ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಶುಕ್ರವಾರ (ಜ.9) ವಿಶೇಷ ತನಿಖಾ ತಂಡ (ಎಸ್‌ಐಟಿ) ಶಬರಿಮಲೆ ದೇವಸ್ಥಾನ ‘ತಂತ್ರಿ’ (ಪ್ರಧಾನ ಅರ್ಚಕ) ಕಾಂತರು ರಾಜೀವರ್ ಅವರನ್ನು ಬಂಧಿಸಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿದೆ. ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಈ ಬೆಳವಣಿಗೆ ನಡೆದಿದೆ.
ಪದೇ ಪದೇ ನೋಟಿಸ್ ನೀಡಿದ್ದರೂ ಹಾಜರಾಗಲು ವಿಫಲವಾದ ಕಾರಣ ರಾಜೀವರ್ ಅವರನ್ನು ಬಂಧಿಸಲಾಗಿದೆ. ಪ್ರಧಾನ ಅರ್ಚಕರಿಗೆ ಸಮನ್ಸ್ ನೀಡಿದರೂ ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ಚಿನ್ನದ ದರೋಡೆ ಪ್ರಕರಣದ ವಿಸ್ತೃತ ತನಿಖೆಯ ಭಾಗವಾಗಿ ವಿಚಾರಣೆಗಾಗಿ ಎಸ್‌ಐಟಿ ಅವರನ್ನು ಬಂಧಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ದೇವಸ್ವಂ ಅಧಿಕಾರಿ ಅಮಾನತು
ಈ ನಡುವೆ ಎಸ್‌ಐಟಿ ಈ ಹಿಂದೆ ಸಲ್ಲಿಸಿದ ಎರಡು ಆರೋಪಪಟ್ಟಿಗಳನ್ನು ಒಂದೇ ಪ್ರಕರಣಕ್ಕೆ ಸೇರಿಸಿದೆ. ಎರಡು ಆರೋಪಪಟ್ಟಿಗಳಲ್ಲಿ ಒಟ್ಟು 15 ಆರೋಪಿಗಳ ಹೆಸರಿದೆ. ಇಲ್ಲಿಯವರೆಗೆ, ಎಸ್‌ಐಟಿ 12 ಆರೋಪಿಗಳನ್ನು ಬಂಧಿಸಿದ್ದು, ಅವರೆಲ್ಲರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಅಪರಾಧಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಅಧಿಕಾರ ನೀಡಲಾಗಿದೆ. ಆರಂಭಿಕ ಹಂತದಲ್ಲಿ, ಉನ್ನಿಕೃಷ್ಣನ್ ಪೊಟ್ಟಿ, ಗೋವರ್ಧನ್ ಮತ್ತು ಪಂಕಜ್ ಭಂಡಾರಿ ಸೇರಿದಂತೆ ಪ್ರಮುಖ ಆರೋಪಿಗಳ ಹಣಕಾಸಿನ ವಹಿವಾಟುಗಳನ್ನು ಇಡಿ ಪರಿಶೀಲಿಸುವ ಸಾಧ್ಯತೆಯಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಇಡಿಯ ಈ ಕ್ರಮ ರಾಜಕೀಯ ವಲಯಗಳಲ್ಲಿ ಗಮನ ಸೆಳೆದಿದೆ. ಆಸ್ತಿ ಮುಟ್ಟುಗೋಲು ಅಥವಾ ಕಸ್ಟಡಿ ವಿಚಾರಣೆ ಸೇರಿದಂತೆ ಮುಂದಿನ ಕ್ರಮವು ರಾಜ್ಯದಲ್ಲಿ ವ್ಯಾಪಕ ರಾಜಕೀಯ ಚರ್ಚೆಗೆ ಗ್ರಾಸವಾಗುವ, ಪ್ರಭಾವ ಬೀರುವ ಸಾಧ್ಯತೆಯಿದೆ.





