ಬುಧವಾರ ಸುಪ್ರೀಮ್ ಕೋರ್ಟಿನಲ್ಲಿ ನಾಟಕೀಯ ಸನ್ನಿವೇಶ ಅನಾವರಣಗೊಂಡಿತ್ತು. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖುದ್ದು ವಾದ ಮಂಡಿಸಿ ಹೊಸ ದಾಖಲೆ ನಿರ್ಮಿಸಿದರು. ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯಲ್ಲಿ ತಮ್ಮ ರಾಜ್ಯದ ನೈಜ ಮತದಾರರಿಗೆ ಅನ್ಯಾಯವಾಗಿದೆ ಎಂಬುದಾಗಿ ತಾವು ಸಲ್ಲಿಸಿದ್ದ ಅರ್ಜಿಯ ಪರವಾಗಿ ತಾವೇ ವಾದ ಮಂಡನೆಗೆ ನಿಂತರು. ಇಂತಹ ಮೊದಲ ಮುಖ್ಯಮಂತ್ರಿ ಎನಿಸಿಕೊಂಡರು.
ಮಮತಾ ಬ್ಯಾನರ್ಜಿ ಅವರನ್ನು ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಪ್ರತಿನಿಧಿಸಿದ್ದರು. ಅವರೊಂದಿಗೆ ಮಮತಾ ಬ್ಯಾನರ್ಜಿ ಅವರೂ ಸಂಕ್ಷಿಪ್ತ ವಾದ ಮಂಡಿಸಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ನ್ಯಾಯಪೀಠ ಮಮತಾ ವಾದವನ್ನು ಆಲಿಸಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡುವಂತೆ ನಿರ್ದೇಶಿಸಿತು. ನ್ಯಾಯಮೂರ್ತಿಗಳಾದ ಜೊಯ್ಮಾಲ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರು ಈ ಪೀಠದ ಇತರೆ ಇಬ್ಬರು ಸದಸ್ಯರಾಗಿದ್ದರು.
“ನ್ಯಾಯದಾನ ವಿಳಂಬವಾಗುತ್ತಿದೆ. ನ್ಯಾಯವು ಮುಚ್ಚಿದ ಕದಗಳ ಹಿಂದೆ ಕಣ್ಣೀರಿಡುತ್ತಿದೆ. ನಮಗೆ ನ್ಯಾಯ ಸಿಗುವುದಿಲ್ಲವೆಂದು ಖಾತ್ರಿಯಾದಾಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದೇವೆ. ನಾನು ಮುಖ್ಯ ವ್ಯಕ್ತಿಯೇನೂ ಅಲ್ಲ. ನನ್ನ ಜನರಿಗಾಗಿ ಹೋರಾಡುತ್ತಿದ್ದೇನೆಯೇ ವಿನಾ ನನ್ನ ಪಕ್ಷಕ್ಕಾಗಿ ಅಲ್ಲ” ಎಂದು ಬ್ಯಾನರ್ಜಿಯವರು ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.
