ಬಿಜೆಪಿ ಸಂಸದೆ ಕಂಗನಾ ರಣಾವತ್ ಏನಾದರೂ ತಮಿಳುನಾಡಿಗೆ ಬಂದರೆ, ಅವರ ಕಪಾಳಕ್ಕೆ ಹೊಡೆಯಿರಿ. ಕಳೆದ ವರ್ಷ, ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾಗೆ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿ ಕಪಾಳಕ್ಕೆ ಬಾರಿಸಿದ್ದರು. ಅದೇ ರೀತಿ, ನೀವೂ ಮಾಡಬೇಕು ಎಂದು ತಮಿಳುನಾಡಿನ ಕೃಷಿ ಕಾರ್ಮಿಕರಿಗೆ ಕಾಂಗ್ರೆಸ್ ನಾಯಕ ಕೆ.ಎಸ್ ಅಳಗಿರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ, ರೈತ ಮಹಿಳೆಯರನ್ನು ಟೀಕಿಸಿದ್ದ ಕಂಗನಾ, “ಕೃಷಿ ಕೂಲಿ ಕಾರ್ಮಿಕ ಮಹಿಳೆಯರು 100 ರೂ. ಕೊಟ್ಟರೆ ಎಲ್ಲಿಗೆ ಬೇಕಿದ್ದರೂ ಬರುತ್ತಾರೆ ಎಂದಿದ್ದರು.
ಅವರ ಹೇಳಿಕೆಯನ್ನು ಖಂಡಿಸಿರುವ ಅಳಗಿರಿ, “ಕಂಗನಾ ರನೌತ್ ಎಲ್ಲಿಗೆ ಹೋದರೂ, ಅವರು ಕೃಷಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ಎಲ್ಲರನ್ನೂ ‘ನಿಂದಿಸುತ್ತಾರೆ’. ಅವರಿಗೆ ಬುದ್ದಿ ಕಲಿಸಬೇಕೆಂದರೆ, ಅವರ ಕಪಾಳಕ್ಕೆ ಬಾರಿಸಬೇಕು” ಎಂದು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
“ಅವರು ಎಲ್ಲಿಗೆ ಹೋದರೂ ಎಲ್ಲರನ್ನೂ ನಿಂದಿಸುತ್ತಾರೆ. ರೈತರ ವಿರುದ್ಧ ಮಾತನಾಡುತ್ತಾರೆ. ಕೆಲವು ತಿಂಗಳ ಹಿಂದೆ, ಅವರು (ಕಂಗನಾ ರಣಾವತ್) ವಿಮಾನ ನಿಲ್ದಾಣಕ್ಕೆ ಹೋದಾಗ, ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಅವರ ಕಪಾಳಕ್ಕೆ ಹೊಡೆದಿದ್ದರು. ಕಂಗನಾ ಏನಾದರೂ ತಮಿಳುನಾಡಿಗೆ ಬಂದರೆ, ಆಕೆಗೆ ಮಹಿಳಾ ಪೊಲೀಸ್ ಅಧಿಕಾರಿ ಮಾಡಿದಂತೆಯೇ ಕೃಷಿ ಕಾರ್ಮಿಕರು ಕೂಡ ಮಾಡಬೇಕು,. ಆಗ ಮಾತ್ರವೇ, ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಅಳಗಿರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಣಾವತ್, “ಒಬ್ಬ ವ್ಯಕ್ತಿಯ ಹೇಳಿಕೆಯು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ನನ್ನನ್ನು ಪ್ರೀತಿಸುವ ಜನರಿದ್ದಾರೆ. ನಾವು ಎಲ್ಲಿ ಬೇಕಾದರೂ ಹೋಗಬಹುದು. ಯಾರನ್ನೂ ತಡೆಯಲು ಯಾರಿಗೂ ಸಾಧ್ಯವಿಲ್ಲ. ನಾನು ಒಂದು ಸಿನಿಮಾದಲ್ಲಿ ಜೆ ಜಯಲಲಿತಾ ಪಾತ್ರವನ್ನು ನಿರ್ವಹಿಸಿದ್ದೇನೆ. ವಿರೋಧ ಪಕ್ಷದ ಸಂಸದರು ಸಹ ಒಮ್ಮೆ ನನ್ನನ್ನು ‘ತಲೈವಿ’ ಎಂದಿದ್ದಾರೆ” ಎಂದು ಹೇಳಿದ್ದಾರೆ.
2020-21ರಲ್ಲಿ ದೆಹಲಿ ಗಡಿಗಳಲ್ಲಿ ನಡೆದ ರೈತ ಹೋರಾಟದ ವಿರುದ್ಧ ಮಾತನಾಡಿದ್ದರು. ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯ ಕಾರಣಕ್ಕಾಗಿ, ಕಳೆದ ವರ್ಷ ಜೂನ್‌ನಲ್ಲಿ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕಾನ್‌ಸ್ಟೆಬಲ್ ಒಬ್ಬರು ಕಂಗನಾ ಅವರ ಕಪಾಳಕ್ಕೆ ಹೊಡೆದಿದ್ದರು.




