ಜೆಡಿಎಸ್‌ನಿಂದ ರಾಜಕೀಯ ವ್ಯವಹಾರಗಳ ಸಮಿತಿ, ಕೋರ್ ಕಮಿಟಿ, ಶಿಸ್ತುಪಾಲನಾ ಸಮಿತಿ ಹಾಗೂ ಪ್ರಚಾರ ಸಮಿತಿ ರಚನೆಯಾಗಿದ್ದು, ಸಮಿತಿಗಳಿಗೆಲ್ಲ ನೂತನ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಲಾಗಿದೆ. ಆದರೆ, ಪಕ್ಷದ ಹಿರಿಯ ಮುಖಂಡ ಜಿ ಟಿ ದೇವೇಗೌಡರನ್ನು ಎಲ್ಲ ಸಮಿತಿಗಳಿಂದಲೂ ಹೊರಗಿಡಲಾಗಿದೆ.
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಅವರು ರಾಜಕೀಯ ವ್ಯವಹಾರಗಳ ಸಮಿತಿ ರಚಿಸಿ, ಇದಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಇದೇ ಜೆಡಿಎಸ್‌ನ ಕೋರ್ ಕಮಿಟಿ, ಶಿಸ್ತುಪಾಲನಾ ಸಮಿತಿ ಹಾಗೂ ಪ್ರಚಾರ ಸಮಿತಿಗೂ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಆದೇಶಿಸಿದ್ದಾರೆ.
ಜೆಡಿಎಸ್ ಕೋರ್ ಕಮಿಟಿ ಸಮಿತಿಯ ಅಧ್ಯಕ್ಷರಾಗಿ ಮಾಜಿ ಉಪಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ವೈ ಎಸ್ ವಿ ದತ್ತ ಅವರನ್ನು ನೇಮಿಸಲಾಗಿದೆ. ಹಾಗೂ ಶಿಸ್ತುಪಾಲನಾ ಸಮಿತಿ ಅಧ್ಯಕರಾಗಿ ಮಾಜಿ ಸಚಿವ ಡಿ. ನಾಗರಾಜಯ್ಯ ಅವರನ್ನು ಕುಮಾರಸ್ವಾಮಿ ನೇಮಿಸಿದ್ದಾರೆ.
ಕೋರ್ ಕಮಿಟಿ ಎಂಬುದು ಪಕ್ಷದ ಉನ್ನತ ಮಟ್ಟದ ನಿರ್ಧಾರ ತೆಗೆದುಕೊಳ್ಳುವ ಒಂದು ಸಣ್ಣ ಗುಂಪಿನ ಸಮಿತಿಯಾಗಿದ್ದು, ಪಕ್ಷದ ಆಂತರಿಕ ವಿಷಯಗಳು, ಚುನಾವಣಾ ರಣನೀತಿ, ನಾಯಕರ ನೇಮಕ ಮತ್ತು ಪಕ್ಷ ಬಲಪಡಿಸುವಂತಹ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿರುವ ಹಿರಿಯ ಮುಖಂಡ ಜಿ ಟಿ ದೇವೇಗೌಡರನ್ನು ಎಲ್ಲ ಸಮಿತಿಯಿಂದಲೂ ಹೊರಗಿಡಲಾಗಿದೆ ಎಂಬುದು ಗಮನಾರ್ಹ ಸಂಗತಿ.
ಜಿ ಟಿ ದೇವೇಗೌಡ ಪುತ್ರ ಜಿ ಟಿ ಹರೀಶ್ ಗೌಡ ಅವನ್ನು ಪ್ರಚಾರ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಕೋರ್ ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮಾಜಿ ಸಚಿವ ಎ ಮಂಜು ಇದರ ಸಂಚಾಲಕರಾಗಿದ್ದಾರೆ.
ಜಿ ಟಿ ದೇವೇಗೌಡರ ಅಭಿಪ್ರಾಯ ಪಡೆಯಲು ಈ ದಿನ.ಕಾಮ್ ಪ್ರಯತ್ನಿಸಿತು. ಆದರೆ, ಜಿ ಟಿ ದೇವೇಗೌಡ ಅವರು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರ ಆಪ್ತರು ತಿಳಿಸಿದರು.









