“ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್‌ಚುಕ್ ಬಂಧನವು ಕಾನೂನುಬಾಹಿರವಾಗಿ ನಡೆದಿದೆ. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಈಗಾಗಲೇ ಸರ್ಕಾರದ (ಸಾಲಿಸಿಟರ್ ಜನರಲ್) ಗಮನಕ್ಕೆ ಬಂದಿದೆ. ಆದ್ದರಿಂದ ವಿಚಾರಣೆ ವೇಳೆ ಪ್ರತಿ ಸಲ ಹೊಸ ದಿನಾಂಕ ಕೋರಿ ವಿಚಾರಣೆ ಮುಂದೂಡುವಂತೆ ಮಾಡುತ್ತಿದ್ದಾರೆ” ಎಂದು ಸೋನಮ್ ವಾಂಗ್‌ಚುಕ್ ಪತ್ನಿ ಗೀತಾಂಜಲಿ ಆಂಗ್ಮೋ ಆರೋಪಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಈ ಬಂಧನವು ದೇಶದಲ್ಲಿ ಪ್ರಜಾಪ್ರಭುತ್ವ ಯಾವ ಹಂತದಲ್ಲಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಅಧಿಕಾರಿಗಳ ಕಾರ್ಯವಿಧಾನದ ಲೋಪಗಳಿಂದಾಗಿ ಅವರು ಜೈಲಿನಲ್ಲಿದ್ದಾರೆ. ಇಲ್ಲವಾದಲ್ಲಿ ಈಗಾಗಲೇ ಜೈಲಿನಿಂದ ಹೊರಬರಬೇಕಾಗಿತ್ತು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್‌ಚುಕ್ ಮೇಲೆ ಕೇಂದ್ರದ ಕೆಂಗಣ್ಣೇಕೆ?
ಇನ್ನು ಈ ಸಂದರ್ಭದಲ್ಲೇ ದಂಪತಿ ಜತೆಯಾಗಿ ಸ್ಥಾಪಿಸಿರುವ ಲಡಾಖ್‌ನ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (HIAL) ವಿರುದ್ಧ ಇರುವ ವಿದೇಶಿ ದೇಣಿಗೆ ಪಡೆದ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. “ಇದು ಸಂಪೂರ್ಣವಾಗಿ ಓಪನ್ ಅಂಡ್ ಶಟ್ ಕೇಸ್” ಎಂದಿದ್ದಾರೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು, ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಹಲವು ವರ್ಷಗಳಿಂದ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರದಲ್ಲಿ ಪೊಲೀಸರ ಗುಂಡೇಟಿಗೆ ನಾಲ್ವರು ಬಲಿಯಾದರೆ, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈ ಘಟನೆ ನಡೆದ ಎರಡು ದಿನಗಳಲ್ಲೇ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಪರಿಸರವಾದಿ, ಶಿಕ್ಷಣತಜ್ಞ ವಾಂಗ್‌ಚುಕ್ ಅವರನ್ನು ಸೆಪ್ಟೆಂಬರ್ 26ರಂದು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ. ಸದ್ಯ ವಾಂಗ್‌ಚುಕ್ ಜೋಧ್‌ಪುರ ಜೈಲಿನಲ್ಲಿದ್ದಾರೆ. ವಾಂಗ್‌ಚುಕ್ ಬಂಧನಕ್ಕೆ ಹಲವು ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನ್ನ ವಿರುದ್ಧ ಹೋರಾಡುವವರನ್ನು ಹತ್ತಿಕ್ಕಲು ಎನ್‌ಎಸ್‌ಎ ಕಾಯ್ದೆಯ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಈ ನಡುವೆ ವಾಂಗ್‌ಚುಕ್ ಪತ್ನಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಸೋನಮ್ ವಾಂಗ್‌ಚುಕ್ ಜೈಲು ಸೇರಿ 100 ದಿನ: ಲಡಾಖ್ ಜನರಿಗಾಗಿ ಧ್ವನಿಯೆತ್ತಿ ಮೋದಿ ಶತ್ರುವಾದರೆ?
ಸಂದರ್ಶನದಲ್ಲಿ ಮಾತನಾಡಿದ ಆಂಗ್ಮೋ, “ಇದು ಸೋನಮ್ ವಾಂಗ್‌ಚುಕ್‌ಗೆ ಸಂಬಂಧಿಸಿದ ವಿಚಾರ ಮಾತ್ರವಲ್ಲ. ಈ ದೇಶದ ಪ್ರಜಾಪ್ರಭುತ್ವದ ಸ್ಥಿತಿಯ ಹೇಗಿದೆ ಎಂಬುದನ್ನು ತೋರಿಸುತ್ತದೆ. ಈ ದೇಶದಲ್ಲಿ, ದೇಶಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಅಕ್ರಮವಾಗಿ ಬಂಧಿಸಲು ಅಕ್ರಮವಾಗಿ ಬಂಧಿಸಲು ಅಧಿಕಾರವನ್ನು ದುರುಪಯೋಗ ಮಾಡಲಾಗುತ್ತಿದೆ. ದೇಶಕ್ಕಾಗಿ ಇಷ್ಟೊಂದು ಕೊಡುಗೆ ನೀಡಿದ ಸೋನಮ್‌ಗೆ ಹೀಗೆ ಆಗುವುದಾದರೆ, ಬೇರೆ ಯಾರಿಗಾದರೂ ಈ ರೀತಿ ಅನ್ಯಾಯವಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ವಾಂಗ್‌ಚುಕ್ ಬಂಧನಕ್ಕೆ ನಿರೀಕ್ಷೆಯಷ್ಟು ವಿರೋಧ ವ್ಯಕ್ತವಾಗದಿರುವುದು ನನಗೆ ಸ್ವಲ್ಪ ನಿರಾಶೆಯಾಗಿದೆ. ಆದರೆ ನಾವು ಮೌನವಾಗಿರಲು ಸಾಧ್ಯವಿಲ್ಲ. ನಾವು ಹೆಚ್ಚು ಸಂಯಮದಿಂದ ಮತ್ತು ಜೋರಾದ ಧ್ವನಿಯಲ್ಲಿ ಮಾತನಾಡಬೇಕಾಗಿದೆ, ವಿರೋಧಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.





