ಭಿನ್ನಾಭಿಪ್ರಾಯ ಹತ್ತಿಕ್ಕಲು ಲಡಾಖ್ ಹೋರಾಟಗಾರರ ಸೋನಮ್ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅವರ ಪತ್ನಿ ಗೀತಾಂಜಲಿ ಜೆ ಅಂಗ್ಮೋ ಆರೋಪಿಸಿದ್ದಾರೆ.
ತಮ್ಮ ಪತಿ ಸೋನಮ್ ಬಂಧನವನ್ನು ಪ್ರಶ್ನಿಸಿ ಗೀತಾಂಜಲಿ ಅವರು ಸಲ್ಲಿಸಿದ್ದ ತಿದ್ದುಪಡಿ ಮಾಡಿದ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ. ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್‌ವಿ ಅಂಜಾರಿಯಾ ಅವರ ಪೀಠದ ಮುಂದೆ ವಾದ ಮಂಡಿಸಿದ ಗೀತಾಂಜಲಿ ಅವರು, “ಬಂಧನ ಆದೇಶ ಸಂಪೂರ್ಣವಾಗಿ ಅಕ್ರಮವಾಗಿದೆ. ಹಳೆಯ, ಅಪ್ರಸ್ತುತ ಎಫ್‌ಐಆರ್‌ಗಳನ್ನು ಈ ಬಂಧನ ಆದೇಶದಲ್ಲಿ ಉಲ್ಲೇಖಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಲಡಾಖ್ ಹಿಂಸಾಚಾರಕ್ಕೆ ಸೋನಮ್ ವಾಂಗ್‌ಚುಕ್ ಪ್ರಚೋದನಾಕಾರಿ ಹೇಳಿಕೆ ಕಾರಣ: ಕೇಂದ್ರ ಸರ್ಕಾರ
“ಎಫ್‌ಐಆರ್‌ಗಳಲ್ಲಿ ಮೂರು 2024ಕ್ಕೆ ಸಂಬಂಧಿಸಿದೆ. 2025ರ ಸೆಪ್ಟೆಂಬರ್‌ನಲ್ಲಿ ವಾಂಗ್‌ಚುಕ್ ಬಂಧನಕ್ಕೆ ಯಾವುದೇ ನಿಕಟ, ತಾರ್ಕಿಕ ಸಂಬಂಧವಿಲ್ಲ. ಇದಲ್ಲದೆ ಒಟ್ಟು ಐದು ಎಫ್‌ಐಆರ್‌ಗಳಲ್ಲಿ ನಾಲ್ಕು ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಾಗಿರುವಂತದ್ದು. ವಾಂಗ್‌ಚುಕ್ ಹೆಸರು ಆ ಎಫ್‌ಐಆರ್‌ಗಳಲ್ಲಿ ಇಲ್ಲ” ಎಂದು ತಿಳಿಸಿದ್ದಾರೆ.
ಇನ್ನು ವಾದ ಆಲಿಸಿದ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ. ಅಗತ್ಯವಿದ್ದರೆ ಸೋನಮ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮರುಪ್ರತ್ಯಾರೋಪ ಸಲ್ಲಿಸಲು ನ್ಯಾಯಾಲಯವು ಅವಕಾಶ ನೀಡಿದೆ.
ವಾಂಗ್‌ಚುಕ್ ಅವರ ಬಂಧನವನ್ನು ಪ್ರಶ್ನಿಸಿ ಹೆಚ್ಚುವರಿ ಆಧಾರಗಳೊಂದಿಗೆ ತಿದ್ದುಪಡಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡುವಂತೆ ಆಂಗ್ಮೋ ಅಕ್ಟೋಬರ್ 15ರಂದು ಕೋರಿದ್ದರು. ಇದಾದ ನಂತರ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಸದ್ಯ ಸೋನಮ್ ಅವರು ರಾಜಸ್ಥಾನದ ಜೋಧ್‌ಪುರ ಕೇಂದ್ರ ಜೈಲಿನಲ್ಲಿದ್ದಾರೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ 6ನೇ ಪರಿಚ್ಚೇದಕ್ಕೆ ಸೇರಿಸುವಂತೆ ಆಗ್ರಹಿಸಿ ವಾಂಗ್‌ಚುಕ್ ಹಲವು ಬಾರಿ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ನಡೆಸಿದ್ದಾರೆ. ಸೆಪ್ಟೆಂಬರ್ 24ರಂದು ಲೇಹ್‌ನಲ್ಲಿ ಪ್ರತಿಭಟನಾ ಸ್ಥಳದ ಹೊರಭಾಗದಲ್ಲಿ ಹಿಂಸಾಚಾರ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸೆ.26ರಂದು ಸೋನಮ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ.





