ತಮಿಳುನಾಡು ವಿಧಾನಸಭಾ ಚುನಾವಣಾ ಕಣ ಗರಿಗೆದರಿದೆ. ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಆದಾಗ್ಯೂ, ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್-ಡಿಎಂಕೆ ನಡುವೆ ತಿಕ್ಕಾಟ ನಡೆಯುತ್ತಿದೆ. ಇನ್ನು, ಎಐಎಡಿಎಂಕೆ-ಬಿಜೆಪಿ ನೇತೃತ್ವದ ಎನ್‌ಡಿಎ ಹೇಗಾದರೂ ಅಧಿಕಾರವನ್ನು ಮರಳಿ ಪಡೆಯುವ ತಂತ್ರ ಹೆಣೆಯುತ್ತಿವೆ. ಬಿಜೆಪಿ ತನ್ನ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದೆ. ಇನ್ನು, ನಟ ವಿಜಯ್ ಅವರ ಹೊಸ ಪಕ್ಷ ಟಿವಿಕೆ ಕೂಡ ಪ್ರಬಲ ಸ್ಪರ್ಧೆಯೊಡ್ಡಲಿದ್ದು, ಈ ಬಾರಿಯ ಚುನಾವಣೆಯು ‘ತ್ರಿಕೋನ ಸ್ಪರ್ಧೆ’ಯಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಈ ನಡುವೆ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರು ಹೊಸ ಪಕ್ಷ ಘೋಷಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದೊಳಗೆ ಚುನಾವಣಾ ಸಿದ್ದತೆಗಳು ಚುರುಕುಗೊಂಡಿವೆ. ಎಲ್ಲ ರಾಜ್ಯ ಚುನಾವಣೆಗಳಲ್ಲೂ ಎನ್‌ಡಿಎ ಮೈತ್ರಿಯ ಭಾಗವಾಗಿ ಬಿಜೆಪಿಯೇ ಚುನಾವಣಾ ಭರವಸೆಗಳನ್ನು ಘೋಷಿಸುತ್ತಿತ್ತು. ಆದರೆ, ತಮಿಳುನಾಡಿನಲ್ಲಿ ಎಐಎಡಿಎಂಕೆಯನ್ನು ಮುಂದೆ ಬಿಟ್ಟು, ಹಿಂದಿನಿಂದ ಬಿಜೆಪಿ ಚುನಾವಣಾ ಕಣಕ್ಕೆ ಇಳಿದಿದೆ. ಎನ್‌ಡಿಎ ಪರವಾಗಿ ಎಐಎಡಿಎಂಕೆ ಚುನಾವಣಾ ಭರವಸೆಗಳು ಮತ್ತು ಗ್ಯಾರಂಟಿ ಯೋಜನೆಗಳ ಭರವಸೆಗಳನ್ನು ಪ್ರಕಟಿಸುತ್ತಿದೆ. ಇದು, ರಾಜಕೀಯ ತಂತ್ರವೆಂದೇ ಪರಿಗಣಿಸಲಾಗಿದೆ.
ಈವರೆಗೆ, ಎಐಎಡಿಎಂಕೆ ಮೂರು ಹಂತಗಳಲ್ಲಿ ತನ್ನ ಚುನಾವಣಾ ಭರವಸೆಗಳನ್ನು ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ (ಜನವರಿ) ಪ್ರತಿ ಕುಟುಂಬದ ಹಿರಿಯ ಮಹಿಳಾ ಸದಸ್ಯೆಗೆ ಮಾಸಿಕ 2,000 ರೂ. ನೇರ ಹಣ ಸಹಾಯ ನೀಡುವ ‘ಕುಲ ವಿಳಕ್ಕು ಯೋಜನೆ’, ನಗರ ಬಸ್‌ಗಳಲ್ಲಿ ಪುರುಷರಿಗೂ ಉಚಿತ ಪ್ರಯಾಣ, ‘ಅಮ್ಮ ಇಲ್ಲಂ ಯೋಜನೆ’ಯಡಿ ಹಿಂದುಳಿದವರಿಗೆ ಮನೆ, 100 ದಿನಗಳ ಉದ್ಯೋಗ ಖಾತರಿಯನ್ನು 150 ದಿನಗಳಿಗೆ ಹೆಚ್ಚಿಸುವುದು, ‘ಅಮ್ಮ ಇರುಸಕ್ಕರ ವಾಹನ ಯೋಜನೆ’ಯಡಿ 25,000 ರೂ. ಮೌಲ್ಯದ ಉಚಿತ ಸ್ಕೂಟರ್ ಮುಂತಾದ ಭರವಸೆಗಳನ್ನು ಘೋಷಿಸಲಾಗಿತ್ತು.
