ಸ್ಥಾಪಿತ ಏಣಿಶ್ರೇಣಿಗಳು ಮತ್ತು ಹಿತಾಸಕ್ತಿಗಳನ್ನು ಪ್ರಶ್ನಿಸುವವರನ್ನು ವಿರೋಧಿಸಿ ತುಳಿಯುವ ಪ್ರವೃತ್ತಿಯು ಇಂದು ನೆನ್ನೆಯದಲ್ಲ, ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ.
ಕುರುಬನೊಬ್ಬ ಮುಖ್ಯಮಂತ್ರಿಯಾಗಿ, ಆರ್ಥಿಕ ತಜ್ಞನಂತೆ ಬಜೆಟ್ ಮಂಡಿಸುವುದನ್ನು ತಮ್ಮ ರಾಜಕೀಯ ವಿರೋಧಿಗಳು ಸಹಿಸುತ್ತಿಲ್ಲ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ತಮ್ಮ ವಿರುದ್ದ ನಡೆಯುತ್ತಿರುವ ನಿರಂತರ ವೈಯಕ್ತಿಕ ದಾಳಿಗಳು ಮತ್ತು ಎಡೆಬಿಡದ ಟೀಕೆಗಳಿಗೆ ಜಾತಿ ಪೂರ್ವಗ್ರಹವೇ ಕಾರಣ. ಗತಿಹೀನ ಹಿಂದುಳಿದ ವರ್ಗದವನೊಬ್ಬ ರಾಜ್ಯದ ಅತ್ಯುನ್ನತ ಪದವಿಗೆ ಏರಿರುವುದನ್ನು ಸಮಾಜದ ‘ಗಣ್ಯಮಾನ್ಯ’ ಸುಸ್ಥಾಪಿತರು ನಿತ್ತರಿಸುತ್ತಿಲ್ಲ. ತಮ್ಮನ್ನು ರಾಜಕೀಯವಾಗಿ ತುಳಿಯುವ ವ್ಯವಸ್ಥಿತ ಪ್ರಯತ್ನಗಳು ನಡೆದಿವೆ ಎಂದು ಮನದಾಳವನ್ನು ತೋಡಿಕೊಂಡಿದ್ದಾರೆ.
ವಿಶ್ವ ಸಾಮಾಜಿಕ ನ್ಯಾಯ ದಿನದ ಸಂದರ್ಭದಲ್ಲಿ ಶುಕ್ರವಾರದಂದು ಅವರು ಆಡಿರುವ ಈ ಮಾತುಗಳನ್ನು ಬಿಜೆಪಿ ಟೀಕಿಸಿದೆ.
ಸ್ಥಾಪಿತ ಏಣಿಶ್ರೇಣಿಗಳು ಮತ್ತು ಹಿತಾಸಕ್ತಿಗಳನ್ನು ಪ್ರಶ್ನಿಸುವವರನ್ನು ವಿರೋಧಿಸಿ ತುಳಿಯುವ ಪ್ರವೃತ್ತಿಯು ಇಂದು ನೆನ್ನೆಯದಲ್ಲ, ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ. ನಿರ್ಲಕ್ಷಿತರು, ಶೋಷಿತರ ಪರ ದನಿಯೆತ್ತಿದಾಗ, ಅವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಜಾರಿ ಮಾಡಿದಾಗಲೆಲ್ಲ ತಮ್ಮ ವಿರುದ್ಧ ದಾಳಿಗಳು ನಡೆದಿವೆ ಎಂದಿದ್ದಾರೆ.
ವಿತ್ತೀಯ ಬದ್ಧತೆಯೇ ಇಲ್ಲದ ಬರಿ ಬಾಯಿ ಮಾತಿನ ಸಾಮಾಜಿಕ ನ್ಯಾಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿಯವರ ಮಾತುಗಳನ್ನು ಟೀಕಿಸಿದ್ದಾರೆ. ಕರ್ನಾಟಕದ ಸಾಮಾಜಿಕ ವಲಯ ವೆಚ್ಚವು 2025ರಲ್ಲಿ ಶೇ. 42.1 ರಿಂದ ಶೇ.40.7ಕ್ಕೆ ಕುಸಿದಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿರುವ ಅಧ್ಯಯನ ಹೊರಹಾಕಿದೆ ಜನ ತಮ್ಮ ಸ್ವಂತ ಕಾಲಮೇಲೆ ನಿಲ್ಲುವಂತೆ ಮಾಡುವಂತಹ ಶಿಕ್ಷಣ, ಉದ್ಯೋಗ ನೀಡಿಕೆ, ಕೌಶಲ್ಯಗಳು ಮತ್ತು ಅವಕಾಶಗಳ ಸೃಷ್ಟಿಯೇ ನಿಜವಾದ ಸಾಮಾಜಿಕ ನ್ಯಾಯ ಎಂದಿದ್ದಾರೆ.




