ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ತರೂರ್ "ಎಲ್ಲವೂ ಚೆನ್ನಾಗಿದೆ, ನಾವೆಲ್ಲರೂ ಒಂದೇ" ಎಂದು ಹೇಳಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ತರೂರ್‌ಗೆ ಪ್ರಚಾರ ಸಮಿತಿಯಲ್ಲಿ ಪ್ರಮುಖ ಸ್ಥಾನ ದಕ್ಕಿದೆ.
ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿಗಿಂತ ಭಿನ್ನವಾದ ನಿಲುವನ್ನು ಹೊಂದಿದ್ದವರು ಹಿರಿಯ ರಾಜಕಾರಣಿ ಶಶಿ ತರೂರ್. ಯಾವ ವಿಚಾರದಲ್ಲಿ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಬಂದಿದೆಯೋ ಅದೇ ವಿಚಾರದಲ್ಲಿ ಮೋದಿಯನ್ನು ಶ್ಲಾಘಿಸಿ ಹೈಕಮಾಂಡ್ ಕೆಂಗಣ್ಣಿಗೂ ಗುರಿಯಾದವರು ತರೂರ್. ಇತ್ತೀಚೆಗೆ ಪಕ್ಷಕ್ಕೂ ತರೂರ್‌ಗೂ ಹಲವು ಭಿನ್ನಾಭಿಪ್ರಾಯಗಳಿರುವುದು ಎದ್ದು ಕಾಣುತ್ತಿದೆ. ಆದರೆ ಕೇರಳ ವಿಧಾನಸಭೆ ಚುನಾವಣೆ ಬರುತ್ತಿದ್ದಂತೆ ಆ ಎಲ್ಲಾ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್ ಬದಿಗೊತ್ತಿದ್ದಂತಿದೆ.
ಏನೇ ಭಿನ್ನಾಭಿಪ್ರಾಯವಿದ್ದರೂ ಸದ್ಯ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಕೈ ಪಕ್ಷದ ಗುರಿ. ಅದರಿಂದಾಗಿಯೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಮುಖ ಜವಾಬ್ದಾರಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್‌ಗೆ ವಹಿಸಿದೆ. ತರೂರ್ ಅವರನ್ನು ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ-ಅಧ್ಯಕ್ಷರನ್ನಾಗಿ ನೇಮಿಸಿಕೊಂಡಿದೆ. ಈ ಮೂಲಕ ಯುವ ಮತದಾರರನ್ನು ಸೆಳೆಯುವ ತಂತ್ರವನ್ನು ರೂಪಿಸಿಕೊಂಡಿದೆ.
ಇದನ್ನು ಓದಿದ್ದೀರಾ? 40% ಸರ್ಕಾರದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ: ಶಶಿ ತರೂರ್
ಕೇರಳದ ಜನರು ಸರ್ಕಾರವನ್ನು ಆಯ್ಕೆ ಮಾಡುವ ರೀತಿ ವಿಭಿನ್ನ. ಒಮ್ಮೆ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ (ಎಲ್‌ಡಿಎಫ್) ಅವಕಾಶ ನೀಡಿದರೆ, ಮತ್ತೊಮ್ಮೆ ಸಂಯುಕ್ತ ಪ್ರಜಾಸತ್ತಾತ್ಮಕ ರಂಗಕ್ಕೆ (ಯುಡಿಎಫ್) ಗದ್ದುಗೆ ನೀಡುತ್ತಾರೆ. ಆದರೆ ಕಳೆದ ಬಾರಿ ಸತತ ಎರಡನೇ ಬಾರಿಗೆ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ಗೆ ಅಧಿಕಾರ ನೀಡಿದ್ದಾರೆ. ಆದರೆ ಈ ಬಾರಿ ಯುಡಿಎಫ್‌ಗೆ ಆಡಳಿತ ನಡೆಸುವ ಅವಕಾಶ ನೀಡುವ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದು. ಹಾಗಾಗಿ ಈ ಬಾರಿ ಎಲ್‌ಡಿಎಫ್ ಮತ್ತು ಬಿಜೆಪಿ ಎರಡನ್ನೂ ಎದುರಿಸಿ, ಅಧಿಕಾರಕ್ಕೆ ಬರಲು ಸಜ್ಜಾಗುತ್ತಿದೆ.
ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ತರೂರ್ “ಎಲ್ಲವೂ ಚೆನ್ನಾಗಿದೆ, ನಾವೆಲ್ಲರೂ ಒಂದೇ” ಎಂದು ಹೇಳಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ತರೂರ್‌ಗೆ ಪ್ರಚಾರ ಸಮಿತಿಯಲ್ಲಿ ಪ್ರಮುಖ ಸ್ಥಾನ ದಕ್ಕಿದೆ. ಈ ಭೇಟಿಯ ಬಳಿಕ ಹಲವು ಬಾರಿ ತರೂರ್ ಕಾಂಗ್ರೆಸ್ ಅನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತು ಚರ್ಚೆಯನ್ನೂ ನಡೆಸಿದ್ದಾರೆ.