ಎರಡನೇ ಹಂತದಲ್ಲಿ (ಫೆಬ್ರವರಿ) ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ಒತ್ತು ನೀಡಿರುವ ಎನ್‌ಡಿಎ, ವೃದ್ಧರು, ವಿಧವೆಯರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಪಿಂಚಣಿಯನ್ನು 1,200ರಿಂದ 2,000 ರೂ.ಗೆ ಹೆಚ್ಚಿಸುದಾಗಿಯೂ, ಶಿಕ್ಷಣ ಸಾಲಗಳನ್ನು ಮನ್ನಾ ಮಾಡುವುದಾಗಿಯೂ, ಕುಟುಂಬಗಳಿಗೆ ವಾರ್ಷಿಕ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಒದಗಿಸುವುದಾಗಿಯೂ ಭರವಸೆ ನೀಡಿತ್ತು.
ಇದೀಗ, ಮೂರನೇ ಹಂತದಲ್ಲಿ ನಿನ್ನೆ (ಫೆ.24– ಜಯಲಲಿತಾ ಅವರ ಜನ್ಮದಿನ) ಅತ್ಯಂತ ದೊಡ್ಡ ಘೋಷಣೆಗಳನ್ನು ಎಐಎಡಿಎಂಕೆ ಪ್ರಕಟಿಸಿದೆ. ‘ಕರುಣಾ ಥೊಗೈ’ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಒಂದೇ ಬಾರಿಗೆ 10,000 ರೂ. ನಗದು ವರ್ಗಾವಣೆ ಮಾಡುವುದಾಗಿ ಘೋಷಿಸಿದೆ. ಇದು ಡಿಎಂಕೆ ಆಡಳಿತದಲ್ಲಿ ಏರಿಕೆಯಾಗಿರುವ ಪೆಟ್ರೋಲ್, ವಿದ್ಯುತ್, ನೀರು ತೆರಿಗೆ, ಆಸ್ತಿ ತೆರಿಗೆಗಳ ಭಾರವನ್ನು ತಗ್ಗಿಸಲು ನೆರವಾಗುತ್ತದೆ ಎಂದು ಎಐಎಡಿಎಂಕೆ ಹೇಳಿಕೊಂಡಿದೆ.
ಇದಲ್ಲದೆ, ನಿರುದ್ಯೋಗಿ ಪದವೀಧರರಿಗೆ 2,000 ರೂ., 12ನೇ ತರಗತಿ ಮುಗಿಸಿರುವ ನಿರುದ್ಯೋಗಿಗಳಿಗೆ 1,000 ರೂ. ಮಾಸಿಕ ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿದೆ. ಮೀನುಗಾರರಿಗೆ ಮೀನುಗಾರಿಕೆ ನಿರ್ಬಂಧದ ಅವಧಿಯಲ್ಲಿ ನೀಡಲಾಗುವ ಸಹಾಯಧನವನ್ನು 8,000ದಿಂದದ 12,000 ರೂ.ಗೆ ಹೆಚ್ಚಳ, ಕೈಮಗ್ಗ ನೇಕಾರರಿಗೆ ಉಚಿತ ವಿದ್ಯುತ್ 300ರಿಂದ 450 ಯೂನಿಟ್‌ಗೆ ಏರಿಕೆ, ವಿದ್ಯುತ್ ಮಗ್ಗ ನೇಕಾರಿಕೆಗೆ ಹೆಚ್ಚುವರಿ 400 ಯೂನಿಟ್ ವಿದ್ಯುತ್ ಒದಗಿಸುವುದಾಗಿ ಭರವಸೆ ನೀಡಿದೆ. ಇನ್ನು, ಪೊಂಗಲ್ ಹಬ್ಬದ ಸಮಯದಲ್ಲಿ ಪಡಿತರದಾರರಿಗೆ 1,000 ರೂ. ನಗದು ನೀಡುವುದಾಗಿಯೂ, ನಗರದ ಸಣ್ಣ ವ್ಯಾಪಾರಿಗಳ ಸಹಕಾರಿ ಬ್ಯಾಂಕ್ ಸಾಲ ಮನ್ನಾ ಮಾಡುವುದಾಗಿಯೂ ಎಐಎಡಿಎಂಕೆ ಘೋಷಿಸಿದೆ.
