ಜರ್ನಲಿಸ್ಟ್ ಜಂಗ್ಲಿ ‘ಪ್ರಜ್ವಲ್ ರೇವಣ್ಣ ಜರ್ಮನಿಗೆ ಹಾರಿದ್ಯಾಕೆ’ ಎಂಬ ಮಿಲಿಯನ್ ಡಾಲರ್ ಪ್ರಶ್ನೆಯ ಬೆನ್ನು ಹತ್ತಿದ್ದ. ಗಳಿಗೆಗೊಂದು ಗುಟ್ಕಾ ಪಾಕಿಟ್ ಹರಿದು ಬಾಯಿಗೆ ತುಂಬ್ತಿದ್ದ. ತಲೆ ಬಿಸಿ ಮಾಡ್ಕೊಂಡು ತಿರುಗಾಡ್ತಿದ್ದ. ಕೊನೆಗೊಂದು ಶಾರ್ಟ್ ಲಿಸ್ಟ್ ಮಾಡ್ಕೊಂಡು, ಒಂದೊಂದಾಗಿ ಹುಡುಕ್ಕೊಂಡ್ ಹೋದ.
ಮೊದಲಿಗೆ, ದೊಡ್ಡಗೌಡರ ಮನೆ ಸುತ್ತ ಪ್ರದಕ್ಷಿಣೆ ಹಾಕಿದ. ನಿಂಬೆಹಣ್ಣು, ಕುಂಕುಮ, ಬಾಳೆಹಣ್ಣಿನ ಸಿಪ್ಪೆ ಸಿಕ್ತು. ಸಿಟ್ಟಾದ್ರು ತೋರಿಸಿಕೊಳ್ಳದ ಜಂಗ್ಲಿ ಸಣ್ಣಗೌಡರ ಮನೆ ಕಡೆ ಹೋದ. ಯಾವಾಗಲೂ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮನೆ ಬಿಕೋ ಎನ್ನುತ್ತಿತ್ತು. ಗೇಟ್‌ನಲ್ಲಿ ನಿಂತಿದ್ದ ಸೆಕ್ಯುರಿಟಿ ಗಾರ್ಡ್, ‘ಬಾಯ್ಬುಡ್ಬೇಡ ಅಂದವ್ರೆ’ ಎಂದ. ಪಾಪದವನ ಹೊಟ್ಟೆ ಮೇಲೆ ಹೊಡೆಯೋದ್ಯಾಕೆ ಎಂದು ಅಲ್ಲಿಂದ ಕಾಲು ಕಿತ್ತ ಜಂಗ್ಲಿ.
ತಲೆಯಲ್ಲಿ ಕನಕಪುರ ತೇಲಿ ಹೋಯಿತು. ಗಾಡೀನ ಸದಾಶಿವನಗರದ ಕಡೆಗೆ ತಿರುಗಿಸಿದ. ಪೆಟ್ರೋಲ್ ಬೇರೆ ಕಡಿಮೆ ಇದೆ, ಜೇಬಲ್ಲಿ ಪಾಕಿಟ್‌ಗಳು ಖಾಲಿಯಾಗ್ತಿವೆ, ಅದರೂ ಎದೆಗುಂದಲಿಲ್ಲ ಜಂಗ್ಲಿ. ಕನಕಪುರದ ಕಲಿಗಳ ಬಗ್ಗೆ ಏನೋ ಭರವಸೆ, ಉತ್ತರ ಪಡೆಯಲೇಬೇಕೆಂಬ ಛಲ, ಹೋದ. ಆದರೆ ಅಲ್ಲೂ ಉತ್ತರ ಸಿಗಲಿಲ್ಲ.
