ಬಿಹಾರ ಚುನಾವಣೆಯಲ್ಲಿನ ಸೋಲಿನ ಬಗ್ಗೆ ತನ್ನ ಮಿತ್ರಪಕ್ಷಗಳಿಗಿಂತ ಸೂಕ್ಷ್ಮವಾಗಿ ಕೊಂಚ ಭಿನ್ನ ನಿಲುವನ್ನು ಹೊಂದಿರುವ ಸಿಪಿಎಂ, ಬಿಜೆಪಿ ವಿರುದ್ಧ ಜಂಟಿಯಾಗಿ ಹೋರಾಟ ನಡೆಸದೆ ಇರುವುದೇ ಎನ್‌ಡಿಎ ಗೆಲುವಿಗೆ ಕಾರಣವಾಗಿರಬಹುದು ಎಂದು ಹೇಳಿದೆ. ಹಾಗೆಯೇ ಚುನಾವಣೆ ಫಲಿತಾಂಶದ ಮೇಲೆ ಚುನಾವಣಾ ಆಯೋಗದ ಪಕ್ಷಪಾತ ವರ್ತನೆ ಮತ್ತು ಹಠಾತ್ ಆಗಿ ನಡೆಸಲಾದ ಎಸ್‌ಐಆರ್ ಪ್ರಕ್ರಿಯೆಯ ಪಾತ್ರವಿದೆಯೇ ಎಂದು ಪರಿಶೀಲಿಸುವುದಾಗಿ ಹೇಳಿದೆ. “ಬಿಜೆಪಿ-ಆರ್‌ಎಸ್‌ಎಸ್‌ನ ‘ಲೆಕ್ಕಾಚಾರದ ರಾಜಕೀಯ ಯೋಜನೆ’ಯೇ ಎಸ್‌ಐಆರ್” ಎಂದು ಸಿಪಿಎಂ ಆರೋಪಿಸಿದೆ.
12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ಬಿಜೆಪಿ-ಆರ್‌ಎಸ್‌ಎಸ್‌ನ ಯೋಜನೆಯಾಗಿದ್ದು ಅದನ್ನು ಜನರು ಒಪ್ಪಿಕೊಳ್ಳುವ ಚುನಾವಣಾ ಆಯೋಗದ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ಲಕ್ಷಾಂತರ ಮತದಾರರ ಹಕ್ಕನ್ನು ಕಸಿಯುವ ಉದ್ದೇಶವನ್ನು ಇದು ಹೊಂದಿದೆ ಎಂದು ದೂರಿದೆ.
ಇದನ್ನು ಓದಿದ್ದೀರಾ? ಬಿಹಾರ | ಬೂತ್ ಮಟ್ಟದ ಪರಿಶೀಲನೆ: ಬಟಾಬಯಲಾದ ಚುನಾವಣಾ ಆಯೋಗ
ಬಿಹಾರ ಚುನಾವಣೆಗಳು, ಎಸ್‌ಐಆರ್ ಮತ್ತು ಇತರ ರಾಜಕೀಯ ಬೆಳವಣಿಗೆಗಳ ಬಗ್ಗೆ ಶನಿವಾರ, ಭಾನುವಾರ ಸಿಪಿಎಂ ಪಾಲಿಟ್ ಬ್ಯುರೋದ ಎರಡು ದಿನಗಳ ಸಭೆ ನಡೆದಿದೆ. ಇಂಡಿಯಾ ಒಕ್ಕೂಟದ ಒಗ್ಗಟ್ಟಿನ ಕೊರತೆಯು ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗಬಹುದು ಎಡಪಕ್ಷದ ಉನ್ನತ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಸಭೆಯ ನಂತರ ಹೊರಡಿಸಲಾದ ಪ್ರಕಟಣೆಯಲ್ಲಿ, 2024ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಎನ್‌ಡಿಎ ಹೆಚ್ಚಿನ ಮತಗಳನ್ನು ಗಳಿಸಿಲ್ಲ. ಆದರೆ ಸ್ಥಾನಗಳ ಸಂಖ್ಯೆ ಹೆಚ್ಚಾಗಿದೆ. ಎನ್‌ಡಿಎ ಇಡೀ ರಾಜ್ಯ ಯಂತ್ರೋಪಕರಣವನ್ನು ಬಳಸಿಕೊಂಡಿದೆ. ಬೃಹತ್ ಪ್ರಮಾಣದ ಹಣವನ್ನು ಬಳಸಿದೆ. ಬಿಹಾರದ ಹೊರಗಿನಿಂದ ಕಾರ್ಯಕರ್ತರನ್ನು ಕರೆಸಿಕೊಂಡಿತ್ತು. ಜತೆಗೆ ಎನ್‌ಡಿಎ ನಾಯಕರು ಕೋಮು ಧ್ರುವೀಕರಣದಿಂದ ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದೆ.
ಸಿಪಿಐಎಂ ಚುನಾವಣೆ ಫಲಿತಾಂಶದ ಮೇಲೆ ಎಸ್‌ಐಆರ್ ಪ್ರಭಾವದ ಬಗ್ಗೆ ಪರಿಶೀಲಿಸುವುದಾಗಿ ಹೇಳಿರುವಾಗ ಕಾಂಗ್ರೆಸ್ ಮತ್ತು ಸಿಪಿಐ(ಎಂಎಲ್)ಎಲ್ ಮತ ಕಳವು ಮತ್ತು ಎಸ್‌ಐಆರ್ ಈ ಸೋಲಿಗೆ ಕಾರಣ ಎಂದು ಆರೋಪಿಸಿದೆ.
ಬಿಹಾರದಲ್ಲಿ ಸಿಪಿಐಎಂ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಗೆದ್ದಿದೆ. ಭಿಬೂತಿಪುರದಲ್ಲಿ ಅಜಯ್ ಕುಮಾರ್ ಜಯ ಸಾಧಿಸಿದ್ದಾರೆ. ಒಟ್ಟಾರೆಯಾಗಿ ಸಿಪಿಐಎಂ ಶೇ.0.60ರಷ್ಟು ಮತ ಗಳಿಸಿದೆ. 2020ರಲ್ಲಿ ಸಿಪಿಐ(ಎಂ) ಸ್ಪರ್ಧಿಸಿದ ನಾಲ್ಕು ಸ್ಥಾನಗಳಲ್ಲಿ ಎರಡನ್ನು ಗೆದ್ದು ಶೇ.0.65ರಷ್ಟು ಮತಗಳನ್ನು ಗಳಿಸಿತ್ತು.





