ಪ್ರಧಾನಿ ಮೋದಿ ಅವರಿಂದ ಪ್ರಶಂಸೆ ಪಡೆದಿದ್ದ ಗಾಯಕಿ ಮೈಥಿಲಿ ಠಾಕೂರ್ ಅವರು ಹಾಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುವ ಸಾಧ್ಯತೆ ಇದೆ. ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮತ್ತು ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಅವರನ್ನು ತನ್ನ ತಂದೆಯೊಂದಿಗೆ ಮೈಥಿಲಿ ಭೇಟಿ ಮಾಡಿದ್ದಾರೆ. ಭೇಟಿಯ ಚಿತ್ರಗಳನ್ನು ವಿನೋದ್ ತಾವ್ಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಬಿಹಾರದ ಮಗಳು ರಾಜ್ಯಕ್ಕೆ ಮರಳಿ’ ಬರುವಂತೆ ಸ್ವಾಗತಿಸಿದ್ದಾರೆ. ಅವರ ಈ ಪೋಸ್ಟ್, ಮೈಥಿಲಿ ಅವರ ಚುನಾವಣಾ ಸ್ಪರ್ಧೆಯ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
ತಮ್ಮ ಪೋಸ್ಟ್‌ನಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ವನ್ನು ಟೀಕಿಸಿರುವ ತಾವ್ಡೆ, “1995ರಲ್ಲಿ ಲಾಲು ಅಧಿಕಾರಕ್ಕೆ ಬಂದ ನಂತರ ಬಿಹಾರವನ್ನು ಹಲವು ಕುಟುಂಬಗಳ ತೊರೆದಿದ್ದವು. ಆ ಕುಟುಂಬವೊಂದರ ಮಗಳು, ಪ್ರಸಿದ್ಧ ಗಾಯಕಿ ಮೈಥಿಲಿ ಠಾಕೂರ್ ಅವರು ಬದಲಾಗುತ್ತಿರುವ ಬಿಹಾರದ ವೇಗವನ್ನು ನೋಡಿ ಬಿಹಾರಕ್ಕೆ ಮರಳಲು ಬಯಸಿದ್ದಾರೆ” ಎಂದು ಹೇಳಿದ್ದಾರೆ.
ತಾವ್ಡೆ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮೈಥಿಲಿ ಠಾಕೂರ್, “ಬಿಹಾರಕ್ಕಾಗಿ ದೊಡ್ಡ ಕನಸು ಕಾಣುತ್ತಿರುವ ಜನರೊಂದಿಗೆ (ಬಿಜೆಪಿಗರು) ನಡೆದ ಪ್ರತಿ ಸಂಭಾಷಣೆಯೂ ನನಗೆ ದೃಷ್ಟಿ ಮತ್ತು ಸೇವೆಯ ಶಕ್ತಿಯನ್ನು ಪ್ರೇರೇಪಿಸುತ್ತದೆ. ಅವರಿಗೆ ಗೌರವ ಮತ್ತು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.
ಶಾಸ್ತ್ರೀಯ ಗಾಯಕಿ ಮೈಥಿಲಿ ಅವರು ಮಿಥಿಲಾ ಪ್ರದೇಶದವರು. ಮೈಥಿಲಿ ಅವರಿಗೆ ಈ ಪ್ರದೇಶದಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ದರ್ಭಂಗಾ ಜಿಲ್ಲೆಯ ಮಧುಬನಿ ಅಥವಾ ಅಲಿಗಢ. ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯನ್ನು ಮೈಥಿಲಿ ಕೂಡ ವ್ಯಕ್ತಪಡಿಸಿದ್ದಾರೆ.
ರಾಮಾಯಣದಲ್ಲಿ ಹೇಳುವಂತೆ ಶ್ರೀರಾಮನಿಗೆ ಅರ್ಧ ತಿಂದ ಹಣ್ಣುಗಳನ್ನು ಅರ್ಪಿಸಿದ ಶಬರಿಯ ಕುರಿತು ಮೈಥಿಲಿ ಅವರು 2024ರಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಹಾಡನ್ನು ಹಾಡಿದ್ದರು. ಆ ಹಾಡಿಗಾಗಿ 2024ರ ಜನವರಿಯಲ್ಲಿ ಮೈಥಿಲಿ ಅವರನ್ನು ಪ್ರಧಾನಿ ಮೋದಿ ಪ್ರಶಂಸಿಸಿದ್ದರು.
ಬಿಹಾರ ಚುನಾವಣಾ ವೇಳಾಪಟ್ಟಿಯನ್ನು ಸೋಮವಾರ ಘೋಷಿಸಲಾಗಿದೆ. ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.