ಕೊನೆಗೆ, ‘ಯಾರೇನು ಹೇಳದು, ನಮ್ಮ ಮೀಡಿಯಾದವರಿಗೆ ಗೊತ್ತಿಲ್ದೆ ಇರೋದು ಏನೈತೆ’ ಎಂದು, ತನ್ನ ಹಳೇ ಗೆಳೆಯರನ್ನು ಎಡತಾಕಿದ. ಅವರು, ‘ಲೇಯ್, ಪ್ರಜ್ವಲ್ ನಮ್ಮೋನಲ್ವೇನೋ, ಅವನ ವಿರುದ್ಧ ನಾವ್ ಮಾಡಕಾಯ್ತದೇನೋ, ನೋಡು ಪೆನ್ ಡ್ರೈವ್ ಎಲ್ಲ ಇಲ್ಲೇ ಅವೆ’ ಎಂದು ಜೇಬಿಗೆ ಕೈ ಹಾಕಿದರು. ಜಂಗ್ಲಿಗೆ ಕೊಂಚ ಕಸಿವಿಸಿಯಾಗಿ, ‘ನಾನ್ ರಾಂಗ್ ರೂಟ್‌ನಲ್ಲಿದ್ದೀನಾ’ ಎಂದು ತನಗೆ ತಾನೇ ಪ್ರಶ್ನಿಸಿಕೊಂಡ. ‘ಇಲ್ಲ, ಇವರ್‍ನೆಲ್ಲ ಹಿಂದಾಕಿ, ಸ್ಕೂಪ್ ಸ್ಟೋರಿ ಹೊಡಿಲೇಬೇಕು’ ಎಂದು ಅವರನ್ನು ಹಿಂದಾಕಿ ಮುಂದೋದ.
ತಕ್ಷಣ ರಾಜಗುರು ದ್ವಾರಕಾನಾಥ್ ಗುರೂಜಿ ನೆನಪಾದರು. ಗುರೂಜಿಯತ್ರ ಭಾರೀ ಜನ.
‘ಅಪಾಯಿಂಟ್ಮೆಂಟ್ ಇದೆಯಾ’ ಎಂದ ರಿಸಪ್ಷನಿಸ್ಟ್.
‘ಜಂಗ್ಲಿ ಅಂತೇಳು’ ಎಂದು ಸ್ಟೈಲಾಗಿ ನಿಂತ.
‘ಸಾರ್… ಒಳಗೋಗಿ’ ಎಂದ ರಿಸಪ್ಷನಿಸ್ಟ್.
‘ಬಾ ಜಂಗ್ಲಿ, ಭಾರೀ ದಿನಗಳಾಯ್ತು, ಇತ್ತ ಕಡೆ ಬರದೇ…’ ಎಂದು ವಿಚಾರಿಸಿದರು ಗುರೂಜಿ.
‘ಗುರೂಜಿ, ಸಮಸ್ಯೆ ಆಗೈತೆ’ ಎಂದ ಜಂಗ್ಲಿ.
‘ಇಲ್ಲಿಗ್ ಬರೋರೆಲ್ಲ ಸಮಸ್ಯೆ ಹೊತ್ಕೊಂಡೆ ಬರೋದು. ಅದರಲ್ಲೇನು ವಿಶೇಷ. ನಿಮ್ ಡಿಸಿಎಂ ನನ್ ಮಾತಿಲ್ದೆ ಮೂರ್ ಹೆಜ್ಜೆ ಇಡಲ್ಲ, ಅದೆಂತ ಸಮಸ್ಯೆ ಹೇಳಯ್ಯ’ ಎಂದರು ಗುರೂಜಿ.
‘ಅದೇ ಗುರೂಜಿ, ಪ್ರಜ್ವಲ್ ರೇವಣ್ಣನ ಕೇಸು…’ ಎಂದ ಜಂಗ್ಲಿ.
‘ಅಯ್ಯೋ, ಅದ್ಕೆಲ್ಲ ನನ್ನತ್ರ ಬರಲ್ಲ ಅವ್ರು. ಕೇಸಾದ್ಮೇಲೆ ಬರ್ತರೆ’ ಎಂದರು.
‘ನಿಮ್ಮತ್ರ ಬಂದಿದ್ರಾ ಗುರೂಜಿ, ಎಲ್ಲಿದಾರೆ…?’ ಎಂದು ದಾವಂತಕ್ಕೆ ಬಿದ್ದ ಜಂಗ್ಲಿ.
‘ಸಮಾಧಾನ, ಇನ್ನೂ ಬಂದಿಲ್ಲ, ಬರ್ತರೆ… ಎಲ್ಲೋಗ್ತರೆ’ ಎಂದರು ಗುರೂಜಿ.
