ಮತಗಳವು ಆರೋಪಕ್ಕೆ ಸಂಬಂಧಿಸಿದಂತೆ ಆಳಂದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿದೆ. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಮಾಡುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
2023ರ ಚುನಾವಣೆಗೂ ಮುನ್ನ ಆಳಂದ ಕ್ಷೇತ್ರದಲ್ಲಿ ಮತ ಡಿಲೀಟ್ ಮಾಡುವ ಯತ್ನ ನಡೆದಿತ್ತು ಎಂದು ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಭಾಷ್ ಗುತ್ತೇದಾರ್ ಮನೆಯಲ್ಲಿ ಶೋಧ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ಕರ್ನಾಟಕದ ಆಳಂದದಲ್ಲಿ 6,000 ಮತಗಳ ‘ಡಿಲೀಟ್’ ಯತ್ನ: ಪುರಾವೆ ಸಹಿತ ವಿವರಿಸಿದ ರಾಹುಲ್ ಗಾಂಧಿ
ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ಅವರ ಮನೆಯ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಸುಭಾಷ್ ಅವರ ಒಡೆತನದ ವೈನ್ ಶಾಪ್ ಸೇರಿದಂತೆ ಹಲವು ಕಡೆದ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಸುಭಾಷ್ ಗುತ್ತೇದಾರ್ ಅವರ ಮಕ್ಕಳ ಮನೆ ಸೇರಿದಂತೆ ಒಟ್ಟು ಮೂರು ಮನೆಗಳಲ್ಲಿ ಶೋಧ ನಡೆಯುತ್ತಿದೆ. ಇದಲ್ಲದೆ ವಿವೇಕಾನಂದ ನಗರದಲ್ಲಿ ಚಾರ್ಟೆಡ್ ಅಕೌಂಟೆಂಟ್ ಮಲ್ಲಿಕಾರ್ಜುನ್ ಮಹಾಂತಗೋಳ ಅವರ ನಿವಾಸದ ಮೇಲೆಯೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಆಳಂದದಲ್ಲಿ ಸುಮಾರು ಆರು ಸಾವಿರ ಮತಗಳ ಡಿಲೀಟ್ ಯತ್ನ ನಡೆದಿದೆ ಎಂದು ಇತ್ತೀಚೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ಆರೋಪಿಸಿದ್ದರು. ಈ ಸಂಬಂಧ ಕೆಲವು ಪುರಾವೆಗಳನ್ನೂ ಬಹಿರಂಗಪಡಿಸಿದ್ದರು.





