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಸಂವಿಧಾನಾತ್ಮಕವಾಗಿ ವಿಶೇಷ ಹಕ್ಕುಗಳನ್ನು ಹೊಂದಿದೆ. ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸಂವಿಧಾನದ ವಿಧಿ 30(1) ಅವಕಾಶ ನೀಡುತ್ತದೆ. ಈ ಸಂಸ್ಥೆಗಳು ತಮ್ಮದೇ ಆದ ಆಡಳಿತ ಮಂಡಳಿ, ಸಿಬ್ಬಂದಿ ನೇಮಕಾತಿ ಮತ್ತು ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ನಿರ್ಧರಿಸುವ ಸ್ವಾಯತತ್ತೆ ಹೊಂದಿರುತ್ತವೆ. ಹಾಗೆಯೇ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿ ಸಾಮಾನ್ಯ ಮೀಸಲಾತಿ ನೀತಿಗಳು ಅನ್ವಯಿಸುವುದಿಲ್ಲ. ಆದರೆ ಈ ಸಂಸ್ಥೆಗಳು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬಹುದು.
ಈ ಮಾನದಂಡಗಳಡಿಯಲ್ಲಿ ನೋಡಿದಾಗ ಜಮ್ಮುವಿನ ವೈಷ್ಣೋದೇವಿ ವೈದ್ಯಕೀಯ ಕಾಲೇಜು ಈವರೆಗೂ ಅಲ್ಪಸಂಖ್ಯಾತ ಸಂಸ್ಥೆ ಎಂದು ವರ್ಗೀಕರಿಸಲ್ಪಟ್ಟಿಲ್ಲ. ಆದರೂ ತಮ್ಮ ರಾಜಕೀಯದ ಆಟ ಬಿಡದ ಬಿಜೆಪಿ, ಆರ್‌ಎಸ್‌ಎಸ್ ಅಲ್ಪಸಂಖ್ಯಾತ ಸಂಸ್ಥೆಯಲ್ಲದ ಸಂಸ್ಥೆಯಲ್ಲಿ ಹಿಂದೂಗಳಿಗೆ ಮೀಸಲಾತಿ ಕೋರುತ್ತಿದೆ! ವಿಎಚ್‌ಪಿ ಮತ್ತು ಬಜರಂಗ ದಳವು ಕಾಟ್ರಾ ಮೂಲದ ಸಂಸ್ಥೆಯ ಹೊರಗೆ ಪ್ರತಿಭಟನೆ ನಡೆಸಿದ್ದು ಮಾತ್ರವಲ್ಲದೇ ವೈಷ್ಣೋದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ರತಿಕೃತಿಯನ್ನೂ ಸುಟ್ಟುಹಾಕಿವೆ.
ವಿವಾದ ಆರಂಭವಾಗಿದ್ದು ಯಾವಾಗ?
ವೈಷ್ಣೋದೇವಿ ವೈದ್ಯಕೀಯ ಸಂಸ್ಥೆಗೆ 50 ಅಭ್ಯರ್ಥಿಗಳ ಪಟ್ಟಿಯನ್ನು ಜಮ್ಮು ಮತ್ತು ಕಾಶ್ಮೀರ ವೃತ್ತಿಪರ ಪ್ರವೇಶ ಪರೀಕ್ಷೆಗಳ ಮಂಡಳಿ (ಜೆಕೆಬಿಒಪಿಇಇ) ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದಾದ ಬೆನ್ನಲ್ಲೇ ವಿಎಚ್‌ಪಿ ಈ ಅಭ್ಯರ್ಥಿಗಳ ಪಟ್ಟಿ ರದ್ದುಗೊಳಿಸಬೇಕು ಹೊಸದಾಗಿ ದಾಖಲಾತಿ ಪ್ರಕ್ರಿಯೆ ನಡೆಸಬೇಕು ಎಂಬ ಆಗ್ರಹ ಮಾಡುತ್ತಿದೆ. ಪಟ್ಟಿಯಲ್ಲಿರುವ 42 ವಿದ್ಯಾರ್ಥಿಗಳು ಕಾಶ್ಮೀರದವರಾಗಿದ್ದು ಉಳಿದ ಎಂಟು ಮಂದಿ ಜಮ್ಮುವಿನ ವಿದ್ಯಾರ್ಥಿಗಳಾಗಿದ್ದಾರೆ. ಈ ಪೈಕಿ ಕಾಶ್ಮೀರದ 36 ವಿದ್ಯಾರ್ಥಿಗಳು ಮತ್ತು ಜಮ್ಮುವಿನ ಮೂವರು ವಿದ್ಯಾರ್ಥಿಗಳು ಈಗಾಗಲೇ ದಾಖಲಾಗಿದ್ದಾರೆ. ಇದಾದ ಬಳಿಕ ವಿವಾದ ಆರಂಭವಾಗಿದೆ.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್ ದೇಶಕ್ಕೆ ಮಾತ್ರವಲ್ಲ, ಬಿಜೆಪಿಗರಿಗೂ ಮಾರಕ: ಬಿ.ಕೆ ಹರಿಪ್ರಸಾದ್