“ಪಶ್ಚಿಮ ಬಂಗಾಳವನ್ನು ಮಾತ್ರವೇ ಅನ್ಯಾಯಕ್ಕೆ ಗುರಿ ಮಾಡಿದ್ದಾರೆ. ಎರಡು ವರ್ಷಗಳ ಕಾಲಾವಕಾಶ ಹಿಡಿಯುವ ಪ್ರಕ್ರಿಯೆಯನ್ನು ಎರಡೇ ತಿಂಗಳಲ್ಲಿ ಮಾಡಲು ಬಯಸಿದ್ದರು. ಹಬ್ಬಹರಿದಿನಗಳು, ಸುಗ್ಗಿಯ ದಿನಗಳ ಕಾಲದಲ್ಲಿ ಜನಸಾಮಾನ್ಯರಿಗೆ ಕಿರುಕುಳ ಕೊಡುತ್ತಿದ್ದಾರೆ. ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮರಣಿಸಿದ್ದಾರೆ. 24 ವರ್ಷಗಳ ಕಾಲ ಮಾಡದೆ ಹೋದ ಕೆಲಸವನ್ನು ಮೂರು ತಿಂಗಳಲ್ಲಿ ಮಾಡಲು ಹೊರಟು, ಚುನಾವಣಾ ಆಯೋಗ ನೀಡಿರುವ ಕಿರುಕುಳದ ಕಾರಣ ಬಿ.ಎಲ್.ಒ.ಗಳು ಪ್ರಾಣಬಿಟ್ಟಿದ್ದಾರೆ. ಅಸ್ಸಾಂ ಅಥವಾ ಇತರೆ ಈಶಾನ್ಯ ರಾಜ್ಯಗಳನ್ನು ಯಾಕೆ ಈ ಎಸ್.ಐ.ಆರ್.ಗೆ ಗುರಿ ಮಾಡಿಲ್ಲ, ಕೇವಲ ಪಶ್ಚಿಮ ಬಂಗಾಳದ ಮೇಲೆ ಯಾಕೆ ಈ ದ್ವೇಷ ಸಾಧನೆ” ಎಂದು ಮಮತಾ ಪ್ರಶ್ನಿಸಿದರು.
ಚುನಾವಣಾ ಆಯೋಗ ಎಂಬುದು ವಾಟ್ಸ್ಯಾಪ್ ನಲ್ಲಿ ನಿರ್ದೇಶನಗಳನ್ನು ನೀಡುವ ವಾಟ್ಸ್ಯಾಪ್ ಆಯೋಗ ಆಗಿ ಹೋಗಿದೆ ಎಂದು ಮಮತಾ ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ನ್ಯಾಯಪೀಠವು ಮುಂದಿನ ಸೋಮವಾರದ ಒಳಗಾಗಿ ತನ್ನ ಜವಾಬನ್ನು ಸಲ್ಲಿಸುವಂತೆ ಸೂಚಿಸಿದೆ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವುದನ್ನು ನಿಲ್ಲಿಸಲು ತುರ್ತು ನಿರ್ದೇಶನಗಳನ್ನು ನೀಡುವ ಅಗತ್ಯವಿದೆ. ಮುಂಬರುವ ಬಂಗಾಳ ವಿಧಾನಸಭಾ ಚುನಾವಣೆಗಳನ್ನು 2025ರ ಮತದಾರರ ಪಟ್ಟಿಯ ಆಧಾರದ ಮೇರೆಗೆ ನಡೆಸಬೇಕು. ಹೊಸ ಮತದಾರರ ಪಟ್ಟಿಯನ್ನು ಎಸ್ ಐ ಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಪ್ರಕಟಿಸಬಹುದು. ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಗೆ ಕೇವಲ ಹತ್ತು ದಿನಗಳು ಉಳಿದಿವೆ. ಸುಮಾರು 1.36 ಕೋಟಿ ಮತದಾರರನ್ನು ದೋಷಪೂರಿತ ಹೆಸರುಗಳ ಪಟ್ಟಿಗೆ ಸೇರಿಸಲಾಗಿದೆ. ಈ ಮತದಾರರ ವಿವರಣೆಯನ್ನು ಚುನಾವಣಾ ಆಯೋಗ ಈವರೆಗೆ ಆಲಿಸಿಯೇ ಇಲ್ಲ. ಈ ಪ್ರಕ್ರಿಯೆಯು ಅಂತಿಮ ಮತದಾರರ ಪಟ್ಟಿ ಪ್ರಕಟಣೆಯ ದಿನಾಂಕದ ಒಳಗಾಗಿ ಮುಗಿಯುವುದು ಅಸಾಧ್ಯ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರತಿನಿಧಿಸಿದ ಶ್ಯಾಮ್ ದಿವಾನ್ ನ್ಯಾಯಪೀಠವನ್ನು ಕೋರಿದರು.