ತಮಗೆ ಜವಾಬ್ದಾರಿ ಸಿಕ್ಕ ಬಳಿಕ ತರೂರ್ ಮತ್ತೆ ಕಾಂಗ್ರೆಸ್ ಪರವಾಗಿಯೇ ಮಾತನಾಡಲು ಆರಂಭಿಸಿರುವಂತಿದೆ. “ನಾನು ಕಾಂಗ್ರೆಸ್‌ನಲ್ಲಿದ್ದೇನೆ ಮತ್ತು ನಾನು ಎಲ್ಲಿಗೂ ಹೋಗುವುದಿಲ್ಲ. ನಾನು ಕೇರಳ ಪ್ರಚಾರದ ಭಾಗವಾಗಿರುತ್ತೇನೆ ಮತ್ತು ಯುಡಿಎಫ್‌ನ ಗೆಲುವಿಗಾಗಿ ಕೆಲಸ ಮಾಡುತ್ತೇನೆ. ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಾನು ಮುಂಚೂಣಿಯಲ್ಲಿರುತ್ತೇನೆ. ಕಾಂಗ್ರೆಸ್ ಅನ್ನು ಮುನ್ನಡೆಸುತ್ತೇನೆ” ಎಂದು ತರೂರ್ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬದಲಾದ ಟ್ರಂಪ್ ವರಸೆಯನ್ನು ಭಾರತ ಬೇಗ ನಂಬಬಾರದು: ಕಾಂಗ್ರೆಸ್ ಸಂಸದ ಶಶಿ ತರೂರ್ ಸಲಹೆ
ನರೇಂದ್ರ ಮೋದಿ ಅವರನ್ನು ಪದೇ ಪದೇ ಹೊಗಳುವುದು ಮಾತ್ರವಲ್ಲದೆ ತರೂರ್ ಅವರ ಕಾಂಗ್ರೆಸ್‌ಗಿಂತ ಭಿನ್ನವಾದ ನಿಲುವು ಸಾಕಷ್ಟು ಚರ್ಚೆಗೆ ಒಳಗಾಗುತ್ತಲೇ ಇದೆ. ಅಷ್ಟು ಮಾತ್ರವಲ್ಲದೆ ತರೂರ್ ಕೇರಳದಲ್ಲಿ ತಮ್ಮನ್ನು ಬದಿಗೊತ್ತಲು ಕೆಲವು ನಾಯಕರು ಮಾಡಿದ ಪ್ರಯತ್ನಗಳ ಬಗ್ಗೆ ಮತ್ತು ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಚುನಾವಣೆ ಬರುತ್ತಿದ್ದಂತೆ ಇದೀಗ ಕಾಂಗ್ರೆಸ್ ಈ ಎಲ್ಲ ಭಿನ್ನಾಭಿಪ್ರಾಯ ಬದಿಗೊತ್ತಿ, ತರೂರ್ ಮೇಲೆ ಹೊಣೆ ಹೊರಿಸಿದೆ.
ಪ್ರಧಾನಿಯನ್ನು ಹೊಗಳುವ ವ್ಯಕ್ತಿಗೆ ಸ್ಥಾನ ನೀಡಿದ ಕಾಂಗ್ರೆಸ್ ನಿರ್ಧಾರ ಯಾವ ತಂತ್ರ ಎಂಬುದು ಕೆಲವು ನೆಟ್ಟಿಗರ ವಾದ. ಆದರೆ ಪ್ರಚಾರಕ ಅಷ್ಟೇ ಮುಖ್ಯ. ನಾಲ್ಕು ಬಾರಿ ಸಂಸದರಾಗಿರುವ ತರೂರ್ ಕಾಂಗ್ರೆಸ್‌ಗೆ ಕೇರಳದಲ್ಲಿ ಪ್ರಮುಖ ಪ್ರಚಾರಕ. ತಮ್ಮ ಪ್ರಚಾರಕರನ್ನು ಕೈಬಿಟ್ಟರೆ ಕಾಂಗ್ರೆಸ್‌ಗೆ ಮತ್ತೊಂದು ಬಾರಿ ಅಧಿಕಾರ ಕೈ ತಪ್ಪಬಹುದು ಎಂಬ ಆತಂಕವಿರುವುದು ಸಹಜ. ಅದರಲ್ಲೂ ಯುವ ಮತ್ತು ನಗರದ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಶಶಿ ತರೂರ್ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಬೇಕಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