‘ನೀವೊಳ್ಳೆ… ಅವರ್ ಆಗ್ಲೇ ಹೋಗಾಗಿದೆ, ಜರ್ಮನಿಗೆ. ಅದ್ನ ಕೇಳಕ್ಕೆ ನಿಮ್ಮತ್ರ ಬಂದಿದ್ದು’ ಎಂದ ಜಂಗ್ಲಿ.
‘ನೀನೇ ಹೇಳ್ದಲ್ಲ ಜರ್ಮನಿಗೆ ಅಂತ… ಇನ್ನೇನು?’ ಎಂದರು ಗುರೂಜಿ.
‘ಅದೇ ಗುರೂಜಿ, ಪ್ರಜ್ವಲ್ ರೇವಣ್ಣ ಜರ್ಮನಿಗೇ ಯಾಕ್ ಹೋದ ಅಂತ?’ ಎಂದ ಜಂಗ್ಲಿ.
‘ಅಯ್ಯೋ ಮಂಕೆ, ಅಷ್ಟೂ ಗೊತ್ತಾಗ್ಲಿಲ್ವಾ ನಿಂಗೆ, ಜೆಡಿಎಸ್ ಈಗ ಯಾರ ಜೊತೆ ಮೈತ್ರಿ ಮಾಡ್ಕೊಂಡಿದೆ?’ ಎಂದು ಪ್ರಶ್ನೆ ಇಟ್ಟರು ಗುರೂಜಿ.
‘ಬಿಜೆಪಿ ಜೊತೆಗೆ’
‘ಬಿಜೆಪಿ ಮೂಲ ಯಾವ್ದು?’
‘ಆರೆಸ್ಸೆಸ್ಸು’
‘ಆರೆಸ್ಸೆಸ್ ಮೂಲ ಯಾವ್ದು?’
‘ಗೊತ್ತಾಯ್ತು ಗುರುಗಳೇ… ಆರೆಸ್ಸೆಸ್, ಫ್ಯಾಶಿಸ್ಟು, ನಾಜಿಯಿಸ್ಟ್, ಹಿಟ್ಲರ್, ಜರ್ಮನಿ… ಗೊತ್ತಾಯ್ತು, ಗುರುಗಳೇ ಎಂಥ ಗುರುಗಳು ನೀವು, ಎಲ್ಲಿಟ್ಟಿದ್ರಿ ಇದಾ?’ ಎಂದು ಅಡ್ಡಬಿದ್ದ ಜಂಗ್ಲಿ.
‘ಇನ್ನೇನು ಸಮಸ್ಯೆ’ ಎಂದು ಗುರುಗಳು ಕಣ್ಸನ್ನೆಯಲ್ಲಿಯೇ ಕೇಳಿದರು.
‘ಏನಿಲ್ಲ, ಜರ್ಮನಿಗೆ ಕಳ್ಸಿದ್ಯಾರು ಅಂತ ಕೇಳೋನಿದ್ದೆ, ಗೊತ್ತಾಯ್ತು ಬುಡಿ’ ಎಂದ ಜಂಗ್ಲಿ.
‘ಜರ್ಮನಿಗಿಂತ ಸೇಫ್ ಪ್ಲೇಸ್ ಇನ್ಯಾವುದಿದೆ, ಹಿಟ್ಲರ್ ಎಲ್ಲಿ ಬಚ್ಚಿಟ್ಕೊಂಡಿದ್ದು, ನೀವೆಲ್ಲ ಹ್ಯಂಗೋ ಜರ್ನಲಿಸ್ಟ್ ಆದ್ರಿ’ ಎಂದು ಜಂಗ್ಲಿಯತ್ತ ಸಿಟ್ಟಿನ ಉರಿಗಣ್ಣು ಬಿಟ್ಟರು.
ಅದಕ್ಕೂ ಮುಂಚೆಯೇ ಜರ್ನಲಿಸ್ಟ್ ಜಂಗ್ಲಿ ರಸ್ತೆಯಲ್ಲಿದ್ದ. ಗುರೂಜಿಯವರ ಉರಿಗಣ್ಣಿಗೆ ಬಿದ್ದು ಬೂದಿಯಾಗುವುದರಿಂದ ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದ.

ಲೇಖಕ, ಪತ್ರಕರ್ತ