ಈ ಎಲ್ಲಾ ಘೋಷಣೆಗಳನ್ನುಎಐಎಡಿಎಂಕೆ ಅಧ್ಯಕ್ಷ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೇ ಘೋಷಿಸಿದ್ದಾರೆ. ಅದೂ, ಹಲವು ಭರವಸೆಗಳು ಎಐಎಡಿಎಂಕೆ ನಾಯಕ ಹೆಸರಿನೊಂದಿಗೆ ಬೆಸೆದುಕೊಂಡಿವೆ. ಘೋಷಣೆಯ ವೇಳೆ ಬಿಜೆಪಿಗರು ಪಳನಿಸ್ವಾಮಿ ಅವರೊಂದಿಗೆ ಇರಲಿಲ್ಲ. ಯಾವುದೇ ಘೋಷಣೆಯಲ್ಲೂ ಬಿಜೆಪಿಯ ರಾಷ್ಟ್ರ ನಾಯಕರ ಹೆಸರುಗಳು ತಳುಕು ಹಾಕಿಕೊಂಡಿಲ್ಲ. ಇದು ಬಿಜೆಪಿಯ ಚುನಾವಣಾ ತಂತ್ರದ ಭಾಗವೇ ಆಗಿದೆ.
ತಮಿಳುನಾಡಿನ ರಾಜಕೀಯ ಸಂಸ್ಕೃತಿಯಲ್ಲಿ ‘ದ್ರಾವಿಡ ಗುರುತು’ ತುಂಬಾ ಬಲವಾಗಿದೆ. ತಮಿಳುನಾಡಿನ ಜನರು ಬಿಜೆಪಿಯನ್ನು ‘ಹಿಂದಿ ಹೇರಿಕೆಯ ಪಕ್ಷ’, ‘ಉತ್ತರ ಭಾರತದ ಪಕ್ಷ’ ಹಾಗೂ ‘ದೆಹಲಿ ಏಜೆಂಟ್ʼ ಎಂದೇ ನೋಡುತ್ತಾರೆ. ಆದ್ದರಿಂದ, ಬಿಜೆಪಿಯೇ ಬೃಹತ್ ಭರವಸೆಗಳನ್ನು ಘೋಷಿಸರೂ, ಅದು ತಮಿಳು ಜನರ ಮನ ಗೆಲ್ಲುವಲ್ಲಿ ಫಲಿಸುವುದಿಲ್ಲ ಎಂಬುದು ಸ್ಪಷ್ಟ. ಜೊತೆಗೆ, ‘ಬಾಹ್ಯ ಶಕ್ತಿ (ಬಿಜೆಪಿ) ತಮಿಳು ಜನರ ಹಣದೊಂದಿಗೆ ಆಟವಾಡುತ್ತಿದೆ’ ಎಂದು ಡಿಎಂಕೆ ಪ್ರತಿನಿರೂಪಣೆ ಹೆಣೆಯುತ್ತದೆ. ಆದ್ದರಿಂದ ಬಿಜೆಪಿ ತನ್ನ ಹೆಸರನ್ನು ಮರೆಯಲ್ಲಿಟ್ಟು, ಸ್ಥಳೀಯ ದ್ರಾವಿಡ ಪರಂಪರೆಯ ಗುರುತು ಹೊಂದಿರುವ ಎಐಎಡಿಎಂಕೆಯನ್ನು ಮುಂದಿಟ್ಟುಕೊಂಡಿದೆ.