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಕಾಶ್ಮೀರದ ಹಿರಿಯ ಪ್ರತಕರ್ತ, ಸಾಮಾಜಿಕ ಹೋರಾಟಗಾರ ಮೀರ್ ಶಹೀದ್ ಸಲೀಮ್, “ನಾವು ಶಿಕ್ಷಣ ಸಂಸ್ಥೆಗಳನ್ನು ಧಾರ್ಮಿಕ ಆಧಾರದಲ್ಲಿ ವಿಭಜಿಸಬಾರದು. ಮೆರಿಟ್ ಆಧಾರದಲ್ಲಿಯೇ ದಾಖಲಾತಿ ನಡೆದಿದೆ. ಜಮ್ಮುವಿನ ರಜೌರಿಯಲ್ಲಿರುವ ಬಾಬಾ ಗುಲಾಮ್ ಶಾ ಬಾದ್‌ಶಾ ವಿಶ್ವವಿದ್ಯಾನಿಲಯ ಸೇರಿದಂತೆ ಕೆಲವು ವಕ್ಫ್ ಮಂಡಳಿಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂಗಳಿಗೂ ಪ್ರವೇಶವಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಸ್ಥಳೀಯ ಅಧಿಕಾರಿಗಳು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡುವ ಮಾಹಿತಿ ಪ್ರಕಾರ ರಾಷ್ಟ್ರೀಯ ವೈದ್ಯಕೀಯ ಮಂಡಳಿಯ (ಎನ್‌ಎಂಸಿ) ಮಾರ್ಗಸೂಚಿಗಳ ಪ್ರಕಾರವಾಗಿಯೇ ದಾಖಲಾತಿ ನಡೆಸಲಾಗುತ್ತಿದೆ. ಎನ್‌ಎಂಸಿ ಮಾರ್ಗಸೂಚಿಯಂತೆ ಜಮ್ಮು ಮತ್ತು ಕಾಶ್ಮೀರದ 13 ವೈದ್ಯಕೀಯ ಕಾಲೇಜುಗಳಲ್ಲಿರುವ ಎಲ್ಲಾ 1,685 ಸೀಟುಗಳಿಗೆ ನೀಟ್ ಪಟ್ಟಿಯ ಪ್ರಕಾರ ಪ್ರವೇಶ ಕಲ್ಪಿಸಬೇಕು. ವೈಷ್ಣೋದೇವಿ ಕಾಲೇಜಿಗೆ ದಾಖಲಾತಿ ತಡವಾಗಿ ಪ್ರಾರಂಭವಾಗಿದ್ದು, ಮೂರನೇ ಸುತ್ತಿನ ಕೌನ್ಸೆಲಿಂಗ್ ನಂತರ ಮೊದಲ ಪ್ರವೇಶ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಜೆಕೆಬಿಒಪಿಇಇ 13 ವೈದ್ಯಕೀಯ ಕಾಲೇಜುಗಳಿಗೆ 5,865 ಕೇಂದ್ರಾಡಳಿತ ಪ್ರದೇಶದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿತ್ತು. ಹಾಗೆಯೇ 2000 ಜನರನ್ನು ಕೌನ್ಸೆಲಿಂಗ್‌ಗೆ ಆಹ್ವಾನಿಸಿತ್ತು. ಈ ಪೈಕಿ ಅರ್ಹತೆ ಪಡೆದವರು ಶೇ.70ರಷ್ಟು ಮುಸ್ಲಿಮರಾಗಿದ್ದಾರೆ. ಇನ್ನೊಂದೆಡೆ ಜಮ್ಮುವಿನ 87 ಅಭ್ಯರ್ಥಿಗಳು ಕಾಶ್ಮೀರದ ಐದು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಈ ಪೈಕಿ ಹೆಚ್ಚಿನವು ಎಸ್‌ಸಿ/ಎಸ್‌ಟಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗ, ಗಡಿರೇಖೆಯ ನಿವಾಸಿಗಳಿಗೆ ಮೀಸಲಾದ ಸೀಟುಗಳಾಗಿವೆ.
