ಕಬ್ಬು ಬೆಳೆಗಾರರಿಗೆ ನಿಜವಾಗಿಯೂ ದ್ರೋಹ ಬಗೆದದ್ದು ಪ್ರಲ್ಹಾದ್ ಜೋಶಿ. FRP ಮತ್ತು MSP ಎರಡನ್ನೂ ನಿಗದಿ ಮಾಡುವುದು ಕೇಂದ್ರ ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ, ಹಲವು ಅಭಿವೃದ್ಧಿ ಕಾರ್ಯಕ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, “ವಿಜಯೇಂದ್ರ ತಮ್ಮದೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಮಾಡಿದ ದ್ರೋಹವನ್ನು ಮರೆಮಾಚಿ ಬೆಳಗಾವಿಗೆ ಹೋಗಿ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದರೂ ರಾಜ್ಯ ಸರ್ಕಾರ ಹೆಚ್ಚುವರಿ ಹಣ ನೀಡಿ ನಮ್ಮ ಕಬ್ಬು ಬೆಳೆಗಾರರನ್ನು ಕಾಪಾಡುವ ಕೆಲಸ ಮಾಡಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಬ್ಬು ಬೆಳೆಗಾರರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಲೇ ಬಂದ ಸಿದ್ದರಾಮಯ್ಯ: ಬಿ ವೈ ವಿಜಯೇಂದ್ರ
“ನಮ್ಮದು ಅಭಿವೃದ್ಧಿ ಪರವಾದ ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಳೆದ ಎರಡು ವರ್ಷಗಳಲ್ಲಿ ನಾವು ಕೂಡ್ಲಿಗಿ ಕ್ಷೇತಕ್ಕೆ 1750 ಕೋಟಿ ರೂಪಾಯಿಗೂ ಹೆಚ್ಚಿನ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇವೆ. ಜತೆಗೆ ಚುನಾವಣೆ ವೇಳೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಘೋಷಿಸಿ, ಐದಕ್ಕೆ ಐದನ್ನೂ ಜಾರಿ ಮಾಡಿದ್ದೇವೆ” ಎಂದು ತಿಳಿಸಿದರು.
“ರಾಜ್ಯದ ಜನರ ಮನೆ ಬಾಗಿಲಿಗೆ ಪ್ರತಿ ತಿಂಗಳು ಸರ್ಕಾರದ ಗ್ಯಾರಂಟಿಗಳು ತಲುಪುತ್ತಿವೆ. 1.20 ಕೋಟಿ ಕುಟುಂಬಗಳ ಮನೆ ಯಜಮಾನಿಯರಿಗೆ ಗೃಹಲಕ್ಷ್ಮಿ ಹಣ ಮತ್ತು ಗೃಹಜ್ಯೋತಿಯ ಸವಲತ್ತು ತಲುಪುತ್ತಿದೆ. ಎರಡು ವರ್ಷದಲ್ಲಿ ನಮ್ಮ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರ ಜೇಬಿಗೆ ಹಾಕಿದ್ದೇವೆ” ಎಂದು ಲೆಕ್ಕಾಚಾರ ನೀಡಿದರು.
“ಲಜ್ಜೆಗೆಟ್ಟು ಮತಗಳ್ಳತನಕ್ಕೆ ಇಳಿದ ಬಿಜೆಪಿ”
“ನಾವು ನುಡಿದಂತೆ ನಡೆದು ಜನರ ಜೇಬಿಗೆ ಹಣ ಹಂಚುತ್ತಿದ್ದರೆ, ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವ ಬಿಜೆಪಿಯವರು ಮಾನ ಮರ್ಯಾದೆ ಬಿಟ್ಟು ರಾಜ್ಯದ ಜನರಿಗೆ ಸುಳ್ಳುಗಳನ್ನು ಹಂಚುತ್ತಿದ್ದಾರೆ. ಸುಳ್ಳಿನ ಸರದಾರ ಬಿಜೆಪಿಯವರು ಈಗ ಸಾರ್ವಜನಿಕವಾಗಿ ಹರಾಜಾಗಿದ್ದಾರೆ. ಇವರು ಲಜ್ಜೆಗೆಟ್ಟು ಮತಗಳ್ಳತನಕ್ಕೆ ಇಳಿದು ಸಿಕ್ಕಿ ಬಿದ್ದಿದ್ದಾರೆ” ಎಂದರು.
ಕೂಡ್ಲಿಗಿ ಶಾಸಕರನ್ನು ಶ್ಲಾಘಿಸಿದ ಸಿಎಂ
ಈ ವೇಳೆ ಕೂಡ್ಲಿಗಿ ಶಾಸಕರನ್ನು ಶ್ಲಾಘಿಸಿದ ಸಿಎಂ, “1,70,000 ಜನರಿಗೆ ಕುಡಿಯುವ ನೀರು ಒದಗಿಸುವ ಜೊತೆಗೆ ಕೂಡ್ಲಿಗಿಯ ಅಂತರ್ಜಲ ವೃದ್ಧಿಗೆ ಶ್ರಮಿಸಿ ಯಶಸ್ವಿಯಾದ ಶಾಸಕ ಶ್ರೀನಿವಾಸ್ ಅವರನ್ನು ಪಡೆದ ಕೂಡ್ಲಿಗಿ ಜನತೆ ಅತ್ಯಂತ ಅದೃಷ್ಟವಂತರು” ಎಂದು ಹೇಳಿದರು.
“ಬರಡು ನೆಲ ಕೂಡ್ಲಿಗಿಯನ್ನು ಹಸಿರಿನ ನೆಲವನ್ನಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿರುವ ಶಾಸಕ ಶ್ರೀನಿವಾಸ್ ಅವರು ಅತ್ಯಂತ ಕ್ರಿಯಾಶೀಲರು. ಇವರಿಂದ ಕ್ಷೇತ್ರದ ಅಭಿವೃದ್ಧಿ ಅತ್ಯಂತ ವೇಗ ಪಡೆದುಕೊಂಡಿದೆ” ಎಂದರು.
“ಶಾಸಕ ಶ್ರೀನಿವಾಸ್, ಸಂಸದ ತುಕಾರಾಂ ಇಬ್ಬರೂ ಜನರ ಅಭಿವೃದ್ಧಿ ಹೊರತಾಗಿ ಬೇರೇನನ್ನೂ ಕೇಳುವವರಲ್ಲ. ಇವರಿಬ್ಬರನ್ನು ಗೆಲ್ಲಿಸಿದ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಶಾಸಕರು ಮತ್ತು ಸಂಸದರು ನಿಮ್ಮ ಆಸ್ತಿ ಇದ್ದ ಹಾಗೆ. ಇವರನ್ನು ಕಾಪಾಡಿಕೊಳ್ಳಿ” ಎಂದು ಜನತೆಗೆ ಕರೆ ನೀಡಿದರು.





