ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪನಾಯಕ ನಿಧನದಿಂದಾಗಿ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆಗೆ ಉಪಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.
ಮೇ 7 ರಂದು ಉಪಚುನಾವಣೆ ನಡೆಯುತ್ತಿದ್ದು, ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್‌ನಿಂದ ನಿರೀಕ್ಷೆಯಂತೆ ದಿವಂಗತ ರಾಜಾ ವೆಂಕಟಪ್ಪನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಟಿಕೆಟ್ ನೀಡಲಾಗಿದೆ.
ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆಯ ಉಪಚುನಾವಣೆ ನಡೆಯಲಿದೆ. ಹೀಗಾಗಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ 25 ಸಾವಿರ ಮತಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದರು. ಆಗ ಇವರ ವಿರುದ್ಧ ರಾಜೂಗೌಡ ಸೋಲು ಅನುಭವಿಸಿದ್ದರು. ಮತ್ತೆ ಈಗ ಅಖಾಡದಲ್ಲಿದ್ದಾರೆ.
ರಾಜಾ ವೇಣುಗೋಪಾಲ ನಾಯಕ ಅವರಿಗೆ ತಂದೆ ಅಗಲಿಕೆಯ ಅನುಕಂಪ ಕೈಹಿಡಿಬಹುದು ಎಂದು ಸ್ಥಳೀಯವಾಗಿ ಮಾತುಗಳು ಕೇಳಿಬರುತ್ತಿವೆ.





