ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ಕೈಗೊಳ್ಳಬಾರದು. ತಮಿಳುನಾಡು ಮಾದರಿಯಲ್ಲಿ ಇಲ್ಲಿಯೂ ನಿಷೇಧ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ. ಇಂಥಾ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬುಧವಾರ ಮೈಸೂರು ಏರ್ ಪೋರ್ಟ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಈ ಕುರಿತ ಆಡಿಯೋ ಕೂಡ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಇದನ್ನು ಓದಿದ್ದೀರಾ? ಸರ್ಕಾರಿ ಸ್ಥಳಗಳಲ್ಲಿ RSS ನಡೆಸುವ ಎಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಬೇಕು: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ
“ತಮಿಳುನಾಡಿನಲ್ಲಿ ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ. ತಮಿಳುನಾಡಿನಲ್ಲಿ ಯಾವ ರೀತಿ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು” ಎಂದು ಹೇಳಿದರು.
ಹಾಗೆಯೇ, ಪ್ರಿಯಾಂಕ್ ಖರ್ಗೆ ಅವರಿಗೆ ರಕ್ಷಣೆ ಒದಗಿಸಲಾಗುವುದು ಎಂದೂ ತಿಳಿಸಿದರು. “ದುಷ್ಟ ಶಕ್ತಿಗಳು ಯಾವಾಗಲೂ ಇಂಥದ್ದೇ ಕೆಲಸ ಮಾಡುವುದು. ಬೆದರಿಕೆಗಳಿಗೆ ಪ್ರಿಯಾಂಕ್ ಅವರು ಹೆದರುವುದಿಲ್ಲ. ನಾನೂ ಹೆದರುವುದಿಲ್ಲ” ಎಂದು ಮುಖ್ಯಮಂತ್ರಿ ಹೇಳಿದರು.
ಇನ್ನು ಈ ಸಂದರ್ಭದಲ್ಲೇ, “ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ತಡವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲಿಯೂ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ” ಎಂದರು.
ಎಲ್ಲ ಶಾಸಕರಿಗೂ ಅನುದಾನ
ಶಾಸಕರಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಉಚ್ಚ ನ್ಯಾಯಾಲಯಕ್ಕೆ ಶ್ರೀನಿವಾಸಪುರ ಶಾಸಕರು ಮೊರೆ ಹೋಗಿರುವ ಬಗ್ಗೆ ಮಾತನಾಡಿದ ಸಿಎಂ, “ಜೆಡಿಎಸ್‌ನವರು ನಮ್ಮ ಶಾಸಕರಿಗೆ ಅನುದಾನ ನೀಡಿದ್ದರೇ” ಎಂದು ಪ್ರಶ್ನಿಸಿದರು. “ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಿದ್ದು, ಎಲ್ಲರಿಗೂ ಅನುದಾನ ಒದಗಿಸಲಾಗುತ್ತಿದೆ” ಎಂದರು. “ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು”ಎಂದು ಭರವಸೆ ನೀಡಿದರು.
ಬಿಜೆಪಿಯವರು ತಾಕತ್ತಿದ್ದರೆ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಲಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ಚುನಾವಣಾ ಸಂದರ್ಭದಲ್ಲಿಯೂ ಬಿಜೆಪಿಯವರು ತಾಕತ್ತಿದ್ದರೆ ಬನ್ನಿ ಎಂದಿದ್ದರು. ಆದರೆ ಸೋತು ಹೋದರು” ಎಂದು ಲೇವಡಿ ಮಾಡಿದರು.