ಎಐಎಡಿಎಂಕೆಗೆ ರಾಜ್ಯದಾದ್ಯಂತ ಬೂತ್ ಮಟ್ಟದ ಸಂಘಟನೆ, ಜಾತಿ ಸಮೀಕರಣಗಳಲ್ಲಿ, ವಿಶೇಷವಾಗಿ ಥೆವರ್, ಗೌಂಡರ್ ಸಮುದಾಯಗಳಲ್ಲಿ ಬಲವಾದ ಪ್ರಭಾವವಿದೆ. ಇದರಿಂದ ಎನ್‌ಡಿಎಗೆ ವಿಶ್ವಾಸಾರ್ಹತೆ ಗಳಿಸಲು ಸಾಧ್ಯವಾಗುತ್ತದೆ.
ಈ ಲೇಖನ ಓದಿದ್ದೀರಾ?: ಮಧ್ಯ ಪ್ರದೇಶ | ₹400 ಕೋಟಿ ವೆಚ್ಚದ ಮೇಲ್ಸೇತುವೆ ಮೂರೇ ವರ್ಷದಲ್ಲಿ ಕುಸಿತ: ಬಯಲಾದ ‘ಡಬಲ್ ಎಂಜಿನ್’ ಸರ್ಕಾರಗಳ ಕಳಪೆ ಕಾಮಗಾರಿ
ಇನ್ನೊಂದು ಮುಖ್ಯ ಅಂಶವೆಂದರೆ, ತಮಿಳುನಾಡಿನಲ್ಲಿ ಕಳೆದ 10-15 ವರ್ಷಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ನೇರ ಹಣಾಹಣಿಯಲ್ಲಿವೆ. ತಮಿಳುನಾಡಿನಲ್ಲಿ ಎನ್‌ಡಿಎಯಲ್ಲಿ ಎಐಎಡಿಎಂಕೆಯೇ ಪ್ರಬಲ ಮತ್ತು ಪ್ರಭಾವಿ ಪಕ್ಷ. ಹೀಗಿರುವಾಗ, ಎಐಎಡಿಎಂಕೆಯನ್ನು ಹಿಂದೆ ಸರಿಸಿ, ಬಿಜೆಪಿ ಮುಖ್ಯ ವೇದಿಕೆಯಲ್ಲಿ ಆಟವಾಡಲು ಸಾಧ್ಯವೇ ಇಲ್ಲ. ಇದು, ಬಿಜೆಪಿ ಮಾತ್ರವಲ್ಲ, ಇಡೀ ಎನ್‌ಡಿಎ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡುತ್ತದೆ. ಮಾತ್ರವಲ್ಲ, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುವ ಪಕ್ಷವೂ ಎಐಎಡಿಎಂಕೆಯೇ ಆಗಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸುಮಾರು 30 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದೆ. ಆದರೆ, 2021ರ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 4 ಕ್ಷೇತ್ರಗಳನ್ನು ಮಾತ್ರವೇ ಗೆದ್ದಿತ್ತು. ಆದ್ದರಿಂದ, ಈ ಬಾರಿ 30 ಸ್ಥಾನಗಳನ್ನು ಬಿಟ್ಟುಕೊಡಲು ಎನ್‌ಡಿಎ ಮಿತ್ರಪಕ್ಷಗಳು ಸಿದ್ದವಿಲ್ಲ ಎಂಬ ಚರ್ಚೆಗಳಿವೆ.
ಈ ಪರಿಸ್ಥಿತಿಯಲ್ಲಿ, ಬಿಜೆಪಿಗೆ ತನ್ನ ಪ್ರಭಾವವನ್ನು ದಕ್ಷಿಣ ಭಾರತದಲ್ಲಿ ವಿಸ್ತರಣೆ ಮಾಡಿಕೊಳ್ಳುವುದು ಮೊದಲ ಆದ್ಯತೆಯಾಗಿದೆ. ಆದ್ದರಿಂದ, ತಮಿಳುನಾಡಿನಲ್ಲಿ ಸ್ಥಳೀಯ ಗುರುತನ್ನು ಉಳಿಸಿಕೊಂಡು, DMK ವಿರೋಧಿ ಅಲೆ ಸೃಷ್ಟಿಸಿ, ಭವಿಷ್ಯದಲ್ಲಿ ಸ್ವತಃ ಬಲವಾಗಿ ಬೆಳೆಯವುದು ಬಿಜೆಪಿಯ ದೀರ್ಘಕಾಲೀನ ತಂತ್ರವೂ ಆಗಿದೆ.




