ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಹಾದಿ, ಬೀದಿಯಲ್ಲಿ ಚರ್ಚೆ ಮಾಡುವ ಸಂಗತಿಯಲ್ಲ. ಸಿದ್ದರಾಮಯ್ಯ ಗಟ್ಟಿ ನಾಯಕರು. ಹೈಕಮಾಂಡ್ ಎಲ್ಲಿಯವರೆಗೆ ಬಯಸುತ್ತೆದೆಯೋ ಅಲ್ಲಿಯವರೆಗೂ ಅವರೇ ಮುಖ್ಯಮಂತ್ರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮುಡಾ ಹಗರಣದಲ್ಲಿ ಬಿಜೆಪಿಯವರು ಸುಳ್ಳು ದಾಖಲೆ ಹುಟ್ಟಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯತ್ನ ನಡೆಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲ 135 ಶಾಸಕರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದೇವೆ” ಎಂದರು.
“ನಾನು ಮೊದಲ ಮಹಿಳಾ ಮುಖ್ಯಮಂತ್ರಿ ಎಂದೆಲ್ಲ ಪ್ರಚಾರ ಮಾಡುವುದು ಬಾಲಿಷ. ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಬೇಕು ಎಂದು ಯಾರಾದರೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದರೆ ಸದ್ಯ ಅದು ನಗಣ್ಯ. ಇದಕ್ಕೆ ನನ್ನ ಒಪ್ಪಿಗೆ ಇಲ್ಲ” ಎಂದು ಸ್ಪಷ್ಟಪಡಿಸಿದರು.
“ಸಿಎಂ ಸ್ಥಾನದ ಆಕಾಂಕ್ಷಿ ಎಂದು ಕೆಲ ನಾಯಕರು ಹೇಳಿಕೆ ನೀಡಿರಬಹುದು. ಆದರೆ, ನಾನು ಜವಾಬ್ದಾರಿಯುತ ಪಕ್ಷದ ಶಿಸ್ತಿನ ಸಿಪಾಯಿ. ನಮ್ಮದು ಶಿಸ್ತಿನ ಪಕ್ಷ. ನಾವು ಬಯಸುವುದಲ್ಲ; ಪಕ್ಷ ಕೊಡುವುದು” ಎಂದರು.





