2024ರ ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೊ ನ್ಯಾಯಾಲಯವು ಖುಲಾಸೆಗೊಳಿಸಿದೆ. ಮೊಯಿದ್ ಖಾನ್ ಖುಲಾಸೆಗೊಂಡರೂ ಮೊಯಿದ್ ಖಾನ್ ಸೇವಕನಾಗಿ ಕೆಲಸ ಮಾಡುತ್ತಿದ್ದ ರಾಜು ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಎರಡು ವರ್ಷಗಳ ಹಿಂದೆ ಅಂದರೆ 2024ರಲ್ಲಿ ಮೊಯಿದ್ ಖಾನ್ ಬಂಧನವಾಗಿದ್ದು, ಆ ಸಂದರ್ಭದಲ್ಲೇ ಖಾನ್‌ಗೆ ಸೇರಿದ ಕಟ್ಟಡಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ‘ಬುಲ್ಡೋಜರ್’ ಮೂಲಕ ಕೆಡವಿತ್ತು. ಆ ಸಂದರ್ಭದಲ್ಲಿ ಪ್ರಕರಣ ರಾಜಕೀಯವಾಗಿ ತೀವ್ರ ಚರ್ಚೆಗೆ ಒಳಗಾಗಿತ್ತು. ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದರು. ಚುನಾವಣಾ ಪ್ರಚಾರದಲ್ಲಿಯೂ ಎಸ್‌ಪಿ ವಿರುದ್ಧ ವಾಗ್ದಾಳಿ ನಡೆಸಲು ಈ ಪ್ರಕರಣವನ್ನು ಬಳಸಿಕೊಂಡಿದ್ದರು.
ಇದನ್ನು ಓದಿದ್ದೀರಾ? ಅತ್ಯಾಚಾರ ಆರೋಪಿ ಇನ್ನೂ ಏಕೆ ಶಾಸಕರಾಗಿದ್ದಾರೆ?: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಆಕ್ರೋಶ
ಮೊಯಿದ್ ಖಾನ್ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಯೋಗಿ ಸರ್ಕಾರ ಅಯೋಧ್ಯೆಯ ಪುರಕಲಂದರ್ ಪ್ರದೇಶದಲ್ಲಿ ಮೊಯಿದ್ ಖಾನ್ ಅವರಿಗೆ ಸೇರಿದ ಬಹುಮಹಡಿ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಬೇಕರಿ ಸೇರಿದಂತೆ ಅವರ ಆಸ್ತಿಗಳನ್ನು ಕೆಡವಿತ್ತು. ಅದಕ್ಕೂ ಮುನ್ನವೇ ಅಪರಾಧಿಗಳ ವಿರುದ್ಧ ಬುಲ್ಡೋಜರ್ ಕ್ರಮಕೈಗೊಳ್ಳುವುದಾಗಿ ಯೋಗಿ ಆದಿತ್ಯನಾಥ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಿ ತಿಳಿಸಿದ್ದರು. ಆರೋಪಿಗಳ ಆಸ್ತಿ-ಪಾಸ್ತಿ ನಾಶ ಮಾಡುವ, ಈ ಮೂಲಕ ಅವರ ಕುಟುಂಬವನ್ನು ಬೀದಿಪಾಲು ಮಾಡುವ ಬುಲ್ಡೋಜರ್ ನಿಯಮದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆ ಕಟ್ಟಡಗಳು ಅಕ್ರಮ ನಿರ್ಮಾಣ ಎಂದು ಆರೋಪಿಸಿತ್ತು.
