ರಾಜ್ಯದ ಸಾರಿಗೆ ನಿಗಮಗಳ ನೌಕರರ ಹೋರಾಟಕ್ಕೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಬೆಂಬಲ ವ್ಯಕ್ತಪಡಿಸಿದೆ. ಕರ್ನಾಟಕ ರಾಜ್ಯದ ಸಾರಿಗೆ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ತಿಳಿಸಿದೆ.
ರಾಜ್ಯದ ಸಾರಿಗೆ ನಿಗಮಗಳ ನೌಕರರು ಕಳೆದ ಹಲವು ತಿಂಗಳಿನಿಂದ ತಮ್ಮ ವೇತನ ಹಾಗೂ ಇತರ ಹಕ್ಕುಗಳ ಈಡೇರಿಕೆಗೆ ಶಾಂತಿಯುತ ಹೋರಾಟ ನಡೆಸುತ್ತಿದ್ದು, ಈ ಹೋರಾಟವು ಇದೀಗ ಗಂಭೀರ ಹಂತ ತಲುಪಿದೆ. ಜುಲೈ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಉಪವಾಸ ಸತ್ಯಾಗ್ರಹದಲ್ಲಿ ನೌಕರರು ತಮ್ಮ ಆಕ್ರೋಶವನ್ನು ಬಹಿರಂಗಪಡಿಸಿದ್ದರು ಎಂದು ಪತ್ರಿಕಾ ಹೇಳಿಕೆಯಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಹೇಳಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ನೂತನ ಕಚೇರಿ ಉದ್ಘಾಟನೆ
“ಈ ಹಿಂದೆಯೇ, 2024ರ ಡಿಸೆಂಬರ್ 31ರಂದು ನೌಕರರು ನಡೆಸಿದ್ದ ಅನಿರ್ದಿಷ್ಟ ಮುಷ್ಕರವನ್ನು ಸರ್ಕಾರದ ಮನವಿಗೆ ಸ್ಪಂದಿಸಿ ಹಿಂತಿರುಗಿದರೂ, ನಂತರ ನಡೆದ ಸಭೆಗಳಲ್ಲಿ ನೀಡಲಾದ ಭರವಸೆಗಳು ಈವರೆಗೆ ಈಡೇರಿಲ್ಲ. ಇದರ ಪರಿಣಾಮವಾಗಿ ನೌಕರರಲ್ಲಿ ಅಸಮಾಧಾನ ಉಲ್ಬಣಗೊಂಡಿದ್ದು, ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಘೋಷಿಸಿರುವುದರಿಂದ ರಾಜ್ಯದ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗುವ ಅಪಾಯ ಎದುರಾಗಿದೆ. ಸೋಲಿಡಾರಿಟಿ ಯೂತ್ ಮೂವ್ಮೆಂಟ್ – ಕರ್ನಾಟಕ ರಾಜ್ಯದ ಸಾರಿಗೆ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಡಾ. ನಸೀಮ್ ಅಹ್ಮದ್ ಹೇಳಿದ್ದಾರೆ.

“ಆಗಸ್ಟ್ 1ರಂದು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವವನ್ನು ಭೇಟಿ ಮಾಡಿ, ನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ನಮ್ಮ ಸಂಘಟನೆಯ ಬೆಂಬಲವನ್ನು ನೇರವಾಗಿ ವ್ಯಕ್ತಪಡಿಸಿದ್ದೇವೆ. ಸಂಘಟನೆಯ ಪರವಾಗಿ ಈ ಹೋರಾಟಕ್ಕೆ ಸಾಥ್ ನೀಡುವುದಾಗಿ ಸಮಿತಿಗೆ ಭರವಸೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
“ರಾಜ್ಯ ಸರ್ಕಾರ, ನೌಕರರ ಬೇಡಿಕೆಗಳನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಿ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಹಾಗೆಯೇ “ಸಾಮಾಜಿಕ ನ್ಯಾಯ ಮತ್ತು ಕಾರ್ಮಿಕ ಹಕ್ಕುಗಳ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.





