ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಭದ್ರತೆ ನೀಡಿದ್ದ ‘ಮನರೇಗಾ’ವನ್ನು ಬುಡಮೇಲು ಮಾಡಿ, ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸತ್ ಅಧಿವೇಶನದಲ್ಲಿ ಮಸೂದೆ ಅಂಗೀಕಾರಗೊಂಡಿದೆ. ಈ ಮಸೂದೆಯು ಜನವಿರೋಧಿ ಮತ್ತು ಕಾರ್ಪೊರೇಟ್ ಪರವಿದೆ ಎಂದು ವಿರೋಧ ವ್ಯಕ್ತವಾಗಿದೆ. ಮಸೂದೆಯ ವಿರುದ್ಧ ಕರ್ನಾಟಕದ ವಿರೋಧವನ್ನು ದಾಖಲಿಸಲು ಮತ್ತು ನಿರ್ಣಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಅಧಿವೇಶನವು ಗುರುವಾರದಿಂದ (ಜ.22) ಬೆಂಗಳೂರಿನ ವಿಧಾನಸೌಧದಲ್ಲಿ ಆರಂಭವಾಗಲಿದೆ. ಜನವರಿ 31ರವರೆಗೆ ನಡೆಯಲಿದೆ.
ಅಧಿವೇಶನದಲ್ಲಿ ಕೇಂದ್ರದ ‘ವಿಬಿ ಜಿ ರಾಮ್ ಜಿ’ ವಿರುದ್ಧ ರಾಜ್ಯ ಸರ್ಕಾರ ಸಮರ ಸಾರಸಲು ಮತ್ತು ಮನರೇಗಾ ಮರುಸ್ಥಾಪನೆಗೆ ಆಗ್ರಹಿಸಲು ಸಜ್ಜಾಗಿದೆ. ಮನ ಸರ್ಕಾರಕ್ಕೆ ಕೌಂಟರ್ ಕೊಡಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟವೂ ತಂತ್ರ ಹೆಣೆಯುತ್ತಿದೆ.
ವರ್ಷದ ಮೊದಲ ಅಧಿವೇಶನವೂ ಇದೇ ಆಗಿರುವುದರಿಂದ, ವಿಶೇಷ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರ ಭಾಷಣದಲ್ಲಿಯೂ ಮನರೇಗಾ ಮತ್ತು ವಿಬಿ ಜಿ ರಾಮ್ ಜಿ ಕುರಿತ ಉಲ್ಲೇಖ ಮತ್ತು ವಿರೋಧ ಇರುವ ಸಾಧ್ಯತೆ ಇದ್ದು, ಉದ್ಯೋಗ ಖಾತರಿ ಯೋಜನೆ ಕುರಿತಾದ ಭಾಷಣವನ್ನು ಓದದಂತೆ ರಾಜ್ಯಪಾಲರಿಗೆ ಮನವಿ ಮಾಡಲು ಬಿಜೆಪಿ ಮುಂದಾಗಿದೆ.
ರಾಜ್ಯಪಾಲರ ಭಾಷಣದ ನಂತರ, ಶುಕ್ರವಾರದ ಕಲಾಪದಲ್ಲಿ ಇತ್ತೀಚಿಗೆ ಮೃತಪಟ್ಟ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ ಸೇರಿದಂತೆ ಗಣ್ಯರಿಗೆ ಸಂತಾಪ ಸಲ್ಲಿಸಲಿದೆ. ಸಂತಾಪ ಭಾಷಣಗಳು ಮುಗಿದ ಬಳಿಕ, ಬಹುಶಃ, ಸೋಮವಾರದಿಂದ ಮನರೇಗಾ ಮತ್ತು ಹೊಸ ವಿಬಿ ಜಿ ರಾಮ್ ಜಿ ಕುರಿತ ಚರ್ಚೆಗಳು, ಜಾಟಾಪಟಿಗಳು ಆರಂಭವಾಗುವ ಸಾಧ್ಯತೆಗಳಿವೆ.
ಅಧಿವೇಶನದ ಕುರಿತು ಮಾತನಾಡಿರುವ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ ಪಾಟೀಲ್, “ಜನಹಿತ ಮತ್ತು ರಾಜ್ಯಗಳ ಹಿತ ಕಾಪಾಡಲು ಸರ್ಕಾರವು ಸೂಕ್ತವಾದ ಹೆಜ್ಜೆ ಇಡಲು ಮುಂದಾಗಿದೆ. ರಾಜ್ಯಗಳು ಮತ್ತು ಜನರ ಹಕ್ಕನ್ನು ಕಿತ್ತುಕೊಳ್ಳಲು ಕೇಂದ್ರವು ಯತ್ನಿಸುತ್ತಿದೆ. ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ, ರಾಜ್ಯ ಮತ್ತು ಜನರ ಹಕ್ಕು ಕಸಿದುಕೊಳ್ಳಲು ಯತ್ನಿಸುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ. ಅದನ್ನು ನೋಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