ವಿಚಾರಣೆಯ ಸಮಯದಲ್ಲಿ ಗಂಭೀರವಾದ ವಿರೋಧಾಭಾಸಗಳು ಎದ್ದುಕಂಡಿದ್ದವು. ಎಫ್‌ಐಆರ್‌ನಲ್ಲಿ ಅಪರಾಧದ ಸ್ಥಳವನ್ನು ಬೇಕರಿ ಎಂದು ಉಲ್ಲೇಖಿಸಿದ್ದರೂ, ತನಿಖೆ ವೇಳೆ ಮೊಯಿದ್ ಖಾನ್ ಅವರ ಬೇಕರಿಯ ತನಿಖೆಯೇ ಇರಲಿಲ್ಲ. ಹಾಗೆಯೇ ಸಂತ್ರಸ್ತೆ ಆರಂಭದಲ್ಲಿ ಆರೋಪಿ ಹೆಸರು ‘ಮೋಹಿತ್’ ಎಂದು ಹೇಳಿದ್ದು, ಬಳಿಕ ಪೊಲೀಸರ ಒತ್ತಡದಿಂದಾಗಿ ಮೊಯಿದ್ ಖಾನ್ ಹೆಸರು ಹೇಳಿದ್ದಳು ಎಂಬ ಆರೋಪಗಳೂ ಕೇಳಿಬಂದಿತ್ತು. ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಕೂಡಾ ಈ ಆರೋಪ ಮಾಡಿದ್ದರು. ಈ ಆರೋಪದ ಬಳಿಕ ರಾಜಕೀಯವಾಗಿ ಈ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
क्या ‘भेदकारी भाजपा’ के पास कोई ऐसा बुलडोज़र भी है जो लोगों के टूटे घर बना दे, उस पर मान-सम्मान का छप्पर फिर से लगा दे।
— Akhilesh Yadav (@yadavakhilesh) January 30, 2026
अपने ऊपर लगे मुक़दमे तो सत्ताधीश हटवा सकते हैं लेकिन जो पाप उन्होंने किये हैं, उसके मुक़दमे ऊपरवाले की अदालत में लिखे जा रहे हैं, उससे वो कैसे बचेंगे? इतना… pic.twitter.com/EbzFKnn7eE
ಇದೀಗ ನ್ಯಾಯಾಲಯ ಖಾನ್ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದು, ಕೋರ್ಟ್‌ನ ತೀರ್ಪು ಕ್ರಿಮಿನಲ್ ಪ್ರಕರಣಗಳ ರಾಜಕೀಯೀಕರಣ, ಬುಲ್ಡೋಜರ್ ನೀತಿ, ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವ ಮೊದಲೇ ಕಾನೂನು ದುರ್ಬಳಕೆ ಮಾಡಿಕೊಳ್ಳುವ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಖುಲಾಸೆ ಬಳಿಕ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಬುಲ್ಡೋಜರ್ ನ್ಯಾಯ’ವನ್ನು ಪ್ರಶ್ನಿಸಿದ್ದಾರೆ.
“ಅನ್ಯಾಯ ಎಂಬುದು ಬಿಜೆಪಿ ಸರ್ಕಾರದ ಗುರುತಾಗಿದೆ. ಏಕಪಕ್ಷೀಯ, ಪಕ್ಷಪಾತದ ನಡವಳಿಕೆಯೇ ಅಪರಾಧ. ಬಿಜೆಪಿ ಆಡಳಿತದಲ್ಲಿ, ಬುಲ್ಡೋಜರ್ ನ್ಯಾಯ ಇರುವುದು ವಿನಾಶಕಾರಿ ಮನಸ್ಥಿತಿಯ ಸಂಕೇತ. ಬಿಜೆಪಿ ರಾಜಕೀಯವು ಹೇಗೆ ಅನ್ಯಾಯ ಮಾಡುತ್ತಿದೆ ಮತ್ತು ಹೇಗೆ ಸೋಲು ಕಾಣುತ್ತಿದೆ ಎಂಬುದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಜನರ ನೆಲಸಮಗೊಂಡ ಮನೆಗಳನ್ನು ಪುನರ್ನಿರ್ಮಿಸಲು, ಆ ಮನೆಯ ಮೇಲೆ ‘ಘನತೆ ಮತ್ತು ಸ್ವಾಭಿಮಾನ’ ಎಂಬ ಛಾವಣಿಯನ್ನು ಮತ್ತೆ ಹಾಕಲು ಬಿಜೆಪಿ ಬಳಿ ಯಾವುದಾದರೂ ಬುಲ್ಡೋಜರ್ ಇದೆಯೇ” ಎಂದು ಪ್ರಶ್ನಿಸಿದ್ದಾರೆ.
ಇನ್ನು ಮೊಯಿದ್ ಖಾನ್ ಖುಲಾಸೆಗೊಂಡಿದ್ದರೂ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಗದ ಕಾರಣ ಜೈಲಿನಲ್ಲಿಯೇ ಇರಲಿದ್ದಾರೆ.