ಅಷ್ಟಕ್ಕೂ ಕಾಶ್ಮೀರದ ವಿದ್ಯಾರ್ಥಿಗಳು ಜಮ್ಮುವಿನಲ್ಲಿ ಶಿಕ್ಷಣ ಪಡೆಯುತ್ತಿರುವುದು ಇದು ಮೊದಲೇನಲ್ಲ. ಹಲವು ವರ್ಷಗಳಿಂದ ಜಮ್ಮು ಪ್ರದೇಶದ ವಿವಿಧ ಶಿಕ್ಷಣ ಸಂಸ್ಥೆಗಳ ಸುಮಾರು 900 ಸೀಟುಗಳಲ್ಲಿ ಕಾಶ್ಮೀರದ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಮಾನ್ಯವಾಗಿಯೇ ಜಮ್ಮುವಿನ ವಿದ್ಯಾರ್ಥಿಗಳು ತುಂಬಿರುತ್ತಾರೆ. ಆದರೆ ಈ ವಿಚಾರದಲ್ಲಿ ಆರ್‌ಎಸ್‌ಎಸ್ ಈಗ ತಕರಾರು ಎತ್ತಲೂ ಶುರು ಮಾಡಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿಗೆ ಇಳಿದಿದ್ದಾರೆ. ಅಷ್ಟಕ್ಕೂ ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯೇ ಈವರೆಗೆ ತನ್ನ ಶಿಕ್ಷಣ ಸಂಸ್ಥೆಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಅರ್ಜಿ ಸಲ್ಲಿಸಿಲ್ಲ ಎಂಬುದು ವಾಸ್ತವ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಡಿಡಿಸಿ ಸುಚೇತ್‌ಗಢ್ ತರಣ್‌ಜಿತ್ ಸಿಂಗ್ ಟೋನಿ ಹೇಳುವಂತೆ ಇದರಲ್ಲಿ ಇರುವುದು ಬಿಜೆಪಿಯ ತಪ್ಪು. ಕೇಂದ್ರದ ಬಿಜೆಪಿ ಸರ್ಕಾರ ವೈಷ್ಣೋ ದೇವಿ ವೈದ್ಯಕೀಯ ಕಾಲೇಜಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಲ್ಲಿ ವಿಫಲವಾಗಿದೆ. ಆದರೆ ಈಗ ನೀಟ್ ಆಧಾರದಲ್ಲಿ ನೇಮಕಾತಿ ನಡೆದಾಗ ಅದೇ ಬಿಜೆಪಿಯ ಅಂಗಸಂಸ್ಥೆಗಳು ಪ್ರತಿಭಟನೆ ನಾಟಕವಾಡುತ್ತಿದೆ.
“ಈ ವಿಷಯವನ್ನು ಕೋಮುವಾದೀಕರಣಗೊಳಿಸಬಾರದು. ಇದರಲ್ಲಿ ಸಂಪೂರ್ಣ ಜವಾಬ್ದಾರಿ ಬಿಜೆಪಿಯ ಮೇಲಿದೆ. ದೇವಾಲಯ ನಡೆಸುವ ವೈದ್ಯಕೀಯ ಕಾಲೇಜಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಇದು ಹಿಂದೂಗಳು, ಮುಸ್ಲಿಮರು ಅಥವಾ ಸಿಖ್ಖರ ವಿಚಾರವಲ್ಲ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಂಪೂರ್ಣ ವೈಫಲ್ಯ. ಕೇಂದ್ರ ಸರ್ಕಾರ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ” ಎನ್ನುತ್ತಾರೆ ಟೋನಿ.
ಅಷ್ಟಕ್ಕೂ ಸಾಮಾನ್ಯವಾಗಿ ಇಡೀ ದೇಶದಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ನೀಟ್ ಪರೀಕ್ಷೆಯ ಆಧಾರದಲ್ಲಿ ನಡೆಯುವುದು. ಅದರಂತೆ ಜಮ್ಮುವಿನ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿಯೂ ದಾಖಲಾತಿ ನಡೆದಿದೆ. ಆದರೆ ಬಿಜೆಪಿ ಮಾತ್ರ ಇಲ್ಲೂ ರಾಜಕೀಯಕ್ಕೆ ಇಳಿದು ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುತ್ತಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