“ವಿಬಿ ಜಿ ರಾಮ್ ಜಿ ವಿರುದ್ಧ ಆರು/ಏಳು ರಾಜ್ಯಗಳು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿವೆ. ಮನರೇಗಾ ಕಾಯ್ದೆಯಡಿ ಕೇವಲ ಕೆಲಸ ಕೊಡುವುದು ಮಾತ್ರವಲ್ಲ, ಕೆಲಸ ಕೊಡದಿದ್ದರೆ, ಫಲಾನುಭವಿಗಳಿಗೆ ಉದ್ಯೋಗ ಭತ್ಯೆಯನ್ನೂ ಕೇಳಬಹುದಿತ್ತು. ಪಂಚಾಯಿತಿಗಳಿಗೆ ಕೆಲಸಗಳ ಬಗ್ಗೆ ತೀರ್ಮಾನಿಸುವ ಹಕ್ಕು ಇತ್ತು. ಕಾಯ್ದೆಯಡಿ ಉದ್ಯೋಗ ಖಾತರಿ ಯೋಜನೆಗೆ 90% ಅನುದಾನವನ್ನು ಕೇಂದ್ರವೇ ಭರಿಸುತ್ತಿತ್ತು. ಆದರೆ, ಹೊಸ ಕಾಯ್ದೆಯಡಿ ಪಂಚಾಯಿತಿಗಳಿಗೆ ಅಧಿಕಾರವಿಲ್ಲ. ಯೋಜನೆಯು ಪಂಚಾಯಿತಿಗಳ ವ್ಯಾಪ್ತಿಗೂ ಬರುವುದಿಲ್ಲ. ಕೇಂದ್ರ ಸರ್ಕಾರವೇ ಯಾವ ಭಾಗದಲ್ಲಿ ಕಾಮಗಾರಿ ನಡೆಸಬೇಕು, ಎಷ್ಟು ಉದ್ಯೋಗ ನೀಡಬೇಕೆಂದು ನಿರ್ಧರಿಸುತ್ತದೆ. ಜೊತೆಗೆ, ಅನುದಾನವನ್ನು 60%ಗೆ ಕಡಿತಗೊಳಿಸಿದ್ದು, ರಾಜ್ಯಗಳ ಮೇಲೆ 40% ಹೊರೆ ಹೇರಿದೆ. ಇದು ಒಕ್ಕೂಟ ವ್ಯವಸ್ಥೆಗೂ, ಜನರ ಹಿತಕ್ಕೂ ವಿರೋಧಿಯಾಗಿದೆ” ಎಂದು ಹೇಳಿದ್ದಾರೆ.
“ವಿಬಿ ಜಿ ರಾಮ್ ಜಿ ಕಾಯ್ದೆಯು ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತದೆ. ಪಂಜಾಯತಿಗಳ ಅಧಿಕಾರವನ್ನು ಕಡಿತಗೊಳಿಸುತ್ತದೆ. ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ಕೊಡಲಿ ಏಟು ನೀಡುತ್ತದೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಗಾಜಾ ಶಾಂತಿ ಮಂಡಳಿ | ಭಕ್ಷಕನೇ ರಕ್ಷಕನ ರೂಪದಲ್ಲಿರುವುದು ಎಷ್ಟು ಸರಿ?
“ಹೊಸ ಕಾಯ್ದೆಯ ಕುರಿತು ವಿಶೇಷ ಚರ್ಚೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ಕಾರ ನಿರ್ಧರಿಸಿದೆ. ಜನರೊಂದಿಗೆ ನೆಲದಲ್ಲಿಯೂ, ಕಾನೂನಿನ ಮೂಲಕ ನ್ಯಾಯಾಲಯದಲ್ಲಿಯೂ ಸರ್ಕಾರವು ಹೋರಾಟ ನಡೆಸಲು ತೀರ್ಮಾನಿಸಿದೆ. ಜನರಿಗೆ ಅನ್ಯಾಯ ಮಾಡುವ ಈ ಕಾನೂನನ್ನು ರಾಜ್ಯ ಬಿಜೆಪಿ ಒಪ್ಪಬಾರದಿತ್ತು. ಜನರ ಹಿತ ಕಾಪಾಡಬೇಕೆಂಬ ಉದ್ದೇಶ ಬಿಜೆಪಿಗರಿಗಿದ್ದರೆ, ಈ ರೀತಿಯ ಕರಾಳ ಕಾನೂನು ರೂಪಿಸಿದಾಗ, ಅದರ ಅನಾನುಕೂಲತೆಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿತ್ತು” ಎಂದಿದ್ದಾರೆ.
ವಿಶೇಷ ಅಧಿವೇಶನದಲ್ಲಿ ‘ವಿಬಿ ಜಿ ರಾಮ್ ಜಿ’ ವಿರುದ್ಧ ಸರ್ಕಾರವು ಅಬ್ಬರಿಸುವುದರ ಜೊತೆಗೆ, ರಾಜ್ಯ ಬಿಜೆಪಿಯನ್ನೂ ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದೆ. ಕೇಂದ್ರದ ಹೊಸ ಕಾಯ್ದೆ ವಿರುದ್ಧ ಖಂಡನಾ ನಿರ್ಣಯ ಪಾಸ್ ಮಾಡುವ ಸಾಧ್ಯತೆ ಇದೆ.
ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಕೂಡ ಸರ್ಕಾರದ ನಿರ್ಣಯಕ್ಕೆ ಕೌಂಟರ್ ಕೊಡಲು ಮುಂದಾಗಿವೆ. ವಿಬಿ ಜಿ ರಾಮ್‌ಜಿ ಕಾಯ್ದೆಯು ಜನಪರವಾಗಿದೆ, ಹಲವು ಲಾಭಗಳಿವೆ ಎಂದು ವಾದಿಸಲು ಮುಂದಾಗಿದೆ. ಜೊತೆಗೆ, ಭ್ರಷ್ಟಾಚಾರ, ಕಾನೂನು-ಸುವ್ಯವಸ್ಥೆ, ಕೋಗಿಲು ಬಡಾವಣೆ ಸಂತ್ರಸ್ತರಿಗೆ ಸರ್ಕಾರದ ನೆರವು ಸೇರಿದಂತೆ ನಾನಾ ವಿಚಾರಗಳನ್ನು ಪ್ರಸ್ತಾಪಿಸುವ ಸಾಧ್ಯತೆಗಳಿವೆ.




